
ಬೆಂಗಳೂರು (ಜು.28): ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಬಿತ್ತನೆಯೂ ಗಣನೀಯವಾಗಿ ಅಧಿಕವಾಗಿದೆ. ಇದರಿಂದ ಯೂರಿಯಾಕ್ಕೆ ಬೇಡಿಕೆ ಹೆಚ್ಚಾಗಿದ್ದು ಸರ್ಕಾರ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಮುಂಗಾರು ಮಳೆ ಸಾಮಾನ್ಯಕ್ಕಿಂತ ಮುಂಚಿತವಾಗಿ ಆರಂಭವಾಗಿ ಬಿತ್ತನೆಯೂ ಅಧಿಕವಾಗಿದೆ. ವಿಶೇಷವಾಗಿ ಮುಸುಕಿನ ಜೋಳದ ವಿಸ್ತೀರ್ಣ ಸುಮಾರು 2 ಲಕ್ಷ ಹೆಕ್ಟೇರ್‌ಗೆ ಹೆಚ್ಚಳವಾಗಿದೆ. ಜೊತೆಗೆ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಸುಮಾರು 13 ಸಾವಿರ ಹೆಕ್ಟೇರ್‌ನಲ್ಲಿ ಮರುಬಿತ್ತನೆ ಕೈಗೊಳ್ಳಲಾಗಿದೆ.
ತುಂಗಭದ್ರಾ, ಕೃಷ್ಣಾ, ಮತ್ತು ಕಾವೇರಿ ಜಲಾಶಯಗಳಿಂದ ಮುಂಚಿತವಾಗಿ ನೀರು ಬಿಡುಗಡೆಯಾಗಿ ಅಚ್ಚುಕಟ್ಟು ಪ್ರದೇಶಗಳಲ್ಲಿ ನಾಟಿ ಶೀಘ್ರವಾಗಿ ನಡೆದಿದ್ದೂ ಯೂರಿಯಾ ಬೇಡಿಕೆ ಹೆಚ್ಚಿಸಿದೆ ಎಂದು ವಿವರಿಸಿದ್ದಾರೆ. ಯೂರಿಯಾ ಕೊರತೆ ನಿವಾರಿಸಲು ರಾಜ್ಯ ಸರ್ಕಾರ ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1.52 ಲಕ್ಷ ಮೆಟ್ರಿಕ್ ಟನ್ ಯೂರಿಯಾದ ಬಾಕಿ ಸರಬರಾಜಿಗೆ ಕೇಂದ್ರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ. ಯೂರಿಯಾವನ್ನು ಶೀಘ್ರ ಬಿಡುಗಡೆ ಮಾಡುವಂತೆ ರಾಜ್ಯದ ಸಂಸದರು ಹಾಗೂ ಕೇಂದ್ರ ಸಚಿವರು ಕೇಂದ್ರವನ್ನು ಒತ್ತಾಯಿಸುವಂತೆ ನಾನೂ ಸಹ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.
ನ್ಯಾನೊ ಯೂರಿಯಾ ಬಗ್ಗೆ ಅರಿವು: ಅತಿಯಾದ ಯೂರಿಯಾ ಬಳಕೆಯಿಂದ ಮಣ್ಣಿನ ಫಲವತ್ತತೆ, ಮಾನವನ ಆರೋಗ್ಯ, ಮತ್ತು ಪರಿಸರ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಬೆಳೆಗಳು ಕೀಟಗಳಿಗೆ ಮತ್ತು ರೋಗಗಳಿಗೆ ಒಳಗಾಗುವ ಸಾಧ್ಯತೆಯೂ ಇದೆ. ಆದ್ದರಿಂದ, ರೈತರು ಶಿಫಾರಸು ಮಾಡಿದ ಪ್ರಮಾಣದಲ್ಲಿ ಮಾತ್ರ ಯೂರಿಯಾ ಬಳಸಬೇಕು. ಮತ್ತೊಂದೆಡೆ, ನ್ಯಾನೊ ಯೂರಿಯಾ ಬಳಸುವಂತೆ ರೈತರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ. ನ್ಯಾನೊ ಯೂರಿಯಾವು ಬೆಳೆಗಳಿಗೆ ಸಾರಜನಕವನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಒದಗಿಸುತ್ತದೆ. ಇದನ್ನು ಡ್ರೋನ್ ಮೂಲಕ ಸಿಂಪಡಿಸುವುದರಿಂದ ಶ್ರಮ ಮತ್ತು ವೆಚ್ಚ ಎರಡೂ ಕಡಿಮೆಯಾಗುತ್ತದೆ. ರಾಸಾಯನಿಕ ಗೊಬ್ಬರಗಳಾದ ಡಿಎಪಿ ಮತ್ತು ಯೂರಿಯಾದ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲಾವಾರು ಸಮರ್ಪಕ ಹಂಚಿಕೆ: ಈಗಾಗಲೇ ಜಿಲ್ಲಾವಾರು ಸಮರ್ಪಕವಾಗಿ ಯೂರಿಯಾ ಹಂಚಿಕೆ ಮಾಡಲಾಗಿದೆ. ಹೆಚ್ಚಿನ ಬೇಡಿಕೆ ಇರುವ ಜಿಲ್ಲೆಗಳಿಗೆ ಆದ್ಯತೆ ಮೇರೆಗೆ ಸರಬರಾಜು ಮಾಡಲು ಇಲಾಖೆಯು ಯೋಜನೆ ರೂಪಿಸಿದೆ. ರೈತರಿಗೆ ತೊಂದರೆ ಆಗದಂತೆ, ರಸಗೊಬ್ಬರದ ವಿತರಣೆಯನ್ನು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ನಡೆಸಲಾಗುವುದು ಎಂದು ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.