ಬಿಜೆಪಿ ಸರಕಾರ ಇದ್ದಾಗ ದೇವಲಗಾಣಗಾಪೂರ ಸಹ ವಕ್ಫ್ ಅಂತ ಕ್ಲೇಮ್ ಮಾಡಿದ್ರು. ಕ್ಲೇಮ್ ಮಾಡಿದ ತಕ್ಷಣ ಅವರ ಹೆಸರಿಗೆ ಆಗಿ ಬಿಡುತ್ತದಾ?. ಯಾವುದೇ ರೈತರಿಗೆ ಅನ್ಯಾಯ ಆಗಲು ಬಿಡಲ್ಲಾ ಅಂತ ಸಿಎಂ ಮತ್ತು ಕಂದಾಯ ಸಚಿವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ(ಅ.31): ಯಾವುದೋ ಸಂಸ್ಥೆ ಕ್ಲೇಮ್ ಮಾಡಿದಾಕ್ಷಣ ಅವರದ್ದಾಗಲು ಸಾಧ್ಯವಿಲ್ಲ. ಹಿಂದಿನ ಸರ್ಕಾರದಲ್ಲೂ ಇದು ಆಗಿದೆ ಈಗ ಯಾಕೆ ಹೈಲೈಟ್ ಮಾಡುತ್ತಿದ್ದಾರೋ ಗೊತ್ತಿಲ್ಲ. ನಮ್ಮ ಸರಕಾರ ಬರುವ ಮುನ್ನವೇ ನಮ್ಮ ಜಿಲ್ಲೆಯಲ್ಲಿ 100 ವಕ್ಫ್ ಆಸ್ತಿ ಬೇಡಿಕೆ ಇತ್ತು. ನಾವು ಇದೆಲ್ಲಿ ಒಂದಾದ್ರೂ ಮಾಡಿದಿವಾ?. ಈಗ ಚುನಾವಣೆ ಬಂದಿದೆ ಅಂತ ಬಿಜೆಪಿಯವರು ಹೀಗೆ ಮಾಡ್ತಿದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಕ್ಫ್ ಬೋರ್ಡ್ ಹೆಸರು ರೈತರ ಪಹಣಿಗಳಲ್ಲಿ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಗುರುವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಸರಕಾರ ಇದ್ದಾಗ ದೇವಲಗಾಣಗಾಪೂರ ಸಹ ವಕ್ಫ್ ಅಂತ ಕ್ಲೇಮ್ ಮಾಡಿದ್ರು. ಕ್ಲೇಮ್ ಮಾಡಿದ ತಕ್ಷಣ ಅವರ ಹೆಸರಿಗೆ ಆಗಿ ಬಿಡುತ್ತದಾ?. ಯಾವುದೇ ರೈತರಿಗೆ ಅನ್ಯಾಯ ಆಗಲು ಬಿಡಲ್ಲಾ ಅಂತ ಸಿಎಂ ಮತ್ತು ಕಂದಾಯ ಸಚಿವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮ ಸರ್ಕಾರ ಸರ್ವೇ ಜನಾಃ ಸುಖಿನೋ ಭವಂತು ಎಂದು ಕೆಲಸ ಮಾಡುತ್ತಿದೆ: ಶಕ್ತಿ, ವಕ್ಫ್ ವಿವಾದ ಬಗ್ಗೆ ಹೆಬ್ಬಾಳ್ಕರ್ ಮಾತು
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬಾಲಿಶ ಹೇಳಿಕೆ ಕೊಡುವುದರಲ್ಲಿ ನಿಸ್ಸಿಮರು. ಬೆಂಗಳೂರಿಗೆ ಒಂದು ರೂಪಾಯಿ ತರಲು ಯೋಗ್ಯತೆ ಇಲ್ಲದ ಇವರು ಬಿಜಾಪುರ ರೈತರ ಹಿತ ಕಾಪಾಡುತ್ತಾರಾ?. ಚುನಾವಣೆ ಮುಗಿದ ನಂತರ ಈ ಇಸ್ಯೂ ಇರುವುದೇ ಇಲ್ಲ ನಾನು ಬರೆದುಕೊಡುತ್ತೇನೆ ನೋಡಿ. ದೇವಸ್ಥಾನಗಳ ಆಸ್ತಿ ಕಾಪಾಡುವುದರಲ್ಲಿ ಬಿಜೆಪಿಯವರಿಗಿಂತ ಕಾಂಗ್ರೆಸ್ ಮುಂದಿದೆ. ಬಿಜೆಪಿಯವರು ಇದನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರಷ್ಟೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಅಂತ ಸಿಎಂ ಹೇಳಿದ್ದಾರೆ. ನಿಮಗೆ ಸಿಎಂ ಮೇಲೆ ನಂಬಿಕೆ ಇದೆಯೋ ಇಲ್ಲಾ ಆ ತೇಜಸ್ವಿ ಸೂರ್ಯ ಬಗ್ಗೆ ನಂಬಿಕೆ ಇದೆಯೋ?. ಈ ಸಮಸ್ಯೆ ಬಗೆಹರಿಸಲು ತಂಡ ರಚನೆ ಮಾಡಲಾಗಿದೆ. ಡಿಸಿಗಳಿಗೆ ಸ್ಪಷ್ಟ ಆದೇಶ ಹೋಗಿದೆ. ಬಿಜೆಪಿಯವರಲ್ಲಿ ನಾಯಕತ್ವದ ಕೊರತೆ ಇದೆ. ಅವರು ತಮ್ಮ ನಾಯಕತ್ವ ಉಳಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ವಿಜಯೇಂದ್ರ ಬಗ್ಗೆ ಅವರ ಪಕ್ಕದಲ್ಲೇ ಒಪ್ಪುಗೆ ಇಲ್ಲಾ. ಇದೆಲ್ಲಾ ಮುಚ್ಚಿ ಹಾಕಲು ಪುಡಾರಿಗಳಿಗೆ ಕಳುಹಿಸಿದ್ದಾರಷ್ಟೇ. ಅವರಿಗೆ ರೈತರ ಬಗ್ಗೆ ಕಾಳಜಿ ಇದ್ದಿದ್ರೆ ಪ್ರವಾಹ ಬಂದಾಗ ಯಾಕಪ್ಪಾ ಬರಲಿಲ್ಲ?. ನೆಟೆ ರೋಗ ಬಂದಾಗ ಯಾಕಪ್ಪ ಬಿಜೆಪಿಯವರು ಬರಲಿಲ್ಲ?. ಎಲ್ಲಿ ಕೋಮು ವಿಷ ಬೀಜ ಬಿತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಇರುತ್ತದೋ ಅಲ್ಲಿ ಬಿಜೆಪಿ ಮುಂದಿದೆ. ನಾವು ಈಗಲೂ ಮತ್ತು ಯಾವಾಗಲೂ ರೈತರ ಪರವಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.