ಬೆಳೆ ಪರಿಹಾರಕ್ಕೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಒಂದು ನಯಾಪೈಸೆ ಕೊಟ್ಟಿಲ್ಲ. ಆದರೆ, ರಾಜ್ಯದಿಂದಲೇ ರೈತರ ನೆರವಿಗೆ ದಾವಿಸಲು 2600 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.
ಮೈಸೂರು (ಡಿ.11): ಬೆಳೆ ಪರಿಹಾರಕ್ಕೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಒಂದು ನಯಾಪೈಸೆ ಕೊಟ್ಟಿಲ್ಲ. ಆದರೆ, ರಾಜ್ಯದಿಂದಲೇ ರೈತರ ನೆರವಿಗೆ ದಾವಿಸಲು 2600 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು 175 ಆಶ್ವಾಸನೆಗಳಲ್ಲಿ 83 ಆಶ್ವಾಸನೆಗಳನ್ನು ಈಡೇರಿಸಿ ಪ್ರಸಕ್ತ ವರ್ಷದಲ್ಲಿ 75 ಸಾವಿರ ಕೋಟಿ ಖರ್ಚು ಮಾಡಲಾಗಿದೆ.
ಅದೇ ರೀತಿ ಚುನಾವಣೆ ಮುನ್ನ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ 27 ಸಾವಿರ ಕೋಟಿ ರೂ. ನೀಡಲಾಗಿದೆ ಎಂದರು. 15ನೇ ಹಣಕಾಸು ಯೋಜನೆಯ ಅನುದಾನ 5700 ಕೋಟಿ ರೂ. ಬಾಕಿ ಕೊಡಬೇಕಾದ ಕೇಂದ್ರ ಸರ್ಕಾರ ಉಳಿಸಿಕೊಂಡಿದೆ. ಕೇಂದ್ರ ಸರ್ಕಾರವು ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಅವರು ದೂರಿದರು. ಟಿಎಂಸಿ ಸಂಸದರಾಗಿದ್ದ ಮಹುವಾ ಮೊಯಿತ್ರಾ ಅವರನ್ನು ಕೇಂದ್ರ ಸರ್ಕಾರ ಉಚ್ಛಾಟಿಸಿರುವುದು ಬಿಜೆಪಿಯ ಅನಾಗರಿಕ ಮತ್ತು ಮಹಿಳಾ ವಿರೋಧಿ ನೀತಿ ಆಗಿದೆ.
ಜಾತಿ ಗಣತಿ ವರದಿ ತಿಳಿಯದೇ ಕೆಲವರ ವಿರೋಧ: ಸಚಿವ ಶಿವರಾಜ ತಂಗಡಗಿ
ತಪ್ಪು ಮಾಡಿಲ್ಲದ ಬಗ್ಗೆ ವಿವರಣೆ ಹೇಳಲು ಅವಕಾಶ ಕೊಡದೆ ಏಕಾಏಕಿ ಉಚ್ಛಾಟಿಸಿರುವುದು ಖಂಡನಿಯ. ಅದಾನಿ ವಿಚಾರದಲ್ಲಿ ಪ್ರಶ್ನೆ ಕೇಳಲು 2 ಕೋಟಿ ರೂ. ಪಡೆದಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನೆ ಕೇಳಿದರೆ ತಪ್ಪೇನು? 3 ರಾಜ್ಯಗಳ ಚುನಾವಣಾ ಫಲಿತಾಂಶದ ಗುಂಗು ತಲೆಗೇರಿದೆ. ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲು- ಗೆಲುವನ್ನು ಸಮನಾಗಿ ಸ್ವೀಕರಿಸುತ್ತೇವೆ ಹೊರತು ಓಡಿ ಹೋಗಲ್ಲ. ಟಿಎಂಸಿ ಪಕ್ಷದ ಸಂಸದರಾದರೂ ಅವರ ಹೋರಾಟಕ್ಕೆ ನಮ್ಮ ಬೆಂಬಲ ಇರುತ್ತದೆ ಎಂದು ಅವರು ಹೇಳಿದರು.
ಸಂಸದರಿಂದ ತಪ್ಪು ಮಾಹಿತಿ: ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ತಮ್ಮದೆಂದು ಬಿಂಬಿಸಿಕೊಂಡು ಸುಳ್ಳು ಹೇಳುತ್ತಿರುವ ಸಂಸದರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಮೈಸೂರು ನಗರಕ್ಕೆ ಮೆಟ್ರೋ ರೈಲು ಯೋಜನೆ ತರುವ ಮಾತನ್ನಾಡಿದ್ದ ಸಂಸದರು ಈಗ ಗ್ರೇಟರ್ ಮೈಸೂರು ರಚನೆ ಮಾಡಿದ ಮೇಲೆ ಮೆಟ್ರೋ ರೈಲು ಕುರಿತು ಮಾತನಾಡಿದ್ದಾರೆ. ಈ ಯೋಜನೆ ವಿಚಾರ ಮಾತನಾಡುವ ಮುನ್ನ ಗೊತ್ತಿರಲಿಲ್ಲವೆ? ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದಲ್ಲಿ ಪೆರಿಫೆರಲ್ ಯೋಜನೆ ಪ್ರಸ್ತಾಪ ಮಾಡಲಾಗಿತ್ತು. ಇದೀಗ ಮತ್ತೆ ಕಾಂಗ್ರೆಸ್ ಸರ್ಕಾರವೇ ಕಾರ್ಯಗತಗೊಳಿಸಲು ಮುಂದಾಗಿದ್ದರೂ ನಾನು ಮಾಡಿಸಿದ್ದೆಂದು ಹೇಳುತ್ತಿದ್ದಾರೆ. ಈ ಯೋಜನೆಗೂ-ಸಂಸದರಿಗೂ ಸಂಬಂಧವೇ ಇಲ್ಲ ಎಂದು ಅವರು ಹೇಳಿದರು.
ಎಸ್ಸಿಪಿ- ಟಿಎಸ್ಪಿ ಯೋಜನೆಯನ್ನು ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದ ಬಿಜೆಪಿ ಸರ್ಕಾರ ಈಗ ಅನುದಾನ ಕಡಿತದ ಮಾತನಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಎಸ್ಸಿಪಿ- ಟಿಎಸ್ಪಿ ಯೋಜನೆಯನ್ನು ಮೊದಲ ಬಾರಿಗೆ ತಂದಿರುವ ರಾಜ್ಯ ಇದ್ದರೆ ಅದು ಕರ್ನಾಟಕ ಮಾತ್ರ. ಈಗ ಜನರಲ್ಲಿ ಗೊಂದಲ ಮೂಡಿಸಲು ಸುಳ್ಳು ಆರೋಪ ಮಾಡುತ್ತಿದ್ದಾರೆ. ದಲಿತರ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕ ಹಕ್ಕಿಲ್ಲ ಎಂದು ಅವರು ಟೀಕಿಸಿದರು.
ಜಾತಿ ಗಣತಿ ಬಗ್ಗೆ ಊಹಾಪೋಹ ಬೇಡ: ಸಚಿವ ಪರಮೇಶ್ವರ್
ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗದೆ ಹತಾಶೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮಾನಸಿಕ ಚಿಕಿತ್ಸೆಗೆ ಒಳಪಡಿಸಬೇಕು. ಮೌಲ್ವಿ ಜೊತೆ ವ್ಯವಹಾರಲ್ಲಿ ಪಾಲುದಾರರು. ಹೀಗಿದ್ದರೂ, ಮಾನಸಿಕ ಸ್ಥಿಮಿತ ಕಳೆದುಕೊಂಡು ಮುಖ್ಯಮಂತ್ರಿ ವಿರುದ್ಧ ಇಲ್ಲಸಲ್ಲದ ವಿಚಾರಗಳನ್ನು ಮುಂದಿಟ್ಟುಕೊಂಡು ಐಸಿಸ್ ಸಂಪರ್ಕ ಕಲ್ಪಿಸುವ ಮಾತನಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಮುಖಂಡರಾದ ಈಶ್ವರ್ ಚಕ್ಕಡಿ, ಕೆ. ಮಹೇಶ್, ಗಿರೀಶ್ ಇದ್ದರು.