ಯಡಿಯೂರಪ್ಪನವರು ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾಗಲು ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗಲೇ ಜೈಲಿಗೆ ಹೋಗಲು ಕೇಂದ್ರ ಸಚಿವ ಕುಮಾರಸ್ವಾಮಿ ಅವರೇ ಕಾರಣ ಎಂಬುದನ್ನು ಬಿಜೆಪಿ ನಾಯಕರು ಮರೆಯಬಾರದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ರಾಮನಗರ (ಆ.04): ಯಡಿಯೂರಪ್ಪನವರು ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾಗಲು ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗಲೇ ಜೈಲಿಗೆ ಹೋಗಲು ಕೇಂದ್ರ ಸಚಿವ ಕುಮಾರಸ್ವಾಮಿ ಅವರೇ ಕಾರಣ ಎಂಬುದನ್ನು ಬಿಜೆಪಿ ನಾಯಕರು ಮರೆಯಬಾರದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು. ನಗರದ ಹಳೇ ಬಸ್ ನಿಲ್ದಾಣದ ವೃತ್ತದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹಾಗೂ ಬಿಜಿಪಿಯ 21 ಭ್ರಷ್ಟ ಹಗರಣಗಳ ವಿರುದ್ಧ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿ, ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದವರು, ಜೈಲಿಗೆ ಕಳುಹಿಸಿದವರ ಜೊತೆಯಲ್ಲಿಯೇ ವಿಜಯೇಂದ್ರ ಪಾದಯಾತ್ರೆಯಲ್ಲಿ ಕರೆದೊಯ್ಯುತ್ತಿರುವುದು ಅಸಹ್ಯ ಎನಿಸುತ್ತಿದೆ ಎಂದು ಟೀಕಿಸಿದರು.
ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ, ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ ಫೈಟ್ ಮಾಡಿದರು. ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ ಅಲ್ಲ ಅಪ್ಪ ಮಕ್ಕಳ ವಿರುದ್ಧ ಎಂದು ಯಡಿಯೂರಪ್ಪ ಹೇಳಿದ್ದರು. ಪಾದಯಾತ್ರೆಗೆ ಬೆಂಬಲ ಕೊಡುವುದಿಲ್ಲವೆಂದು ಕುಮಾರಸ್ವಾಮಿ ಹೇಳಿದ್ದರು. ಈಗ ಅವರೇ ಚಾಲನೆ ನೀಡಿದ್ದಾರೆ ಎಂದು ಕುಟಕಿದರು. ರಾಜ್ಯದಲ್ಲಿ ಬಿಜೆಪಿ 130 ಸ್ಥಾನ ಗೆದ್ದು ಸರ್ಕಾರ ರಚಿಸಿರುವ ಇತಿಹಾಸ ಇಲ್ಲ. ಜೆಡಿಎಸ್‌ನವರು ಬೇರೆಯವರ ಜತೆ ಸೇರಿ ಸರ್ಕಾರ ಮಾಡುತ್ತಾರೆ. ಸಿದ್ದರಾಮಯ್ಯ ಬಗ್ಗೆ ಒಂದು ಕಪ್ಪು ಚುಕ್ಕೆ ಇಲ್ಲ. ಕಾಂಗ್ರೆಸ್ ಪಕ್ಷ ಬೆಂಬಲ ನೀಡಿ ಮುಖ್ಯಮಂತ್ರಿಯನ್ನಾಗಿ ಮಾಡಿದರೆ ನೀವು ತಾಜ್ ವೆಸ್ಟೆಂಡ್‌ನಲ್ಲಿ ಕುಳಿತು ಏನು ಮಾಡುತ್ತಿದ್ದಿರಿ ಎಂದು ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡಿದರು.
ಸಿಎಂ ಸಿದ್ದರಾಮಯ್ಯ ಗುಂಡು ಕಲ್ಲು ಇದ್ದ ಹಾಗೆ ಇದ್ದಾರೆ: ಸಚಿವ ಮಹದೇವಪ್ಪ
ಗೌಡರ ಕುಟುಂಬದಿಂದಲೂ ಭೂ ಕಬಳಿಕೆ: ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡಿ, ಗಾಳಿಯಲ್ಲಿ ಗುಂಡು ಹೊಡೆದ ಹಾಗೆ ಮಾತನಾಡುವುದನ್ನು ಬಿಡಬೇಕು. ಈ ಹಿಂದೆ ಬಿಜೆಪಿ ನಾಯಕರೇ ಅಕ್ರಮ ಭೂಮಿ ಅತಿಕ್ರಮಣದಲ್ಲಿ ಕುಮಾರಸ್ವಾಮಿ ಹೆಸರನ್ನು ಸೇರಿಸಿ ಪ್ರಕಟಣೆ ನೀಡಿದ್ದರು. ಮೊದಲು ನಿಮ್ಮ ಮೇಲಿನ ಆರೋಪಗಳಿಗೆ ಉತ್ತರಿಸಿ, ಆನಂತರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು. ರಾಜ್ಯದಲ್ಲೆ ನೆರೆ ಪರಿಸ್ಥಿತಿ ಉಂಟಾಗಿದ್ದು, ಮಲೆನಾಡು ಭಾಗದಲ್ಲಿ ಗುಡ್ಡಗಳು ಕುಸಿಯುತ್ತಿವೆ. ಜನರ ಕಷ್ಟ ಕೇಳದೆ ಪಾದಯಾತ್ರೆ ಮಾಡುತ್ತಿರುವ ಬಿಜೆಪಿ-ಜೆಡಿಎಸ್‌ನವರಿಗೆ ನಾಚಿಕೆ ಆಗುತ್ತಿಲ್ಲವೆ. ಜನರ ಸಾವು-ನೋವಿಗೆ ಯಾವುದೇ ಬೆಲೆ ನೀಡದ ಮೈತ್ರಿ ಪಕ್ಷಗಳು ರಾಜ್ಯ ಸರ್ಕಾರವನ್ನು ಬೀಳಿಸುವ ಉದ್ದೇಶದಿಂದಷ್ಟೆ ಪಾದಯಾತ್ರೆ ನಡೆಸುತ್ತಿವೆ ಎಂದು ವ್ಯಂಗ್ಯವಾಡಿದರು.
ತನಿಖೆ ಭಯದಿಂದ ಪಾದಯಾತ್ರೆ: ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ನಾಡಿನ ಜನರಿಗೆ ಸಿದ್ದರಾಮಯ್ಯನವರ ರಾಜಕೀಯ ಜೀವನದ ಸಂಪೂರ್ಣ ವಿವರಣೆ ಇದೆ. ಕಪ್ಪು ಚುಕ್ಕಿ ಇಲ್ಲದ ನಿಷ್ಕಲ್ಮಷ ರಾಜಕಾರಣಿ. ಸಣ್ಣದೊಂದು ಕಳಂಕ ಇಲ್ಲದೆ ಜನಪರ ಆಡಳಿತ ಕೊಟ್ಟ ಇತಿಹಾಸವಿದೆ. ಬಿಜೆಪಿಯವರು ಅಧಿಕಾರ ಕಳೆದುಕೊಂಡು ಹತಾಶರಾಗಿದ್ದಾರೆ. ಈ ಹಿಂದೆ ತಾವು ಮಾಡಿದ ಹಗರಣಗಳ ತನಿಖೆ ಮಾಡುತ್ತಾರೆ ಎಂಬ ಭಯದಿಂದ ರಾಜ್ಯ ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಪುನೀತ್ ರಾಜ್‌ಕುಮಾರ್‌ಗೆ ರಾಷ್ಟ್ರಪ್ರಶಸ್ತಿ ತಂದು ಕೊಟ್ಟ ಸರ್ಕಾರಿ ಶಾಲೆ ಮಾಳಿಗೆ ಮಹಾಮಳೆಗೆ ಸೋರುತಿಹುದು!
ಸರ್ಕಾರದ ಪರ ಸೈನಿಕರಂತೆ ನಿಲ್ಲುತ್ತೇವೆ: ಸಿಎಂ ಸಿದ್ದರಾಮಯ್ಯ ಮುಡಾದಲ್ಲಿ ಯಾವುದಾದರು ಅರ್ಜಿಗೆ ಸಹಿ ಹಾಕಿದ್ದಾರಾ, ಇದರಲ್ಲಿ ಅವರ ಪಾತ್ರ ಏನು ಇಲ್ಲ. ಮುಡಾದವರು ಕೂಡ 50:50 ಅನುಪಾತದಲ್ಲಿ ನಿವೇಶನ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸಿಎಂ ಆದಾಗ ಮುಡಾದಲ್ಲಿ ಅಂಕಿತ ಬಿದ್ದಿಲ್ಲ. 2020-21ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಇದಕ್ಕೆ ಅಂಕಿತ ಬಿದ್ದಿದೆ. ಅವೈಜ್ಞಾನಿಕ, ಅಪರಾಧ ಇಲ್ಲದ ಬಗ್ಗೆ ಹಗರಣ ಅಂತ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ, ನಮ್ಮ ಪಕ್ಷದ 136 ಶಾಸಕರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪರ ಸೈನಿಕರ ರೀತಿ ಕುಮಾರಸ್ವಾಮಿ ಮತ್ತು ವಿಜಯೇಂದ್ರ ವಿರುದ್ಧ ನಿಲ್ಲುತ್ತೇವೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.