
ವಿಜಯಪುರ (ಡಿ.11): ಜೆಡಿಎಸ್ ಪಕ್ಷದಲ್ಲಿ ಇದ್ದಾಗ ಮುಸ್ಲಿಮರ ಓಲೈಕೆ ಮಾಡುತ್ತಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಬಿಜೆಪಿ ಸೇರುತ್ತಲೇ ‘ಹಿಂದೂ ಹುಲಿ’ ಎಂದು ಬಿರುದು ಇರಿಸಿಕೊಂಡು ಓಡಾಡುತ್ತಿದ್ದಾರೆ. ಅವರು ಸಮಾನತೆ ಸಾರಿರುವ ಬಸವನಾಡಿನಲ್ಲಿ ಜನಿಸಿದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳರು ಇಸ್ಲಾಂ ಹಾಗೂ ಧರ್ಮಗುರು ತನ್ವೀರ್ ಪೀರಾ ಹಾಶ್ಮಿ ವಿರೋಧಿ ನಡೆ ಅನುಸರಿಸುತ್ತಾ ಬಂದಿದ್ದಾರೆ.
ಅವರ ಮುಸ್ಲಿಂ ದ್ವೇಷದಿಂದಲೇ ಈಚೆಗೆ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದ ನೆಪ ಮಾಡಿಕೊಂಡು ಧರ್ಮಗುರು ತನ್ವೀರ್ ಪೀರಾ ಹಾಶ್ಮಿ ವಿರುದ್ಧ ಐಸಿಸ್ ಸಂಪರ್ಕದ ಆರೋಪ ಮಾಡಿರುವುದಲ್ಲದೆ, ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ- ಮೌಲ್ವಿ ಜೊತೆಗಿನ ಫೋಟೋ ಹಾಕಿ ವೈರಲ್ ಮಾಡಿಸಿದ್ದಾರೆ. ಹೀಗೆ ಯತ್ನಾಳ ಅನಗತ್ಯವಾಗಿ ಮತ್ತೊಬ್ಬರ ಚಾರಿತ್ರ್ಯಹರಣದಂಥ ಹೀನಕೃತ್ಯ ಮಾಡಬಾರದು. ಅವರಿಗದು ಶೋಭೆ ತರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಜನವರಿ ಅಂತ್ಯಕ್ಕೆ ರಾಜ್ಯದಲ್ಲಿ ಪ್ರವಾಸೋದ್ಯಮದ ಹೊಸ ನೀತಿ: ಸಚಿವ ಎಚ್.ಕೆ.ಪಾಟೀಲ್
ಇನ್ನು, ಈ ವಿಷಯದ ತನಿಖೆಗೆ ರಾಜ್ಯ ಸರ್ಕಾರದ ಅನುಮತಿ ಬೇಕಿಲ್ಲ. ತಾಕತ್ತಿದ್ದರೆ ಯತ್ನಾಳರೇ ಎನ್ಐಎ ಮೂಲಕವೋ, ಇಲ್ಲವೆ ಅವರೇ ನೇರವಾಗಿ ಅಮಿತ್ ಶಾ ಬಳಿ ತೆರಳಿ ಕೇಂದ್ರದಿಂದಲೇ ತನಿಖೆ ಮಾಡಿಸಲಿ. ಒಂದೊಮ್ಮೆ ತನ್ವೀರ್ ಪೀರಾ ವಿರುದ್ಧ ಆರೋಪ ಸಾಬೀತಾಗದಿದ್ದರೆ ಅವರಾಗ ಏನು ಮಾಡುತ್ತಾರೆ ಎಂದು ಈಗಲೇ ಸ್ಪಷ್ಟವಾಗಿ ಹೇಳಲಿ ಎಂದವರು ಸವಾಲು ಎಸೆದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ: ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು. ನೋಣವಿನಕೆರೆ ಸ್ವಾಮೀಜಿಯವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗಲಿ ಎಂದು ನೀಡಿರುವ ಹೇಳಿಕೆ ಕುರಿತು ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದರು. ಮುಖ್ಯಮಂತ್ರಿ ಮಾಡುವ ವಿಷಯ ಕಾಂಗ್ರೆಸ್ ಪಕ್ಷದ ವರಿಷ್ಠರ ಕೈಯಲ್ಲಿರುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಹೈಕಮಾಂಡ್ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇದ್ದಾರೆ.
ಅವರೆಲ್ಲ ವೀಕ್ಷಣೆ ಮಾಡಿ, ಶಾಸಕರ ಅಭಿಪ್ರಾಯ ಪಡೆದು, ಯಾರನ್ನು ಮುಖ್ಯಮಂತ್ರಿ ಮಾಡಬೇಕೆಂದು ನಿರ್ಧಾರ ಮಾಡುತ್ತಾರೆ ಎಂದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಏನು ಮಾತನಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇಂಥ ವಿಷಯಗಳಲ್ಲಿ ಬಹಿರಂಗವಾಗಿ ಚರ್ಚಿಸದೆ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಶಿಕ್ಷಣ ಸಂಸ್ಥೆಗೆ ಜಾಗದ ಮಾಲೀಕರಿಂದ ತೊಂದರೆ?: ಆರೋಪಿಗಳ ಜತೆ ಪೊಲೀಸರು ಶಾಮೀಲು!
ಅಪ್ಪಟ ಕಾಂಗ್ರೆಸ್ಸಿಗರಾದ ಬಿ.ಕೆ.ಹರಿಪ್ರಸಾದ್ ಬದ್ಧತೆಯನ್ನು ನಾವ್ಯಾರೂ ಪ್ರಶ್ನೆ ಮಾಡುವುದಿಲ್ಲ, ಪ್ರಶ್ನೆ ಮಾಡಲು ಆಗದು. ಅನೇಕ ಬಾರಿ ಅವರು ಸಲಹೆ, ಸೂಚನೆ ಕೊಟ್ಟಿದ್ದಾರೆ. ಎಲ್ಲ ಸಮುದಾಯಗಳಿಗೂ ಅನುದಾನ ಕೊಡಿ ಎಂದು ಹೇಳಿರುತ್ತಾರೆ. ಹಿಂದುಳಿದ ಸಮುದಾಯಗಳ ನಾಯಕರಾದ ಅವರು ಜನರ ನೋವನ್ನು ಅರ್ಥೈಸಿಕೊಂಡವರು. ಹೀಗಾಗಿ ಎಲ್ಲರಿಗೂ ಅನುದಾನ ಕೊಡಿ ಎಂದು ಹೇಳಿರಬಹುದು. ಅದರಲ್ಲೇನು ತಪ್ಪಿದೆ ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.