ಆರ್.ಅಶೋಕ್ ಹೇಳಿಕೆಗೆ ತಲೆಯೂ ಇಲ್ಲ ಬಾಲವೂ ಇಲ್ಲ. ವಿಪಕ್ಷ ನಾಯಕರಾಗಿ ಒಳ್ಳೆಯ ಕೆಲಸ ಮಾಡಲು ಅವಕಾಶವಿದ್ದರೂ ಕೂಡ ಜನರ ಬಳಿ ಹೋಗಲು ಅವರಲ್ಲಿ ಜನಪರ ಕಾರ್ಯಕ್ರಮ ಅಥವಾ ಅಭಿವೃದ್ಧಿ ವಿಚಾರವಿಲ್ಲ. ಹಾಗಾಗಿ ಚುನಾವಣೆಗೋಸ್ಕರ ಇಲ್ಲಸಲ್ಲದ ವಿಚಾರ ಮುಂದಿಟ್ಟುಕೊಂಡು ಚೇಷ್ಟೆ ಮಾಡುತ್ತಿದ್ದಾರೆಂದು ಜರಿದ ಸಚಿವ ಎನ್.ಚಲುವರಾಯಸ್ವಾಮಿ
ನಾಗಮಂಗಲ(ನ.09): ಕಳೆದ ಐದು ವರ್ಷ ಬಿಜೆಪಿ, ಜೆಡಿಎಸ್ ಸರ್ಕಾರದ ಅವಧಿಯಲ್ಲಿ ವಕ್ಫ್‌ಗೆ ಎಷ್ಟು ಖಾತೆಗಳು ಬದಲಾವಣೆಯಾಗಿವೆ ಎಂಬುದನ್ನು ತೆಗೆಸಿ ನೋಡಲಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿಪಕ್ಷ ನಾಯಕ ಆರ್.ಅಶೋಕ್‌ಗೆ ಟಾಂಗ್ ಕೊಟ್ಟರು.
ತಾಲೂಕಿನ ಇಜ್ಜಲಘಟ್ಟ ಗ್ರಾಮದ ತಮ್ಮ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆ ಜನತಾ ದರ್ಶನ ಮಾಡಿ ಸಾರ್ವಜನಿಕರ ಕುಂದುಕೊರತೆ ಆಲಿಸಿ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವಕ್ಫ್ ಆಸ್ತಿ ಈಗಿನ ಕಾಲದಲ್ಲಿ ಪ್ರಾರಂಭವಾದದ್ದಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ವಕ್ಫ್ ಹೆಸರಿನಲ್ಲಿರುವ ಆಸ್ತಿ ಕಾನೂನಾತ್ಮನಕವಾಗಿ ಜಾರಿಯಲ್ಲಿದೆ ಎಂದರು.
undefined
ಜನವರಿ ನಂತರ ಸಕ್ರಿಯ ರಾಜಕೀಯದಲ್ಲಿ ತೊಡಗುತ್ತೇನೆ: ಮಾಜಿ ಸಂಸದೆ ಸುಮಲತಾ ಅಂಬರೀಶ್
ಆರ್.ಅಶೋಕ್ ಹೇಳಿಕೆಗೆ ತಲೆಯೂ ಇಲ್ಲ ಬಾಲವೂ ಇಲ್ಲ. ವಿಪಕ್ಷ ನಾಯಕರಾಗಿ ಒಳ್ಳೆಯ ಕೆಲಸ ಮಾಡಲು ಅವಕಾಶವಿದ್ದರೂ ಕೂಡ ಜನರ ಬಳಿ ಹೋಗಲು ಅವರಲ್ಲಿ ಜನಪರ ಕಾರ್ಯಕ್ರಮ ಅಥವಾ ಅಭಿವೃದ್ಧಿ ವಿಚಾರವಿಲ್ಲ. ಹಾಗಾಗಿ ಚುನಾವಣೆಗೋಸ್ಕರ ಇಲ್ಲಸಲ್ಲದ ವಿಚಾರ ಮುಂದಿಟ್ಟುಕೊಂಡು ಚೇಷ್ಟೆ ಮಾಡುತ್ತಿದ್ದಾರೆಂದು ಜರಿದರು.
ಆಸ್ತಿಗಳ ಖಾತೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತವೆ. ಆದರೆ, ನಮ್ಮ ಸರ್ಕಾರ ಯಾವ ರೈತರ ಆಸ್ತಿಯನ್ನೂ ಕೂಡ ವಕ್ಫ್‌ಗೆ ಖಾತೆ ಮಾಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ, ಜೆಡಿಎಸ್ ಸರ್ಕಾರದ ಯಡಿಯೂರಪ್ಪ, ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಖಾತೆ ಆಗಿರುವ ಪಹಣಿಯನ್ನು ಮುಂದಿಟ್ಟು ಆರ್.ಅಶೋಕ್ ಮಾತನಾಡಲಿ ಎಂದು ತಿರುಗೇಟು ನೀಡಿದರು.
ಆರ್.ಅಶೋಕ್‌ಗೆ ಒಳ್ಳೆಯ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಅದನ್ನು ಬಿಟ್ಟು ಜಿಲ್ಲೆಯ ಮಹದೇವಪುರದಲ್ಲಿ ತಾಳೆ ಇಲ್ಲದ ಸರ್ವೇ ನಂಬರ್‌ನ ಪಹಣಿ ಹಿಡಿದುಕೊಂಡು ಇಂತಹ ತೀಟೆ ಕೆಲಸಕ್ಕೆ ಮುಂದಾಗಿದ್ದಾರೆ ಎಂದರು.
ಸತ್ಯಕ್ಕೆ ದೂರವಾದ ವಿಚಾರವನ್ನು ಗಾಳಿಯಲ್ಲಿ ಗುಂಡು ಹೊಡೆದಂತೆ ಮಾತನಾಡುತ್ತಿರುವ ಆರ್.ಅಶೋಕ್ ವಿಪಕ್ಷದ ನಾಯಕರಾಗಲು ಅರ್ಹರೇ ಎಂದು ಯೋಚಿಸಬೇಕಿದೆ. ಆದರೆ, ಸ್ನೇಹಿತರಾಗಿರುವ ಆರ್.ಅಶೋಕ್ ಗೌರವಯುತವಾಗಿ ಕೆಲಸ ಮಾಡಿದರೆ ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗುತ್ತದೆ ಎಂದರು.
ಪಹಣಿಯಲ್ಲಿನ ಗೊಂದಲದ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಪಟ್ಟಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಉಪ ಚುನಾವಣೆ ಮುಗಿದ ನಂತರ ಇದಕ್ಕಾಗಿಯೇ ಒಂದು ದಿನ ಮೀಸಲಿಟ್ಟು ಸತ್ಯಾಸತ್ಯೆ ವಿವರಿಸುತ್ತೇನೆ ಎಂದರು.
ಸಿದ್ದರಾಮಯ್ಯ ಮುಸ್ಲಿಮರ ಸಾಮ್ರಾಟನಾಗಲು ಯತ್ನ: ಆರ್.ಅಶೋಕ್
3 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ಗೆ ಗೆಲುವು:
ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಚನ್ನಪಟ್ಟಣದಲ್ಲಿ ಮಾತ್ರ ಹೆಚ್ಚು ಕೆಲಸ ಮಾಡುತ್ತಿದೆ. ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದ್ದರೂ ಕೂಡ ಎರಡು ಬಾರಿ ಸೋತಿರುವ ಸಿ.ಪಿ.ಯೋಗೇಶ್ವರ್‌ಗೆ ಈ ಬಾರಿ ಒಳ್ಳೆಯ ಅವಕಾಶವಿದೆ. ಜನರೂ ಕೂಡ ಯೋಗೇಶ್ವರ್ ಪರವಾಗಿದ್ದಾರೆ ಎಂದ ಅವರು, ಚನ್ನಪಟ್ಟಣ, ಸಂಡೂರು ಹಾಗೂ ಶಿಂಗ್ಗಾವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಎಸ್‌ಎಲ್‌ಡಿಬಿ ನಿರ್ದೇಶಕ ತಿಮ್ಮರಾಯಿಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಅಲ್ಪಹಳ್ಳಿ ಡಿ.ಕೃಷ್ಣೇಗೌಡ, ಚೇತನ್‌ಕುಮಾರ್, ಬ್ರಹ್ಮದೇವರಹಳ್ಳಿ ಗ್ರಾಪಂ ಉಪಾಧ್ಯಕ್ಷ ಉಮೇಶ್, ಮುಖಂಡರಾದ ಹೊನ್ನಾವರ ಪುಟ್ಟರಾಜು, ಇಜ್ಜಲಘಟ್ಟ ಲೋಕೇಶ್ ಸೇರಿದಂತೆ ಹಲವರು ಇದ್ದರು.