ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಬಿ.ಎಸ್.ಯಡಿಯೂರಪ್ಪನವರ ಪಾತ್ರ ಅನನ್ಯವಾಗಿದೆ. ಪಕ್ಷ ಅವರಿಗೆ ಕಾಲಕಾಲಕ್ಕೆ ಏನೇನು ಸ್ಥಾನಮಾನ ನೀಡಬೇಕೋ ಅದನ್ನು ನೀಡುತ್ತಲೆ ಬಂದಿದೆ: ಎಂಟಿಬಿ
ಹೊಸಕೋಟೆ(ಆ.24): ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ಪಕ್ಷದಲ್ಲಿ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿದ್ದು ಬಿಜೆಪಿ ಪಕ್ಷಕ್ಕೆ ಮತ್ತಷ್ಟು ಆನೆ ಬಲ ಬಂದಂತಾಗಿದೆ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು. ತಾಲೂಕಿನ ನಂದಗುಡಿ ಹೋಬಳಿ ಇಟ್ಟಸಂದ್ರ ಗ್ರಾಪಂ ವ್ಯಾಪ್ತಿಯ ಈಸ್ತೂರು ಗ್ರಾಮದಲ್ಲಿ ಸಿ ಸಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಬಿ.ಎಸ್.ಯಡಿಯೂರಪ್ಪನವರ ಪಾತ್ರ ಅನನ್ಯವಾಗಿದೆ. ಪಕ್ಷ ಅವರಿಗೆ ಕಾಲಕಾಲಕ್ಕೆ ಏನೇನು ಸ್ಥಾನಮಾನ ನೀಡಬೇಕೋ ಅದನ್ನು ನೀಡುತ್ತಲೆ ಬಂದಿದೆ. ಈಗ ಮುಖ್ಯಮಂತ್ರಿ ನಂತರ ಕೇಂದ್ರದಲ್ಲಿ ಸಂಸದೀಯ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಿ ಬಹುದೊಡ್ಡ ಹುದ್ದೆಯನ್ನೆ ನೀಡಿದೆ. ಇದರಿಂದ ಬಿಎಸ್‌ವೈರನ್ನು ಕಡೆಗಣಿಸಿದ್ದಾರೆ ಎಂಬ ವಿಪಕ್ಷಗಳ ಬಾಯಿಗೆ ಬೀಗ ಹಾಕಿದಂತಾಗಿದ್ದು, ವೀರಶೈವ ಲಿಂಗಾಯತ ಸಮುದಾಯದ ನಾಯಕನನ್ನು ಕಡೆಗಣಿಸಿಲ್ಲ ಎಂಬ ಸ್ಪಷ್ಟಸಂದೇಶ ರಾಜ್ಯಕ್ಕೆ ರವಾನೆ ಮಾಡಿದಂತಾಗಿದೆ. ಅಲ್ಲದೆ ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದರು.
ಮಾಜಿ ಸಚಿವ ಕೆಎಸ್ ಈಶ್ವರಪ್ಪಗೆ ಮತ್ತೆ ಜೀವ ಬೆದರಿಕೆ, ಈ ಸಲ ಪತ್ರದ ಮೂಲಕ
ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಇಟ್ಟಸಂದ್ರ ಸುರೇಶ್ ಮಾತನಾಡಿ, ಸಚಿವ ಎಂಟಿಬಿ ನಾಗರಾಜ್ ಅವರು ಉಪಚುನಾವಣೆಯಲ್ಲಿ ಸೋತರೂ ಸಹ ರಾಜಕೀಯ ಸ್ಥಾನಮಾನ ನೀಡಿದ ಕ್ಷೇತ್ರವನ್ನು ಎಂದಿಗೂ ಮರೆತಿಲ್ಲ. ಬದಲಾಗಿ ಬಿಜೆಪಿಯಲ್ಲಿ ಎಂಎಲ್ಸಿಯಾಗಿ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ವಿಶೇಷವಾಗಿ ತಂದು ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಕ್ಷೇತ್ರದ ಮತದಾರರು ಕೂಡ ಅಭಿವೃದ್ಧಿ ಚಿಂತನೆ ಹೊತ್ತವರನ್ನು ಕೈ ಹಿಡಿಯಬೇಕು ಎಂದರು.
ಬಿಜೆಪಿ ಸೇರ್ಪಡೆ:
ಈಸ್ತೂರು ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದ ಜಯಣ್ಣ ಹಾಗೂ ರಮೇಶ್ ಅವರು ತಮ್ಮ ಬೆಂಬಲಿಗರ ಜೊತೆಗೂಡಿ ಸಚಿವ ಎಂಟಿಬಿ ನಾಗರಾಜ್ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ರಘುವೀರ್, ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್, ಟೌನ್ ಅಧ್ಯಕ್ಷ ಡಾ.ಸಿ.ಜಯರಾಜ್, ಯುವ ಮೋರ್ಚಾ ಅಧ್ಯಕ್ಷ ತವಟಹಳ್ಳಿ ರಾಮು, ಎಸ್ಸಿ ಮೋರ್ಚಾ ಅಧ್ಯಕ್ಷ ದೊಡ್ಡಹರಳಗೆರೆ ನಾಗೇಶ್ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.