ಮುಖ್ಯಮಂತ್ರಿ ಸ್ಥಾನವನ್ನು ಸೇಲ್‌ಗಿಟ್ಟ ರೀತಿ ಬಿಜೆಪಿಯವರು ಪ್ರತಿಪಕ್ಷ ನಾಯಕನ ಸ್ಥಾನ ಮಾರಾಟಕ್ಕಿದ್ದಾರೆಯೇ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಲೇವಡಿ ಮಾಡಿದ್ದಾರೆ. ಪ್ರತಿಪಕ್ಷ ಸ್ಥಾನಕ್ಕೂ ನೂರಾರು ಕೋಟಿ ನಿಗದಿ ಮಾಡಿದ್ದಾರೋ ಏನೋ ಎಂದೂ ಅವರು ಪ್ರಶ್ನಿಸಿದ್ದಾರೆ.
ವಿಜಯಪುರ (ಜು.09): ಮುಖ್ಯಮಂತ್ರಿ ಸ್ಥಾನವನ್ನು ಸೇಲ್‌ಗಿಟ್ಟ ರೀತಿ ಬಿಜೆಪಿಯವರು ಪ್ರತಿಪಕ್ಷ ನಾಯಕನ ಸ್ಥಾನ ಮಾರಾಟಕ್ಕಿದ್ದಾರೆಯೇ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಲೇವಡಿ ಮಾಡಿದ್ದಾರೆ. ಪ್ರತಿಪಕ್ಷ ಸ್ಥಾನಕ್ಕೂ ನೂರಾರು ಕೋಟಿ ನಿಗದಿ ಮಾಡಿದ್ದಾರೋ ಏನೋ ಎಂದೂ ಅವರು ಪ್ರಶ್ನಿಸಿದ್ದಾರೆ. ಇದೇ ವೇಳೆ ನಮ್ಮ ಸರ್ಕಾರದಲ್ಲಿ ಭಾಗ್ಯಗಳನ್ನು ನಾವು ಶ್ರೀಮಂತರಿಗೆ ನೀಡುತ್ತಿಲ್ಲ ಎಂದು ಹೇಳಿದ ಅವರು, ಅನ್ನಭಾಗ್ಯ, ಬಸ್‌ಪಾಸ್, 200 ಯುನಿಟ್ ವಿದ್ಯುತ್, ಯುವನಿಧಿ ಎಲ್ಲವನ್ನೂ ಬಡವರಿಗಷ್ಟೇ ನೀಡಿದ್ದೇವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಬಡವರ ಬಗ್ಗೆ ಗೊತ್ತಿಲ್ಲ. ಅದಕ್ಕಾಗಿಯೇ ಬಡವರಿಗಾಗಿ ರೂಪಿಸಿದ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಟೀಕಿಸುತ್ತಿದ್ದಾರೆ. ಬಡವರ ಬಗ್ಗೆ ಜೋಶಿಯವರಿಗೆ ಗೊತ್ತಿಲ್ಲ. ಗೊತ್ತಿದ್ದರೆ ಅವರು ಈ ರೀತಿ ಮಾತನಾಡುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.
ಸಿಎಂ ಆಗಿದ್ದಾಗ ಎಚ್ಡಿಕೆ ಲೆಟರ್ ಕೊಟ್ಟಿರಲಿಲ್ವಾ?: ರಾಜ್ಯ ಸರ್ಕಾರದಲ್ಲಿ ಕಾಸಿಗಾಗಿ ವರ್ಗಾವಣೆ ದಂಧೆ ಆರಂಭವಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್, ವರ್ಗಾವಣೆ ಸಂಬಂಧ ಕೆಲವು ಶಿಫಾರಸು ಪತ್ರಗಳು ಹೋದ ಮಾತ್ರಕ್ಕೆ ಆರೋಪ ಮಾಡುವುದು ಸರಿಯಲ್ಲ. ಎಲ್ಲ ಸರ್ಕಾರದಲ್ಲೂ ಈ ರೀತಿ ನಡೆಯುತ್ತಿರುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಜೈನಮುನಿ ಹತ್ಯೆ ಸಮಗ್ರ ತನಿಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ
ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸರ್ಕಾರ ಈಗ ಅಸ್ತಿತ್ವಕ್ಕೆ ಬಂದಿದೆ. ಕುಮಾರಸ್ವಾಮಿ ಅವರು ಆತುರವಾಗಿ ಮಾತನಾಡುತ್ತಿದ್ದಾರೆ. ಸುಳ್ಳು ಮಾತನಾಡುವುದು ಸರಿಯಲ್ಲ. ಹಿಂದೆ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನಾನು ಮಂತ್ರಿಯಾಗಿದ್ದೆ. ಕುಮಾರಸ್ವಾಮಿ ಅವರು ಎರಡೆರಡು ಲೆಟರ್ ಕೊಟ್ಟಿರಲಿಲ್ವಾ? ಶಾಸಕರು ಬಳಿ ಹೋದಾಗ ಶಿಫಾರಸು ಪತ್ರ ಕೊಟ್ಟಿರುತ್ತಾರೆ. ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಬರೆದಿರುತ್ತಾರೆ. ಅದಕ್ಕೆ ಹಣದ ಲೇಪ ಕೊಡುವುದು ಸರಿಯಲ್ಲ,
ಯತೀಂದ್ರ ಟಾರ್ಗೆಟ್ ಸರಿಯಲ್ಲ: ವರ್ಗಾವಣೆ ಆರೋಪದಲ್ಲಿ ಯತೀಂದ್ರ ಅವರ ಹೆಸರನ್ನು ಯಾಕೆ ತರುತ್ತೀರಿ ಎಂದು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ ಎಂ.ಬಿ. ಪಾಟೀಲ್, ಅವರ ಮೇಲೆ ಯಾಕೆ ಗೂಬೆ ಕೂರಿಸುವುದು. ಮಾಡಿರುವ ಆರೋಪವನ್ನು ಸಾಬೀತು ಮಾಡಬೇಕು ಎಂದು ಆಗ್ರಹಿಸಿದರು.
ತಾಕತ್ತಿದ್ದರೆ ಎಚ್‌ಡಿಕೆ ಪೆನ್‌ಡ್ರೈವ್ ಬಿಡುಗಡೆ ಮಾಡಲಿ: ಸಚಿವ ಶರಣಪ್ರಕಾಶ್, ಎಸ್ಸೆಸ್ಸೆಂ ತಿರುಗೇಟು
ತನಿಖೆಗೆ ಬದ್ಧ: ಬಿಜೆಪಿ ಸರ್ಕಾರದ ಹಗರಣಗಳ ತನಿಖೆ ಮಾಡುವ ಮಾತಿಗೆ ಬದ್ಧರಾಗಿದ್ದೇವೆ. ಸಂಪುಟದಲ್ಲಿ ಈ ಬಗ್ಗೆ ಚರ್ಚೆ ಆಗುತ್ತದೆ. ಈ ಬಗ್ಗೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇಡೀ ಸಂಪುಟದ್ದು ಒಂದೇ ದನಿಯಾಗಿರುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಲೋಕಾಯುಕ್ತ ದಾಳಿಯ ವೇಳೆ ಅಧಿಕಾರಿಗಳ ಬಳಿ ಭಾರಿ ಪ್ರಮಾಣದ ಆಸ್ತಿ ಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನಾಲ್ಕು ವರ್ಷಗಳ 40 ಪರ್ಸೆಂಟ್ ಕಮಿಷನ್‌ನಿಂದ ಅಧಿಕಾರಿಗಳ ಆಸ್ತಿ ಜಾಸ್ತಿ ಆಗಿರಬಹುದು ಎಂದರು.