ಪ್ರತಾಪ್‌ ಸಿಂಹ-ಎಚ್‌ಡಿಕೆ ಅಡ್ಜಸ್ಟ್‌ಮೆಂಟ್‌ ರಾಜಕಾರಣಿಗಳು: ಎನ್‌.ಚಲುವರಾಯಸ್ವಾಮಿ

By Kannadaprabha News  |  First Published Jun 15, 2023, 11:22 PM IST

ಕಾಂಗ್ರೆಸ್‌ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಿಲ್ಲ. ಪ್ರತಾಪ್‌ ಸಿಂಹನೇ ಮೊದಲ ಅಡ್ಜಸ್ಟ್‌ಮೆಂಟ್‌ ರಾಜಕಾರಣಿ. ಕುಮಾರಸ್ವಾಮಿ ಮತ್ತು ನಮ್ಮ ನಡುವೆ ಹೊಂದಾಣಿಕೆ ಇದೆ ಎಂದು ಅವರೇ ಹೇಳಿಕೊಂಡಿದ್ದಾರೆ. ನಾವೆಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಸಂಸದ ಪ್ರತಾಪ್‌ಸಿಂಹ ಆರೋಪಕ್ಕೆ ಸಚಿವ ಎನ್‌.ಚಲುವರಾಯಸ್ವಾಮಿ ತಿರುಗೇಟು ನೀಡಿದರು. 


ಮಂಡ್ಯ (ಜೂ.15): ಕಾಂಗ್ರೆಸ್‌ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಿಲ್ಲ. ಪ್ರತಾಪ್‌ ಸಿಂಹನೇ ಮೊದಲ ಅಡ್ಜಸ್ಟ್‌ಮೆಂಟ್‌ ರಾಜಕಾರಣಿ. ಕುಮಾರಸ್ವಾಮಿ ಮತ್ತು ನಮ್ಮ ನಡುವೆ ಹೊಂದಾಣಿಕೆ ಇದೆ ಎಂದು ಅವರೇ ಹೇಳಿಕೊಂಡಿದ್ದಾರೆ. ನಾವೆಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಸಂಸದ ಪ್ರತಾಪ್‌ಸಿಂಹ ಆರೋಪಕ್ಕೆ ಸಚಿವ ಎನ್‌.ಚಲುವರಾಯಸ್ವಾಮಿ ತಿರುಗೇಟು ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಪ್ರತಾಪ್‌ಸಿಂಹ ಎಲ್ಲರ ಜೊತೆನೂ ಹಾಗೆಯೇ ಹೇಳುತ್ತಾರೆ. ಅಡ್ಜಸ್ಟ್‌ಮೆಂಟ್‌ ರಾಜಕಾರಣದಲ್ಲಿ ಅವರೇ ಮೊದಲು. ನಮ್ಮ ಮತ್ತು ಕುಮಾರಸ್ವಾಮಿ ನಡುವೆ ಹೊಂದಾಣಿಕೆ ರಾಜಕಾರಣವಿದೆ ಅಂತ ಅವರೇ ಹೇಳಿಕೊಂಡಿರುವಾಗ ನಾವು ಹೊಂದಾಣಿಕೆ ರಾಜಕಾರಣ ಮಾಡಿರುವುದು ಹೇಗೆ ಬರುತ್ತದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಯಾರ ಬೆಂಬಲವನ್ನೂ ಪಡೆಯದೆ ನೇರವಾಗಿ ಚುನಾವಣೆ ಎದುರಿಸಿದೆ. ಜನರು ಆಶೀರ್ವದಿಸಿದ್ದರಿಂದ 135 ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಿದೆ ಎಂದು ಹೇಳಿದಾಗ, ಅಡ್ಜಸ್ಟ್‌ಮೆಂಟ್‌ ರಾಜಕಾರಣವಿಲ್ಲದಿದ್ದರೆ ತನಿಖೆ ಮಾಡಿಸಲಿ ಎಂದು ಹೇಳಿದ್ದಾರಲ್ಲ ಎಂದು ಕೇಳಿದಾಗ, ಆಗೆಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಿ ಎಂಬ ವಿಷಯವನ್ನಿಟ್ಟುಕೊಂಡು ಕಾಂಗ್ರೆಸ್‌ ತೇಜೋವಧೆಗೆ ಪ್ರಯತ್ನಿಸಿದರು. ಹತ್ತೇ ದಿನದಲ್ಲಿ ಗ್ಯಾರಂಟಿಗಳನ್ನು ಜಾರಿಗೊಳಿಸಿದ ಮೇಲೆ ಈಗ ಹೊಂದಾಣಿಕೆ ರಾಜಕಾರಣದ ಬಗ್ಗೆ ತನಿಖೆ ನಡೆಸಲಿ ಎನ್ನುತ್ತಿದ್ದಾರೆ. ಯಾವುದನ್ನೂ ಬಿಡೋದಿಲ್ಲ. ಎಲ್ಲವನ್ನೂ ತನಿಖೆ ಮಾಡುತ್ತೇವೆ. ಅದಕ್ಕೆ ಸ್ವಲ್ಪ ಸಮಯಾವಕಾಶ ಬೇಕು ಎಂದು ಉತ್ತರಿಸಿದರು.

Tap to resize

Latest Videos

ವಿದ್ಯುತ್‌ ದರ ಹೆಚ್ಚಳಕ್ಕೆ ಕಾಂಗ್ರೆಸ್‌ ಸರ್ಕಾರ ಕಾರಣ: ಸಂಸದ ಮುನಿಸ್ವಾಮಿ

ಜನರ ಸಮಸ್ಯೆಗಳಿಗೆ ಪರಿಹಾರ ಕೇಂದ್ರ: ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯನ್ನು ಜನರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕೇಂದ್ರವಾಗಿ ಪರಿವರ್ತನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಭರವಸೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರ ಸೇವೆಗಾಗಿ ಕಚೇರಿ ಸದಾಕಾಲ ತೆರೆದಿರುತ್ತದೆ. ನಾನು ಕಚೇರಿಯಲ್ಲಿ ಪ್ರತಿ ದಿನವೂ ಇರಲಾಗುವುದಿಲ್ಲ. ನನ್ನ ಆಪ್ತ ಸಹಾಯಕರು ಕಚೇರಿಯಲ್ಲಿರುತ್ತಾರೆ. ಕಚೇರಿಗೆ ಜನರು ನೀಡುವ ಸಮಸ್ಯೆಗಳ ಅಹವಾಲುಗಳನ್ನು ನನ್ನ ಗಮನಕ್ಕೆ ತರುವಂತೆ ಸೂಚಿಸಿದ್ದೇನೆ. 

ಅಹವಾಲು ಪರಿಶೀಲಿಸಿ ಪರಿಹಾರ ದೊರಕಿಸಿಕೊಡುವುದಾಗಿ ಹೇಳಿದರು. ಮಂಡ್ಯಕ್ಕೆ ನಾನು ಬಂದಾಗಲೆಲ್ಲಾ ಕಚೇರಿಗೆ ಭೇಟಿ ಕೊಡುತ್ತೇನೆ. ನನ್ನ ಮತ್ತು ಜನರ ನಡುವಿನ ಸಂಪರ್ಕ ಸೇತುವೆಯಾಗಿ ಕಚೇರಿಯನ್ನು ಬಳಸಿಕೊಳ್ಳುವೆ. ಜನರ ಸೇವೆಗೆ ಕಚೇರಿ ಸದಾ ಮುಕ್ತವಾಗಿರುತ್ತದೆ ಎಂದರು. ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ 3ರಿಂದ 4 ಟಿಎಂಸಿ ಅಡಿ ನೀರು ಮಾತ್ರ ಇದೆ. ಮುಂಗಾರು ಮಳೆ ಈಗಾಗಲೇ ವಿಳಂಬವಾಗಿದೆ. ಬೆಳೆದು ನಿಂತಿರುವ ಕಬ್ಬು ಬೆಳೆ ರಕ್ಷಣೆಗಾಗಿ ಸರ್ಕಾರ ಕೆಆರ್‌ಎಸ್‌ನಿಂದ ನೀರು ಬಿಡುಗಡೆ ಮಾಡಿದೆ. ನೀರನ್ನು ವ್ಯರ್ಥ ಮಾಡದೆ ಎಚ್ಚರಿಕೆಯಿಂದ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ಮುಲಾಜಿಲ್ಲದೆ ಕ್ರಮ: ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಪ್ರಕರಣಗಳು ಕಂಡುಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಆಹಾರ ಇಲಾಖೆ ಅಧಿಕಾರಿಗಳೊಂದಿಗೂ ಈ ವಿಷಯವಾಗಿ ಮಾತುಕತೆ ನಡೆಸುವುದಾಗಿ ಹೇಳಿದರು. ಆಹಾರ ಇಲಾಖೆ ಅಧಿಕಾರಿಗಳೇ ಈ ಪ್ರಕರಣದಲ್ಲಿ ಭಾಗಿಯಾಗಿರುವರಲ್ಲ ಎಂಬ ಮತ್ತೊಂದು ಪ್ರಶ್ನೆಗೆ, ಯಾವ ಹಂತದ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವುದು ಕಂಡುಬಂದಲ್ಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಅಕ್ಕಿ ವಿಚಾರದಲ್ಲಿ ರಾಜಕೀಯ ಬೇಡ, ಇದು ರಾಜ್ಯದ ಬಡ ಜನರ ಹಸಿವಿನ ಪ್ರಶ್ನೆ: ಸಿ.ಟಿ.ರವಿಗೆ ದಿನೇಶ್‌ ತಿರುಗೇಟು

ಕೃಷಿಗೆ ಹೆಚ್ಚಿನ ಒತ್ತು: ನೂತನ ಸರ್ಕಾರ ಮಂಡಿಸಲಿರುವ ಹೊಸ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿರುವುದರಿಂದ ಆರ್ಥಿಕವಾಗಿ ಸಮಸ್ಯೆ ಇದೆ. ಹೊಸ ಕಾರ್ಯಕ್ರಮ ನೀಡಲು ಸಾಧ್ಯವಾಗದಿದ್ದರೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದಾರೆ ಎಂದರು.

click me!