
ಬೆಂಗಳೂರು (ಏ.9): ‘ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ತಾನೊಬ್ಬ ಬ್ರಾಹ್ಮಣ ಎಂಬ ಹಕ್ಕಿನೊಂದಿಗೆ, ಆರ್‌ಎಸ್ಎಸ್ ತರಬೇತಿಯಿಂದ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಪ್ರಧಾನಮಂತ್ರಿ ಮೋದಿ ಇದೆಲ್ಲವನ್ನೂ ಸಮರ್ಥನೆ ಮಾಡಿಕೊಳ್ಳುತ್ತಾರೆಯೇ?’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಉದ್ದೇಶಿಸಿ ಹಿಮಂತ್ ಬಿಸ್ವಾ ಶರ್ಮಾ ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ‘ಹಿಮಂತ್ ಬಿಸ್ವಾ ಶರ್ಮಾ ಹಾಗೂ ಬಿಜೆಪಿಯವರು ಹತಾಶರಾಗಿದ್ದಾರೆ. ಹಿಮಂತ್ ಬಿಸ್ವಾ ಅವರು ಬ್ರಾಹ್ಮಣರಲ್ಲವೇ? ಆ ಹಕ್ಕಿನೊಂದಿಗೇ ಮಾತನಾಡಿದ್ದಾರೆ. ಅವರು ದಲಿತರು, ದಲಿತ ನಾಯಕರ ಬಗ್ಗೆ ಏನು ಬೇಕಾದರೂ ಮಾತನಾಡಬಹುದು. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ ಮೇಲೆ ಆರ್‌ಎಸ್‌ಎಸ್‌ನವರು ಇದನ್ನೇ ಅವರಿಗೆ ಕಲಿಸಿರುವುದಲ್ಲವೇ? ಅವರು ಚಾತುರ್ವರ್ಣ ಪದ್ಧತಿಯಿಂದ ಹೊರ ಬಂದಿಲ್ಲ ಎಂದು ಕಿಡಿಕಾರಿದರು.
ಬಿಜೆಪಿಯವರ ಬಳಿ ಮಲ್ಲಿಕಾರ್ಜುನ ಖರ್ಗೆ ಅವರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ಇಲ್ಲ. ರಾಜ್ಯಸಭೆ ಹಾಗೂ ಹೊರಗಡೆ ಅವರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಹಿಮಂತ್ ಅವರಿಗೆ ಜಾತಿಯ ಹಿರಿಮೆ ತಲೆಯಲ್ಲಿ ಕುಳಿತುಬಿಟ್ಟಿದೆ. ಬಿಜೆಪಿಯ ಪ್ರಬುದ್ಧ ಸಮಾಜದವರು ಬೇರೆ ಸಮಾಜದವರಿಗೆ ಈ ರೀತಿ ಮಾತನಾಡಬಹುದು ಎನಿಸುತ್ತದೆ. ಇದು ಪ್ರಮುಖ ವಿಷಯ. ಇದರ ಬಗ್ಗೆ ಮೋದಿ ಅವರು ಏನು ಹೇಳುತ್ತಾರೆ? ಇದನ್ನೂ ಸಮರ್ಥಿಸಿಕೊಳ್ಳುತ್ತಾರಾ? ಎಂದು ಪ್ರಶ್ನಿಸಿದರು.
ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ದೂರು, ಪ್ರತಿಭಟನೆ ವಿಚಾರವಾಗಿ ಮಾತಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ನವರು ಈಗ ಸ್ವಾಮಿ ನಿಷ್ಠೆ ತೋರಿಸಲೇ ಬೇಕಲ್ಲವೇ? ಯಾವುದು ವಿಷಭರಿತ ಸರ್ಪ ಇರುತ್ತದೆಯೋ ಏನ್ ಮಾಡಬೇಕೋ ಮಾಡಿ ಎಂದು ಹೇಳಿದ್ದಾರೆ. ವಿಷ ಸರ್ಪ ನೋಡಿದರೆ ಸ್ನೇಕ್ ಶ್ಯಾಮ್ ಅವರನ್ನು ಕರೆಯುತ್ತೀರಿ. ಅವರು ಸಿಗದಿದ್ದರೆ ನೀವೇ ಓಡಿಸುತ್ತೀರಿ. ಹಾಗಾದರೆ ಇವರು ಯಾವುದಕ್ಕೆ ಕರೆ ಕೊಟ್ಟಂತೆ? ಎಂದು ಕಿಡಿಕಾರಿದರು.
ನಮ್ಮ ಸಮಾಜದಲ್ಲಿ ಕೋಮು ವಿಷ ತುಂಬುತ್ತಿರುವುದು ಯಾರು? ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು, ಆದಿವಾಸಿಗಳು ಇವರು ಯಾರಿಗೂ ಕೂಡ ದೇಶದಲ್ಲಿ ಜಾಗವಿಲ್ಲ. ಮನುಸ್ಮೃತಿ ನಂಬುವ ಇವರ ಮುಂದೆ ಮಹಿಳೆಯರಿಗೂ ಜಾಗವಿಲ್ಲ ಎಂದು ಹೇಳಿದರು.
ಆರ್‌ಎಸ್‌ಎಸ್ ದೂರು ಕೊಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಆರ್‌ಎಸ್‌ಎಸ್ ಹೇಗೆ ಕೊಡಲು ಸಾಧ್ಯ? ಅವರು ನೋಂದಣಿಯೇ ಆಗದ ಸಂಸ್ಥೆ. ಯಾವ ಲೆಟರ್‌ಹೆಡ್‌ನಲ್ಲಿ ಕೊಡುತ್ತಾರೆ. ನನ್ನ ಹಾಗೂ ದಿನೇಶ್ ಗುಂಡೂರಾವ್ ಮೇಲೆ ಪ್ರಕರಣ ನಡೆಯುತ್ತಿರುವುದು ಬೇರೆ ವಿಚಾರ. ಆರ್‌ಎಸ್‌ಎಸ್‌ನವರು ದೂರು ನೀಡಿದ್ದರೆ ಪ್ರತಿ ನೀಡಲಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.