ಸಚಿವ ನಾಗೇಂದ್ರ ರಾಜೀನಾಮೆಗೆ ಗಡುವು ನೀಡಿದ ಮಾಜಿ ಸಚಿವ ಶ್ರೀರಾಮುಲು!

By Kannadaprabha News  |  First Published Jun 3, 2024, 8:27 PM IST

ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು. ಹಗರಣದ ತನಿಖೆ ಪೂರ್ಣಗೊಳ್ಳುವ ವರೆಗೆ ನೈತಿಕ ಹೊಣೆ ಹೊತ್ತು ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದರು. 


ಬಳ್ಳಾರಿ (ಜೂ.03): ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು. ಹಗರಣದ ತನಿಖೆ ಪೂರ್ಣಗೊಳ್ಳುವ ವರೆಗೆ ನೈತಿಕ ಹೊಣೆ ಹೊತ್ತು ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಗರಣದಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆದಿದೆ. ಇದರಿಂದ ಅಮಾಯಕ ಅಧಿಕಾರಿ ಬಲಿಯಾಗಿದ್ದಾರೆ. ಹೊರ ರಾಜ್ಯಕ್ಕೆ ಹಣ ವರ್ಗಾವಣೆ ಆಗಿರುವುದರಿಂದ ಎಸ್‌ಐಟಿ ತನಿಖೆಯ ಬದಲು ಸಿಬಿಐಗೆ ವಹಿಸಬೇಕು. ಆಗ ಮಾತ್ರ ನಿಷ್ಪಕ್ಷಪಾತ ತನಿಖೆಯಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಾಗುತ್ತದೆ ಎಂದರು.

ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಗೆದ್ದು ಸಚಿವರಾದ ಸಚಿವ ಬಿ. ನಾಗೇಂದ್ರ ಎಸ್ಟಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕಿತ್ತು. ಶೋಷಿತ ಸಮಾಜದ ಹಿತ ಕಾಯುವ ಕೆಲಸ ಮಾಡಬೇಕಿತ್ತು. ಆದರೆ, ಅದೇ ಸಮುದಾಯದ ಹಣದಲ್ಲಿ ಭ್ರಷ್ಟಾಚಾರ ನಡೆಸಿರುವ ಆರೋಪ ಹೊತ್ತಿದ್ದಾರೆ. ದಲಿತರು, ಹಿಂದುಳಿದ ಸಮುದಾಯಗಳ ಪರವಾಗಿದ್ದೇವೆ ಎನ್ನುವ ಸಿದ್ಧರಾಮಯ್ಯ ದೊಡ್ಡ ಪ್ರಮಾಣದ ಹಣ ಲೂಟಿ ಹೊಡೆದರೂ ಮಾತನಾಡುತ್ತಿಲ್ಲ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ವಿವೇಚನೆಗೆ ಬಾರದೇ ಈ ಪ್ರಕರಣ ನಡೆಯಲು ಸಾಧ್ಯವಿಲ್ಲ. ಶೇ. 100ರಷ್ಟು ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಗೊತ್ತಿದ್ದೇ ಹಣ ತೆಲಂಗಾಣಕ್ಕೆ ವರ್ಗಾವಣೆಯಾಗಿದೆ. 

Tap to resize

Latest Videos

ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹದಿಂದ ಸರ್ಕಾರ ಪತನ: ಜಗದೀಶ್‌ ಶೆಟ್ಟರ್‌

ಬಡವರಿಗೆ ಸೇರಬೇಕಾದ ಕೋಟ್ಯಂತರ ರುಪಾಯಿ ಲೂಟಿಯಾದರೆ ಸುಮ್ಮನಿರಲು ಸಾಧ್ಯವಿಲ್ಲ. 15 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಇಷ್ಟೊಂದು ಅಕ್ರಮ ನಡೆದರೂ ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿದರು. ಚುನಾವಣೋತ್ತರ ಸಮೀಕ್ಷೆ ಪ್ರಕಾರ ಎನ್‌ಡಿಎ 350ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ. ಕರ್ನಾಟಕದಲ್ಲಿ 20ರಿಂದ 24 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. ರಾಜ್ಯದ ಜನರು ನರೇಂದ್ರ ಮೋದಿ ಸರ್ಕಾರಕ್ಕೆ ಆಶೀರ್ವಾದ ಮಾಡಿದ್ದಾರೆ ಎಂದರು. 

ರಾಜ್ಯದಲ್ಲಿ ಸರ್ಕಾರ ಬದಲಾಗುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ರಾಜ್ಯದ ಜನರು ಐದು ವರ್ಷ ಆಡಳಿತ ಮಾಡಲು ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ. ಜನರ ಹಿತ ಕಾಯುವ ಕೆಲಸ ಮಾಡಲಿ. ಭ್ರಷ್ಟಾಚಾರರಹಿತ ಆಡಳಿತ ನೀಡಲಿ ಎಂದರು. ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಬಿಜೆಪಿ ಹಿರಿಯ ಮುಖಂಡರಾದ ಎಸ್. ಗುರುಲಿಂಗನಗೌಡ, ಕೆ.ಎ. ರಾಮಲಿಂಗಪ್ಪ, ಎಚ್‌. ಹನುಮಂತಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಪಾಲಿಕೆ ಸದಸ್ಯರಾದ ಗೋವಿಂದರಾಜುಲು, ಹನುಮಂತು, ಶ್ರೀನಿವಾಸ ಮೋತ್ಕರ್, ಗುಡಿಗಂಟಿ ಹನುಮಂತ, ಇಬ್ರಾಹಿಂಬಾಬು ಸುದ್ದಿಗೋಷ್ಠಿಯಲ್ಲಿದ್ದರು.

ಸಮೀಕ್ಷೆಗಳನ್ನು ಮೀರಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ: ಪ್ರಲ್ಹಾದ್‌ ಜೋಶಿ

ನಾಗೇಂದ್ರ ರಾಜೀನಾಮೆಗೆ ಗಡುವು: ಜೂ.6ರೊಳಗೆ ಸಚಿವ ಬಿ. ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಪಕ್ಷದಿಂದ ರಾಜ್ಯಾದ್ಯಂತ ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದು ಬಿ. ಶ್ರೀರಾಮುಲು ಆಗ್ರಹಿಸಿದರು. ಕಾಂಗ್ರೆಸ್ ಸರ್ಕಾರ ಜನಪರವಾಗಿಲ್ಲ ಎಂಬುದು ಖಾತ್ರಿಯಾಗಿದೆ. ಇಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆಯಿರುವುದರಿಂದ ಉಳಿದ ನಿಗಮಗಳ ಹಣ ವ್ಯವಹಾರದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

click me!