10 ಗುಂಡಿ ತೆಗೆದ ಬಳಿಕ ಧರ್ಮಸ್ಥಳ ಬಗ್ಗೆ ಬಿಜೆಪಿಗರ ಮಾತು: ಸಚಿವ ಎಂ.ಬಿ. ಪಾಟೀಲ್‌

Published : Aug 25, 2025, 01:18 PM IST
 Large and Medium Industries Minister MB Patil (Photo/ANI)

ಸಾರಾಂಶ

ಬಿಜೆಪಿಯವರು 10 ಗುಂಡಿ ತೆಗೆದ ಮೇಲೆ ಮಾತನಾಡುತ್ತಿದ್ದಾರೆ. ಇಲ್ಲಿಯವರೆಗೆ ಯಾಕೆ ಮಾತನಾಡಲಿಲ್ಲ? ಈಗ ರಾಜಕೀಯಕ್ಕಾಗಿ ಮಾತನಾಡುತ್ತಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್‌ ಕಿಡಿಕಾರಿದರು.

ಬೆಂಗಳೂರು (ಆ.25): ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಆರೋಪ ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ. ಇದೀಗ ಧರ್ಮಸ್ಥಳದ ಬಗ್ಗೆ ಇರುವ ಜನರ ನಂಬಿಕೆ ಹೆಚ್ಚಾಗಲಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ , ಬಿಜೆಪಿ ಎಂಬುದು ಮುಖ್ಯವಲ್ಲ. ಸರ್ಕಾರ ಎಸ್‌ಐಟಿ ರಚನೆ ಮಾಡಿದಾಗ ಬಿಜೆಪಿಯವರು ಸುಮ್ಮನಿದ್ದರು. ತನಿಖೆ ನಡೆದು ಗುಂಡಿ ಅಗೆಯುವಾಗಲೂ ತಟಸ್ಥವಾಗಿದ್ದರು. ಬಿಜೆಪಿಯವರು 10 ಗುಂಡಿ ತೆಗೆದ ಮೇಲೆ ಮಾತನಾಡುತ್ತಿದ್ದಾರೆ. ಇಲ್ಲಿಯವರೆಗೆ ಯಾಕೆ ಮಾತನಾಡಲಿಲ್ಲ? ಈಗ ರಾಜಕೀಯಕ್ಕಾಗಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಯಾರೇ ಆಗಿದ್ದರೂ ಆರೋಪ ಬಂದ ಮೇಲೆ ತನಿಖೆ ಮುಖಾಂತರವೇ ಸತ್ಯ ಗೊತ್ತಾಗಬೇಕು. ಮಂಜುನಾಥ ಸ್ವಾಮಿ ಅಂದ್ರೆ ಶಿವ ಎಂದರ್ಥ. ಅದರಲ್ಲೂ ಧರ್ಮಾಧಿಕಾರಿಗಳು ಜೈನ ಸಮುದಾಯಕ್ಕೆ ಸೇರಿದ್ದಾರೆಂದು ಅವರ ಮೇಲೆ ಹಲವು ಆರೋಪ ಕೇಳಿ ಬಂದಿತ್ತು. ಹೀಗಾಗಿ ಕ್ಷೇತ್ರದ ಪಾವಿತ್ರ್ಯತೆ ಬಗ್ಗೆ ನಂಬಿಕೆ ಉಳಿಸಲು ಎಸ್‌ಐಟಿ ತನಿಖೆ ನಡೆಸಬೇಕಾಯಿತು. ಇದೀಗ ಜನರಲ್ಲಿ ವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಿದರು. ಅಕ್ರಮ ಬೆಟ್ಟಿಂಗ್‌ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಬಂಧನ ಕುರಿತು ಪ್ರತಿಕ್ರಿಯಿಸಿದ ಅವರು, ತಪ್ಪು ಮಾಡಿದ್ದರೆ ಶಿಕ್ಷೆಯಾಗುತ್ತದೆ, ಇಲ್ಲದಿದ್ದರೆ ಇಲ್ಲ. ಎಲ್ಲವನ್ನೂ ಕಾನೂನು ತೀರ್ಮಾನ ಮಾಡುತ್ತದೆ ಎಂದರು.

ಆಲಮಟ್ಟಿ ಬಗ್ಗೆ ಮಹಾ ವಾದಕ್ಕೆ ಅರ್ಥವಿಲ್ಲ: ಆಲಮಟ್ಟಿ ಅಣೆಕಟ್ಟು ಎತ್ತರಿಸುವುದರಿಂದ ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಯಾಗುತ್ತದೆ ಎನ್ನುವುದು ಅರ್ಥವಿಲ್ಲದ ವಾದವಾಗಿದೆ. ಮಹಾರಾಷ್ಟ್ರದ ಈ ತಕರಾರು ನ್ಯಾಯಾಧಿಕರಣ, ಸುಪ್ರೀಂಕೋರ್ಟ್‌ ಮತ್ತು ಲೋಕಸಭೆಯಲ್ಲೂ ತಿರಸ್ಕೃತವಾಗಿದೆ ಎಂದು ತಿಳಿಸಿದ್ದಾರೆ. ಕರ್ನಾಟಕವು ಆಲಮಟ್ಟಿ ಜಲಾಶಯದ ಎತ್ತರವನ್ನು ಈಗಿರುವ 519.60 ಮೀ.ನಿಂದ 524.25 ಮೀ.ಗೆ ಎತ್ತರಿಸುವುದರಿಂದ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗುತ್ತದೆ ಎನ್ನುವ ಮಹಾರಾಷ್ಟ್ರದ ತಕರಾರಿಗೆ ಅರ್ಥವಿಲ್ಲ.

ಆ ವಾದವನ್ನು ಈಗಾಗಲೇ ತಿರಸ್ಕರಿಸಲಾಗಿದೆ. ಇನ್ನು, ಆಲಮಟ್ಟಿ ಅಣೆಕಟ್ಟು ನಿರ್ಮಿಸುವುದಕ್ಕೆ ಮುನ್ನವೇ ಸಾಂಗ್ಲಿಯಲ್ಲಿ 1694, 1976, 1994 ಮತ್ತು 1997ರಲ್ಲಿ ಭೀಕರ ಪ್ರವಾಹ ಸೃಷ್ಟಿಯಾಗಿತ್ತು. ಇನ್ನು ಸುಪ್ರೀಂಕೋರ್ಟ್‌ 2000ನೇ ಇಸವಿಯಲ್ಲಿ ಅಣೆಕಟ್ಟು ಎತ್ತರಕ್ಕೆ ಆದೇಶಿಸಿದೆ ಎಂದರು.ಸುಪ್ರೀಂಕೋರ್ಟ್‌ ಆದೇಶದ ನಂತರವೂ ಮಹಾರಾಷ್ಟ್ರ 2005ರಲ್ಲಿ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ, ಅಲ್ಲೂ ಮಧ್ಯಂತರ ಮನವಿ ತಿರಸ್ಕೃತಗೊಂಡಿದೆ. ಈ ಬಗ್ಗೆ ನ್ಯಾಯಾಧಿಕರಣವು 2010 ಮತ್ತು 2013ರಲ್ಲಿ ವಿಸ್ತೃತ ವರದಿ ನೀಡಿದೆ. ಈ ವಿಚಾರದಲ್ಲಿ ಹಿಪ್ಪರಗಿ ಜಲಾಶಯವನ್ನೂ ಪರಿಗಣಿಸಲಾಗಿದೆ.

ಜತೆಗೆ, ಕೃಷ್ಣಾ ನೀರು ಹಂಚಿಕೆ ಸಂಬಂಧ ರಚಿಸಲಾದ ಎರಡನೇ ನ್ಯಾಯಾಧಿಕರಣವು ನೀಡಿರುವ ತೀರ್ಪನ್ನು ಈವರೆಗೂ ಯಾವ ರಾಜ್ಯಗಳೂ ಪ್ರಶ್ನಿಸಿಲ್ಲ. ಹೀಗಿರುವಾಗ, ಈಗ ಇದ್ದಕ್ಕಿದ್ದಂತೆ ತಕರಾರು ತೆಗೆಯುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಿಸಿದರೆ ತನಗೆ ನೀರು ಬರುವುದಿಲ್ಲ ಎಂದು ಅವಿಭಜಿತ ಆಂಧ್ರಪ್ರದೇಶ ಆಕ್ಷೇಪಣೆ ತೆಗೆದಿತ್ತು. ಆದರೆ, ಅದರ ವಾದ ಕೂಡ ಮಾನ್ಯವಾಗಿಲ್ಲ. ಮಹಾರಾಷ್ಟ್ರವು ಈಗ ನಾವು ಅಣೆಕಟ್ಟೆಯ ಎತ್ತರಕ್ಕೆ ಮುಂದಾಗಿರುವುದನ್ನು ಮರುಪರಿಶೀಲಿಸಲು ಆಗ್ರಹಿಸಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ. ಐದು ವರ್ಷಗಳ ಕಾಲ ನೀರಾವರಿ ಸಚಿವನಾಗಿದ್ದ ನನಗೆ ಇದರ ಬಗ್ಗೆ ಸ್ಪಷ್ಟ ತಿಳಿವಳಿಕೆಯಿದೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದ್ವೇಷಪೂರಿತ ದಾಳಿ ತಡೆಗೆ ರಕ್ಷಾ ಕವಚ ಈ ವಿಧೇಯಕ: ಸುಪ್ರೀಂ ಕೋರ್ಟ್‌ ವಕೀಲ ಸಂಕೇತ ಏಣಗಿ ಲೇಖನ
ಅಹಿಂದ, ಎಡಪಂಥೀಯರೇ ನಿಜವಾದ ದ್ವೇಷಭಾಷಣಕಾರರು: ಎನ್.ರವಿಕುಮಾರ್ ಲೇಖನ