ಬಚ್ಚೇಗೌಡರು ದೌರ್ಜನ್ಯದಿಂದಲೇ ಚುನಾವಣೆಯಲ್ಲಿ ಗೆದ್ದವರು: ಸಚಿವ ಎಂಟಿಬಿ ನಾಗರಾಜ್‌

By Kannadaprabha NewsFirst Published Mar 12, 2023, 12:57 PM IST
Highlights

ಬಚ್ಚೇಗೌಡ ಹಾಗೂ ಅವರ ಮಗ ಶಾಸಕ ಶರತ್‌ ಬಚ್ಚೇಗೌಡರ ಬದ್ಧತೆ ಇಲ್ಲದ ರಾಜಕಾರಣ. ಅವರೆಂದೂ ಚುನಾವಣೆಯಲ್ಲಿ ಸತ್ಯ ಹೇಳಿ ಗೆದ್ದಿಲ್ಲ. ಸುಳ್ಳುಗಳು ಹೆಣೆದುಕೊಂಡೆ ಬದುಕಿದವರು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ಆರೋಪಿಸಿದರು.

ಹೊಸಕೋಟೆ (ಮಾ.12): ಬಚ್ಚೇಗೌಡ ಹಾಗೂ ಅವರ ಮಗ ಶಾಸಕ ಶರತ್‌ ಬಚ್ಚೇಗೌಡರ ಬದ್ಧತೆ ಇಲ್ಲದ ರಾಜಕಾರಣ. ಅವರೆಂದೂ ಚುನಾವಣೆಯಲ್ಲಿ ಸತ್ಯ ಹೇಳಿ ಗೆದ್ದಿಲ್ಲ. ಸುಳ್ಳುಗಳು ಹೆಣೆದುಕೊಂಡೆ ಬದುಕಿದವರು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ಆರೋಪಿಸಿದರು. ತಾಲೂಕಿನ ಜಡಿಗೇನಹಳ್ಳಿ ಹೋಬಳಿ ಮುಗಬಾಳ ಗ್ರಾಮದಲ್ಲಿ ಜಲ ಜೀವನ್‌ ಮಿಷನ್‌ ಯೋಜನೆಗೆ 1.57 ಕೋಟಿ ವೆಚ್ಚದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ದಶಕಗಳ ಕಾಲ ಆಡಳಿತ ಮಾಡಿದ ಬಚ್ಚೇಗೌಡರು ಹೊಸಕೋಟೆಯಲ್ಲಿ ಜನರಿಗೆ ಎಂದಿಗೂ ವಾಸ್ತವ ಹೇಳಿ ಮತ ಕೇಳಿಲ್ಲ. 

ಈಗ ಅವರ ಮಗ ಶರತ್‌ ಕೂಡ ಅವರ ಹಾದಿಯನ್ನೇ ತುಳಿಯುತ್ತಿದ್ದಾರೆ. ಸುಳ್ಳು ಹೇಳಿ ಮತ ಪಡೆಯೋದು, ಗೆದ್ದ ನಂತರ ದೌರ್ಜನ್ಯ, ದಬ್ಬಾಳಿಕೆ, ಅ​ಧಿಕಾರ ದುರ್ಬಳಸಿಕೊಂಡು ಸರ್ಕಾರಿ ಜಮೀನು ಕಬಳಿಸೋದೇ ಅವರ ಕೆಲಸವಾಗಿದೆ. ದೌರ್ಜನ್ಯದಿಂದ ಮತ ಹಾಕಿಸಿಕೊಂಡು ಗೆಲ್ಲುತ್ತಿದ್ದ ಇವರು, ಇದೀಗ ಜನರ ಮನೆ ಬಾಗಿಲಿಗೆ ಬಂದು ಕೈಕಾಲಿಗೆ ನಮಸ್ಕಾರ ಮಾಡುವಂತಹ ಸನ್ನಿವೇಶವನ್ನು ನಾನು ಕ್ಷೇತ್ರದಲ್ಲಿ ಉಂಟು ಮಾಡಿದ್ದೇನೆ ಎಂದರು. 

ನಂದಿನಿ ಹಾಲು ಕೊರತೆ ಹಿನ್ನೆಲೆ: ಕೆಎಂಎಫ್‌ಗೆ ಪತ್ರ ಬರೆದ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘಟನೆ

ಗ್ರಾಪಂ ಮಾಜಿ ಉಪಾಧ್ಯಕ್ಷ ಜಿ.ಎಂ.ಕೃಷ್ಣಪ್ಪ ಮಾತನಾಡಿ, ಶಾಸಕ ಶರತ್‌ ಬಚ್ಚೇಗೌಡರು ಉಪ ಚುನಾವಣೆಯಲ್ಲಿ ಗೆದ್ದು ಮುಗಬಾಳ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮಾಡಿರುವಷ್ಟುಅಭಿವೃದ್ಧಿ ಕಾರ್ಯಗಳನ್ನು ಎಂಟಿಬಿ ನಾಗರಾಜ್‌ ಮುಗಬಾಳ ಒಂದೇ ಗ್ರಾಮಕ್ಕೆ ಅನುದಾನ ತಂದು ಮಾಡಿದ್ದಾರೆ. ಜಲಜೀವನ್‌ ಮಿಷನ್‌ ಯೋಜನೆ ಜೊತೆಗೆ ವಿಶೇಷ ಅನುದಾನದ 40 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ಸುಬ್ಬಲಕ್ಷ್ಮೇ, ಗ್ರಾಪಂ ಸದಸ್ಯರಾದ ಎಂ.ಬಿ.ರಾಮಕೃಷ್ಣಪ್ಪ, ಸಯ್ಯದ್‌ ನಿಸ್ಸಾರ್‌, ದೊಡ್ಡಕೃಷ್ಣಪ್ಪ, ಶ್ರೀನಿವಾಸ್‌, ಅಜಂಬೇಗ್‌, ಮಂಜುನಾಥ್‌, ಹರೀಶ್‌ ಇತರರಿದ್ದರು.

ರಾಯಲಸೀಮ ಮಾದರಿ ರಿಗ್ಗಿಂಗ್‌ ರಾಜಕಾರಣಕ್ಕೆ ಬ್ರೇಕ್‌: ಆಂಧ್ರದ ರಾಯಲಸೀಮ ರೀತಿಯಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ಮತದಾರರನ್ನು ಹೆದರಿಸಿ ನಡೆಸುತ್ತಿದ್ದ ರಿಗ್ಗಿಂಗ್‌ ರಾಜಕಾರಣಕ್ಕೆ ಬ್ರೇಕ್‌ ಹಾಕಿದ್ದು ನಾನು. 2023ರಲ್ಲಿ ಜನ ನಮ್ಮನ್ನು ಗೆಲ್ಲಿಸಿ ಜನಸೇವೆ ಮಾಡಲು ಅವಕಾಶ ಕಲ್ಪಿಸಿಕೊಡುತ್ತಾರೆ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು. ತಾಲೂಕಿನ ತರಬಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 90ರ ದಶಕದಲ್ಲಿ ಬಚ್ಚೇಗೌಡರ ಕುಟುಂಬ ಆಂಧ್ರದ ರಾಯಲಸೀಮ ರೀತಿಯಲ್ಲಿ ರಿಗ್ಗಿಂಗ್‌ ಮತ್ತು ದೌರ್ಜನ್ಯ ರಾಜಕಾರಣದಿಂದ ಮತದಾರರನ್ನು ಹೆದರಿಸಿ ರಿಗ್ಗಿಂಗ್‌ ಮಾಡಿ ಚುನಾವಣೆ ನಡೆಸುತ್ತಿದ್ದರು. 

ಎಸ್‌.ಎಂ.ಕೃಷ್ಣ ಅವರು ಹೊಸಕೋಟೆ ಕ್ಷೇತ್ರಕ್ಕೆ ನನ್ನ ಕರೆತಂದ ನಂತರ ಇವೆಲ್ಲದಕ್ಕೂ ಬ್ರೇಕ್‌ ಬಿದ್ದಿದೆ. ನಾನು ಈ ಕ್ಷೇತ್ರಕ್ಕೆ ಬಂದ ನಂತರ ಜೀರೋದಲ್ಲಿದ್ದಂತಹ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿ ಹೀರೋ ಮಾಡಿದೆ. ಸಮ್ಮಿಶ್ರ ಸರಕಾರದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲವೆಂದು ರಾಜೀನಾಮೆ ನೀಡಿದೆ. ಆದರೆ 2019ರ ಉಪ ಚುನಾವಣೆಯಲ್ಲಿ ಸಿದ್ಧರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರ ಕುತಂತ್ರದಿಂದ ನಾನು ಸೋಲನ್ನು ಅನುಭವಿಸಬೇಕಾಯಿತು. ಹೊಸಕೋಟೆ ಕ್ಷೇತ್ರದ ಮತದಾರರು ಈ ಬಾರಿ ಚುನಾವಣೆಯಲ್ಲಿ ನಮ್ಮನ್ನು ಕೈ ಹಿಡಿಯುತ್ತಾರೆ. ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಕಲ್ಪಿಸಿಕೊಡುತ್ತಾರೆ ಎಂದು ತಿಳಿಸಿದರು.

ಬಡವರ ಹಣ ದೋಚಿದ ಕೇಂದ್ರ ಸಚಿವ ಭಗವಂತ ಖೂಬಾ: ಈಶ್ವರ ಖಂಡ್ರೆ ಆರೋಪ

ಕಾರ‍್ಯಕ್ರಮದಲ್ಲಿ ಬಿಜೆಪಿ ಯವ ಮೋರ್ಚಾ ಅಧ್ಯಕ್ಷ ತವಟಹಳ್ಳಿ ಆರ್‌. ರಾಮು, ಮುಖಂಡ ಕೋಡಿಹಳ್ಳಿ ಜಾನಿ, ಗ್ರಾಪಂ ಸದಸ್ಯರಾದ ಹೇಮಾ, ಮಂಜುನಾಥ್‌, ಮುರಳಿ, ಮುಖಂಡರಾದ ಮಂಜುನಾಥ್‌, ಜೆಸಿಬಿ ಮಂಜುನಾಥ್‌, ಸುರೇಶ್‌, ವಿಜಿ, ಮುನಿಕೃಷ್ಣಬಾಭು, ಪ್ರದೀಪ್‌, ಜಗದೀಶ್‌, ಬೀರಪ್ಪ, ಯಲ್ಲರಾಜು, ರಾಜು, ಪ್ರದೀಪ್‌ ಕುಮಾರ್‌, ಕೃಷ್ಣ, ಲಕ್ಷ್ಮಣ್‌, ನಾರಾಯಣಸ್ವಾಮಿ, ಮಾದಪ್ಪ, ಚಂದ್ರಪ್ಪ, ಯಲ್ಲಪ್ಪ, ಮಗ್ಗಪ್ಪ, ಪ್ರೇಮ್‌ ಸಾಗರ್‌, ಚಂದ್ರು, ಸುದೀಪ್‌, ರವಿ ಹಾಗೂ ಇತರರರಿದ್ದರು.

click me!