
ಬೆಂಗಳೂರು (ಮೇ.17): ಪ್ರಧಾನಿ ಮೋದಿ ಅವರ ಇಂದನ ಮಿತವ್ಯಯ ಕರೆಗೆ ಸ್ಪಂದಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿ ನಾಯಕರು ಮೆಟ್ರೋ ಹತ್ತಿದ ವಿಚಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ
ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರ ಮೆಟ್ರೋ ಮತ್ತು ಬೈಕ್ ಪ್ರಯಾಣದ ಬಗ್ಗೆ ತೀವ್ರ ವ್ಯಂಗ್ಯವಾಡಿದ್ದಾರೆ. 'ಇದೆಲ್ಲ ಬಿಜೆಪಿಯವರ ಬರೀ ನಾಟಕ' ಎಂದು ಕಿಡಿಕಾರಿದ ಸಚಿವರು, ಒಂದು ದಿನ ಮೆಟ್ರೋ ಹತ್ತೋದಲ್ಲ, ಪ್ರತಿದಿನ ಅವರು ಮೆಟ್ರೋದಲ್ಲಿ ಓಡಾಡಿದ್ರೆ ಅದನ್ನ ಬೇಕಾದ್ರೆ ನಾವೂ ಒಪ್ಪುತ್ತೇವೆ' ಎಂದು ತಿರುಗೇಟು ನೀಡಿದ್ದಾರೆ.
ಸುಮ್ಮನೆ ಒಂದು ದಿನ ಮೆಟ್ರೋ ಹತ್ತೋದು, ಮತ್ತೊಬ್ಬ ಬೈಕ್ ಹತ್ತೋದು ಜನರಿಗಾಗಿ ಮಾಡಿದ ಕೆಲಸ ಅಲ್ಲ, ನಿಜವಾಗಿಯೂ ಜನರ ಕಷ್ಟ ಗೊತ್ತಾಗಬೇಕಂದ್ರೆ ಪ್ರತಿದಿನ ಬಿಎಂಟಿಸಿ ಬಸ್ ಹತ್ತಲಿ, ನಮ್ಮ ಶಕ್ತಿ ಯೋಜನೆ ಉಪಯೋಗ ಪಡೆದುಕೊಳ್ಳಲಿ ಎಂದು ಸವಾಲು ಹಾಕಿದರು.
ವಿಜಯೇಂದ್ರ ಮೆಟ್ರೋ ಹತ್ತುವ ಪರಿಸ್ಥಿತಿ ಯಾಕೆ ಬಂತು?
ಬಿವೈ ವಿಜಯೇಂದ್ರ ಮೆಟ್ರೋ ಪ್ರಯಾಣದ ಹಿಂದೆ ರಾಜಕೀಯ ಪರಿಸ್ಥಿತಿ ಇದೆ ಎಂದು ಸೂಚಿಸಿದ ಖರ್ಗೆ, 'ವಿಜಯೇಂದ್ರ ಮೆಟ್ರೋ ಹತ್ತುವಂತೆ ಮಾಡಿದ್ಯಾರು? ಆ ಪರಿಸ್ಥಿತಿ ಯಾಕೆ ಬಂತು? ಅದಕ್ಕೂ ಉತ್ತರ ಬೇಕಲ್ಲವಾ? ಎಂದು ಪ್ರಶ್ನಿಸಿದರು.
”SIR ಪ್ರಕ್ರಿಯೆ ಬಗ್ಗೆ ಮಾತನಾಡಿದ ಖರ್ಗೆ, 'ಎಸ್‌ಐಆರ್ ಅನ್ನೋದು ಬಿಜೆಪಿ ಗೆಲ್ಲಿಸಲೆಂದೇ ಮಾಡಿರೋ ಡಿಸೈನ್' ಎಂದು ಗಂಭೀರ ಆರೋಪ ಮಾಡಿದರು. ಹೊಸ ರೂಲ್ಸ್ ಮೂಲಕ ಮತದಾರರ ಹೆಸರು ಡಿಲೀಟ್ ಆಗಬಹುದು. ಹೊಸ ನಿಯಮ ತಂದು ಯಾರನ್ನ ಬೇಕಾದರೂ ಮತದಾರರ ಪಟ್ಟಿಯಿಂದ ತೆಗೆಯಬಹುದು ಅಂದ್ರೆ ಅದು ಸಂವಿಧಾನದ ಪ್ರಕಾರ ನಡೆಯುತ್ತಿದೆ ಅನ್ನೋದಕ್ಕೆ ಆಗುತ್ತಾ? ಎಂದು ಪ್ರಶ್ನಿಸಿದರು. ಇದು ಸಂಪೂರ್ಣ ಅಸಂವಿಧಾನಾತ್ಮಕ ಎಂದು ವಾಗ್ದಾಳಿ ನಡೆಸಿದರು.
SIR ಮಾಡಬೇಡಿ ಅಂತಿಲ್ಲ… ಸರಿಯಾಗಿ ಮಾಡಿ ಅಂತಿದ್ದೇವೆ
ನಾವು SIR ಮಾಡಬೇಡಿ ಅಂತಿಲ್ಲ. ಆದರೆ ಸರಿಯಾಗಿ ಕಾನೂನಾತ್ಮಕವಾಗಿ ಮಾಡಿ ಅಂತಿದ್ದೇವೆ. ಒಬ್ಬ ನಾಗರೀಕನಿಗೂ ತೊಂದರೆ ಆಗದಂತೆ ಸಂವಿಧಾನದ ಹಕ್ಕು ಕೊಡಬೇಕು ಎಂದರು. ಹೆಸರಿನಲ್ಲಿ ಸಣ್ಣ ತಪ್ಪಾದರೂ ಡಿಲಿಟ್ ಆಗುವ ಭೀತಿ ಇದೆ. ಉದಾಹರಣೆಗೆ ನನ್ನ ಹೆಸರು ಪ್ರಿಯಾಂಕ್. ಈ ಹೆಸರಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದ್ರೂ ವೋಟ್ ಡಿಲೀಟ್ ಆಗಬಹುದು' ಎಂದು ಖರ್ಗೆ ಆತಂಕ ವ್ಯಕ್ತಪಡಿಸಿದರು. ಪಶ್ಚಿಮ ಬಂಗಾಳದಲ್ಲಿ ಅಭ್ಯರ್ಥಿಯ ಹೆಸರನ್ನೇ ವೋಟರ್ ಲಿಸ್ಟ್‌ನಿಂದ ತೆಗೆದಿದ್ದಾರೆ. 17 ವರ್ಷ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಹೊಂದಿದ್ದವರ ಹೆಸರೂ ತೆಗೆದಿದ್ದಾರೆ. ಅಷ್ಟೇ ಅಲ್ಲದೇ ಮಹಾರಾಷ್ಟ್ರದಲ್ಲಿ ವೈಸ್ ಅಡ್ಮಿರಲ್ ಅವರ ವೋಟ್ ಕೂಡ ಡಿಲೀಟ್ ಆಗಿದೆ ಎಂದು ಹೇಳಿದರು.
ಬಹುತೇಕ ಮತದಾನದ ಹಕ್ಕಿನಿಂದ ಹೊರಗೆ!
ಬಹಳಷ್ಟು ಜನರನ್ನು ವೋಟ್‌ನಿಂದ ದೂರ ಇಟ್ಟಿರುವ ಉದಾಹರಣೆಗಳು ಈಗಾಗಲೇ ಇವೆ. ಸರ್ಕಾರ ಈ ಬಗ್ಗೆ ಸ್ಪಷ್ಟ ನಿಲುವು ತಿಳಿಸಬೇಕು, ಲೋಪಗಳಿದ್ದರೆ ಚುನಾವಣಾ ಆಯೋಗ ಸರಿಪಡಿಸಲಿ ಎಂದರು. SIR ವಿಚಾರವಾಗಿ ನಮ್ಮ ಸರ್ಕಾರದ ನಿಲುವು ಬಹಳ ಸ್ಪಷ್ಟವಾಗಿದೆ. ವೋಟರ್ ಮ್ಯಾಪಿಂಗ್ ಆಗಿದೆ. ಅದು ಸರಿಯಿದೆಯಾ ಇಲ್ವಾ ಅನ್ನೋದನ್ನು ಚುನಾವಣಾ ಆಯೋಗ ನೋಡಲಿ' ಎಂದರು.
ಪಾರದರ್ಶಕವಾಗಿ ದೂರು ಸರಿಪಡಿಸಿ ಬಳಿಕ ಪ್ರಕ್ರಿಯೆ ನಡೆಸಲಿ”
ಸಾರ್ವಜನಿಕರಿಂದ ಬಂದಿರುವ ದೂರುಗಳನ್ನು ಮೊದಲು ಸರಿಪಡಿಸಬೇಕು. ಪಾರದರ್ಶಕವಾಗಿ ತಿದ್ದಿದ ಬಳಿಕವೇ SIR ಪ್ರಕ್ರಿಯೆ ನಡೆಸಲಿ. ಇದೆಲ್ಲ ಸರಿಪಡಿಸಲಾರದೇ ಪ್ರಕ್ರಿಯೆ ನಡೆಸಿದ್ರೆ ಬಹಳಷ್ಟು ಜನರು ತಮ್ಮ ಸಂವಿಧಾನದ ಹಕ್ಕಿನಿಂದ ದೂರ ಉಳಿಯುವ ಪರಿಸ್ಥಿತಿ ಬರುತ್ತದೆ' ಎಂದು ಎಚ್ಚರಿಸಿದ ಖರ್ಗೆ ಅವರು, SIR ವಿರುದ್ಧ ಪಕ್ಷ ಹಾಗೂ ಸರ್ಕಾರದ ಕಡೆಯಿಂದ ನ್ಯಾಯಾಂಗ ಹೋರಾಟ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.