ರಾಜ್ಯದ 2 ಕ್ಷೇತ್ರಕ್ಕೆ ಇಂದು ಉಪಕದನ - ದಾವಣಗೆರೆ, ಬಾಗಲಕೋಟೇಲಿ ಮತದಾನ । ಮೇ 4ಕ್ಕೆ ಫಲಿತಾಂಶ , ಕಾಂಗ್ರೆಸ್‌- ಬಿಜೆಪಿ ನಡುವೆ ಭರ್ಜರಿ ಪೈಪೋಟಿ

Kannadaprabha News   | Kannada Prabha
Published : Apr 09, 2026, 04:37 AM IST
Karnataka By election 2026 South Davanagere Bagalkot by elections Who will be lucky

ಸಾರಾಂಶ

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ನಡೆಯಲಿದ್ದು, ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿ. ಕಾಂಗ್ರೆಸ್ ಹಿರಿಯ ನಾಯಕರ ನಿಧನದಿಂದ ತೆರವಾದ ಈ ಕ್ಷೇತ್ರಗಳಲ್ಲಿ, ಅನುಕಂಪದ ಅಲೆ ಮತ್ತು ಸರ್ಕಾರದ ಗ್ಯಾರಂಟಿಗಳು ಫಲಿತಾಂಶದ ಮೇಲೆ ಪ್ರಭಾವ ಬೀರಲಿವೆಯೇ?

ದಾವಣಗೆರೆ/ಬಾಗಲಕೋಟೆ (ಏ.9): ರಾಜ್ಯದ ಗಮನ ಸೆಳೆದಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಗುರುವಾರ ಮತದಾನ ನಡೆಯಲಿದ್ದು, ಶಾಂತಿಯುತ ಮತದಾನಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.

ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಮೇ 4ರಂದು ಮತಗಳ ಎಣಿಕೆ ನಡೆಯಲಿದ್ದು, ಫಲಿತಾಂಶಕ್ಕಾಗಿ ಸುಮಾರು 1 ತಿಂಗಳು ಕಾಯಬೇಕಿದೆ.

ಕಾಂಗ್ರೆಸ್‌ ವರ್ಸಸ್‌ ಬಿಜೆಪಿ:

ಕಾಂಗ್ರೆಸ್‌ನ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ದಾವಣಗೆರೆ ದಕ್ಷಿಣಕ್ಕೆ, ಎಚ್‌.ವೈ.ಮೇಟಿ ಅವರ ನಿಧನದಿಂದ ಬಾಗಲಕೋಟೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಎರಡೂ ಕಡೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರಾನೇರ ಸ್ಪರ್ಧೆಯಿದ್ದು, ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್‌ನ ಸಮರ್ಥ ಎಂ.ಶಾಮನೂರು ಹಾಗೂ ಬಿಜೆಪಿಯ ಶ್ರೀನಿವಾಸ ದಾಸ ಕರಿಯಪ್ಪ ನಡುವೆ ಜಿದ್ದಾಜಿದ್ದಿ ಕಾಳಗ ಏರ್ಪಟ್ಟಿದೆ.

ಬಾಗಲಕೋಟೆಯಲ್ಲಿ ಕಾಂಗ್ರೆಸ್‌ನ ಉಮೇಶ್‌ ಮೇಟಿ ಹಾಗೂ ಬಿಜೆಪಿಯ ವೀರಣ್ಣ ಚರಂತಿಮಠ ನಡುವೆ ನೇರ ಫೈಟ್‌ ನಡೆಯಲಿದೆ. ದಾವಣಗೆರೆ ದಕ್ಷಿಣದಲ್ಲಿ ಒಟ್ಟು 25 ಅಭ್ಯರ್ಥಿಗಳು ಹಾಗೂ ಬಾಗಲಕೋಟೆಯಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ 13 ಮಂದಿ ಮುಸ್ಲಿಂ ಅಭ್ಯರ್ಥಿಗಳು ಕಾಂಗ್ರೆಸ್‌ಗೆ ಬಂಡಾಯವಾಗಿ ಪಕ್ಷೇತರರಾಗಿ ಕಣದಲ್ಲಿ ಇರುವುದು ವಿಶೇಷ. ಇಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್‌ ಪೈಲ್ವಾನ್‌ ಅವರು ಕಣದಿಂದ ನಿವೃತ್ತಿ ಘೋಷಿಸಿದ್ದರೂ ಇವಿಎಂನಲ್ಲಿ ಅವರ ಹೆಸರು ಇರಲಿದೆ.

ದಾವಣಗೆರೆ ದಕ್ಷಿಣದಲ್ಲಿ ಒಟ್ಟು 2,31,072 ಮತದಾರರಿದ್ದು, ಆ ಪೈಕಿ 1,13,399 ಪುರುಷರು, 1,17,690 ಮಹಿಳೆಯರು ಹಾಗೂ 43 ಇತರರು. ಕ್ಷೇತ್ರದಾದ್ಯಂತ ಒಟ್ಟು 284 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬಾಗಲಕೋಟೆಯಲ್ಲಿ ಒಟ್ಟು 2,59,797 ಮತದಾರರಿದ್ದು, ಆ ಪೈಕಿ 1,26,233 ಪುರುಷರು, 1,31,863 ಮಹಿಳೆಯರು ಹಾಗೂ 2973 ಇತರರು. ಒಟ್ಟು 332 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ

ರಾಜಕೀಯ ಪ್ರತಿಷ್ಠೆಯ ಕಣ:

ಕಾಂಗ್ರೆಸ್‌ನಲ್ಲಿ ಈ ಉಪಚುನಾವಣೆ ಕೊಂಚ ಗೊಂದಲಕ್ಕೆ ಕಾರಣವಾಗಿದ್ದುದು ಟಿಕೆಟ್ ಹಂಚಿಕೆಯ ವಿಚಾರದಲ್ಲಿ. ಬಾಗಲಕೋಟೆಯಲ್ಲಿ ಮೇಟಿ ಅವರ ಮಕ್ಕಳೇ, ಟಿಕೆಟ್’ಗಾಗಿ ಫೈಟ್ ಮಾಡುತ್ತಿದ್ದರು. ಇನ್ನೊಂದು ಕಡೆ, ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡಬೇಕೆಂದು ದೊಡ್ಡ ಡ್ರಾಮಾವೇ ನಡೆದು ಹೋಯಿತು. ಕೊನೆಗೆ, ಎರಡೂ ಕ್ಷೇತ್ರದಲ್ಲಿ ಅನುಕಂಪದ ಆಧಾರದ ಮೇಲೆ, ಆಯಾಯ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲಾಯಿತು.

ಈ ಮಧ್ಯೆ, ಮುನಿಸು ಮರೆತು ಸಚಿವ ಜಮೀರ್‌ ಪ್ರಚಾರ ನಡೆಸಿರುವುದು, ಸಿದ್ದು-ಡಿಕೆಶಿಯಾದಿಯಾಗಿ ಇಡೀ ಸಂಪುಟದ ಸದಸ್ಯರು ಪ್ರಚಾರ ನಡೆಸಿರುವುದು, ಸರ್ಕಾರದ ಗ್ಯಾರಂಟಿ ಯೋಜನೆಗಳು, ಆಡಳಿತ ಪಕ್ಷಕ್ಕಿರುವ ಲಾಭಗಳು ಕಾಂಗ್ರೆಸ್ ಜಯಕ್ಕೆ ಕಾರಣವಾಗಲಿವೆ ಎಂಬುದು ಕಾಂಗ್ರೆಸ್‌ ನಾಯಕರ ಆಶಯ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ, ಪ್ರಹ್ಲಾದ್‌ ಜೋಶಿ ಸೇರಿ ಬಿಜೆಪಿಯ ಹಿರಿಯ ನಾಯಕರು ಪ್ರಚಾರ ನಡೆಸಿರುವುದು, ಜೆಡಿಎಸ್‌ ನಾಯಕ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರಚಾರಕ್ಕೆ ಆಗಮಿಸಿರುವುದು, ಬಾಗಲಕೋಟೆಯಲ್ಲಿ ಅಭ್ಯರ್ಥಿ ಚರಂತಿಮಠ, ಪಿ.ಎಚ್‌.ಪೂಜಾರ ಮುನಿಸು ಮರೆತು ಒಂದಾಗಿರುವುದು, ಚರಂತಿಮಠ ಪರ ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ ಪ್ರಚಾರ ನಡೆಸಿರುವುದು, ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್‌ ವಿರುದ್ಧ ಮುನಿಸಿಕೊಂಡಿರುವುದು ಗೆಲುವಿಗೆ ಸಹಕಾರಿ ಎಂಬುದು ಬಿಜೆಪಿ ನಾಯಕರ ಆಶಯ.

ಚುನಾವಣಾ ಫಲಿತಾಂಶ ಸರ್ಕಾರದ ಉಳಿವಿಗಿಂತ ಹೆಚ್ಚಾಗಿ ರಾಜಕೀಯ ಪ್ರತಿಷ್ಠೆಯ ಕಣವಾಗಿದ್ದು, ಗ್ಯಾರಂಟಿ ಅಲೆ ಹಾಗೂ ಅನುಕಂಪದ ನಡುವೆ ಮತದಾರ ಪ್ರಭು ಯಾರಿಗೆ ಜೈ ಎನ್ನುತ್ತಾನೆ ಎಂಬುದು ಕುತೂಹಲ ಮೂಡಿಸಿದೆ.

ಮತದಾನದ ಸಮಯ: ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ.

ಮತ ಎಣಿಕೆ: ಮೇ 4.

ಕ್ಷೇತ್ರ: ದಾವಣಗೆರೆ ದಕ್ಷಿಣ.

ಒಟ್ಟು ಅಭ್ಯರ್ಥಿಗಳು : 25

ಬಿಜೆಪಿ: ಶ್ರೀನಿವಾಸ ದಾಸ ಕರಿಯಪ್ಪ.

ಕಾಂಗ್ರೆಸ್‌ : ಸಮರ್ಥ ಎಂ. ಶಾಮನೂರು.

ಒಟ್ಟು ಮತದಾರರು: 2,31,072.

1,13,399 ಪುರುಷರು , 1,17,690 ಮಹಿಳೆಯರು ಹಾಗೂ 43 ಇತರರು.

ಮತಗಟ್ಟೆ: 284.

+++++++

ಕ್ಷೇತ್ರ : ಬಾಗಲಕೋಟೆ.

ಒಟ್ಟು ಅಭ್ಯರ್ಥಿಗಳು : 9

ಬಿಜೆಪಿ: ವೀರಣ್ಣ ಚರಂತಿಮಠ.

ಕಾಂಗ್ರೆಸ್‌ : ಉಮೇಶ್‌ ಮೇಟಿ.

ಒಟ್ಟು ಮತದಾರರು: 2,59,797.

ಒಟ್ಟು ಮತದಾರರು: 2,58,118.

1,26,233 ಪುರುಷರು, 1,31,863 ಮಹಿಳೆಯರು ಹಾಗೂ 2973 ಇತರರು.

ಮತಗಟ್ಟೆ: 332.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೆಹಲಿ ಕನ್ನಡ ಸಂಘದ ಚುನಾವಣೆಯಲ್ಲಿ 'ಗೂಬೆ'ಯಾಟ: ಗಿಫ್ಟ್‌ ಆಗಿ ಬಂದ ಪಂಚಲೋಹದ ಗೂಬೆ ಶುಭವೋ? ಅಶುಭವೋ?
ಲಕ್ಷ್ಮಣ ಸವದಿ ಬಿಜೆಪಿಗೆ ಬರಲ್ಲ, ಬಂದ್ರೆ ಸೇರಿಸಿಕೊಳ್ಳಲು ಬಿಡಲ್ಲ, ಯತ್ನಾಳರನ್ನ ನಾನೇ ಕರೆತರುತ್ತೇನೆ: ರಮೇಶ್ ಜಾರಕಿಹೊಳಿ