ಸುತ್ತೂರು ಮಠಕ್ಕೆ ಹೋಗಿದ್ದಾಗ ಸಿಎಂ ಮಾಂಸಾಹಾರ ಸೇವಿಸಿಲ್ಲ. ಮಠದ ಒಳಗೂ ಹೋಗಿಲ್ಲ. ಬಿಜೆಪಿಯವರು ಇಂಥ ಕ್ಷುಲಕ್ಕ ವಿಚಾರವಿಟ್ಟುಕೊಂಡು ರಾಜಕೀಯ ಮಾಡ್ತಾರೆ. ಕೇಂದ್ರದಿಂದ ಹಣ ತಂದು ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಕೊಡ್ರಪ್ಪ ಎಂದರೆ ಇಂಥ ರಾಜಕೀಯ ಮಾಡ್ತಾರೆ ಎಂದು ಸಚಿವ ಎಂಬಿ ಪಾಟೀಲ್ ವಾಗ್ದಾಳಿ ನಡೆಸಿದರು.
ಬೆಂಗಳೂರು (ಫೆ.9): ನಮ್ಮ ಸರ್ಕಾರ ಬಡವರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ತಂದಿದ್ದರಿಂದ ರಾಜ್ಯ ದಿವಾಳಿಯಾಗಿಲ್ಲ. ರಾಜ್ಯ ದಿವಾಳಿ ಆಗಿದ್ರೆ ಗ್ಯಾರಂಟಿ ಯೋಜನೆ ಕೊಡೊಕಾಗ್ತಿತ್ತ? ಅಭಿವೃದ್ಧಿಗೂ ಕೇಂದ್ರ ಸರ್ಕಾರ ಹಣ ಕೊಡಬೇಕು ತಾನೇ? ಆದರೆ ಕೇಂದ್ರ 15ನೇ ಹಣಕಾಸು ಆಯೋಗದ 62 ಸಾವಿರ ಕೋಟಿ ರೂಪಾಯಿ ಹಣ ಇನ್ನೂ ಬಂದಿಲ್ಲ ಎಂದು ಸಚಿವ ಎಂಬಿ ಪಾಟೀಲ್ ತಿರುಗೇಟು ನೀಡಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಿದೆ ಎಂಬ ಬಿಜೆಪಿಯವರ ಟೀಕೆಗೆ ತಿರುಗೇಟು ನೀಡಿದ ಸಚಿವರು, ದೆಹಲಿಯಲ್ಲಿ ಸಿಎಂ ಮಾತಾಡಿರೋದೇ ಒಂದು ಶ್ವೇತ ಪತ್ರ ಆದಾಗ್ಯೂ ಕೂಡಾ ನಾವು ಶ್ವೇತ ಪತ್ರ ಹೊರಡಿಸುತ್ತೇವೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ದಿವಾಳಿಯಾಗಿಲ್ಲ. ಆದರೆ ನಮಗೆ ಕೇಂದ್ರದಿಂದ ನ್ಯಾಯಯುತವಾಗಿ ಬರಬೇಕಾದ ತೆರಿಗೆ ಹಣ ಬರುತ್ತಿಲ್ಲ. ನಾವು ಕೇಂದ್ರಕ್ಕೆ 4.5 ಲಕ್ಷ ಕೋಟಿ ತೆರಿಗೆ ಕಟ್ತೀವಿ. ಆದರೆ ಕೇಂದ್ರ ಸರ್ಕಾರ ನಮಗೆ ಅಭಿವೃದ್ಧಿಗೆ ಕೊಡ್ತಿರೋದು ಎಷ್ಟು? ಎಂದು ಪ್ರಶ್ನಿಸಿದರು.
ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್, ಬಿಜೆಪಿ, ಈಶ್ವರಪ್ಪ ಅಲ್ಲ: ಎಂಬಿ ಪಾಟೀಲ್ ಕಿಡಿ
ಸುತ್ತೂರು ಮಠಕ್ಕೆ ಸಿಎಂ ಮಾಂಸಾಹಾರಿ ಸೇವಿಸಿ ಹೋಗಿಲ್ಲ:
ಇನ್ನು ಸುತ್ತೂರು ಮಠಕ್ಕೆ ಸಿಎಂ ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ಹೋಗಿದ್ದಾರೆ ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ, ಬಿಜೆಪಿಯವರಿಗೆ ಬರೀ ಇಂಥದ್ದೇ ವಿಷಯ. ಸುತ್ತೂರು ಮಠಕ್ಕೆ ಹೋಗಿದ್ದಾಗ ಸಿಎಂ ಮಾಂಸಾಹಾರ ಸೇವಿಸಿಲ್ಲ. ಮಠದ ಒಳಗೂ ಹೋಗಿಲ್ಲ. ಬಿಜೆಪಿಯವರು ಇಂಥ ಕ್ಷುಲಕ್ಕ ವಿಚಾರವಿಟ್ಟುಕೊಂಡು ರಾಜಕೀಯ ಮಾಡ್ತಾರೆ. ರಾಜ್ಯದಲ್ಲಿ ಬರಗಾಲ ಬಂದಿದೆ ರೈತರು ಸಂಕಷ್ಟದಲ್ಲಿದ್ದಾರೆ. ಕೇಂದ್ರದಿಂದ ಟೀಂ ಬಂದು ಹೋಗಿದೆ ಆದರೂ ಹಣ ಬಿಡುಗಡೆ ಮಾಡಿಲ್ಲ. ಮೊದಲ ಹಣ ಬಿಡುಗಡೆ ಮಾಡಿಸಿ ರೈತರ ಬದುಕು ಕಟ್ಟಿಕೊಡ್ರಪ್ಪ ಎಂದು ಬಿಜೆಪಿ, ಈಶ್ವರಪ್ಪ ಅವರನ್ನ ಕೇಳಿ ನೋಡಿ ಏನು ಹೇಳ್ತಾರೆ. ಯುಪಿಎ ಸರ್ಕಾರದಲ್ಲಿ ಹಣ ಕೊಟ್ಟಿಲ್ಲ ಅಂತಾರೆ. ಆದರೆ ಯುಪಿಎ ಸರ್ಕಾರ ಇದ್ದಾಗ ಬರಗಾಲಕ್ಕೆ ಹಣ ಕೊಟ್ಟಿತ್ತ. 72 ಸಾವಿರ ಕೋಟಿ ರೂಪಾಯಿ ಕೊಟ್ಟು ರೈತರ ಸಾಲ ಮನ್ನಾ ಮಾಡಿತ್ತು. ಆದರೆ ಪ್ರಧಾನಿ ಮೋದಿ ಅವರು ಮಾಡಿದ್ದಾರಾ? ಎಂದು ಕೇಂದ್ರದ ವಿರುದ್ಧ ಎಂಬಿ ಪಾಟೀಲ್ ವಾಗ್ದಾಳಿ ನಡೆಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಸಿಡಿದೆದ್ದ ಕೆಸಿ ನಾರಾಯಣಗೌಡ ಶೀಘ್ರದಲ್ಲೇ ಕಾಂಗ್ರೆಸ್‌ಗೆ?
ಹಿಂದು ಟ್ಯಾಕ್ಸ್ ಎಂಬ ಶಾಸಕ ಪೂಂಜಾ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ, ಈ ರೀತಿ ಹಿಂದು ಟ್ಯಾಂಕ್ಸ್ ಅಂತಾ ಹೇಳ್ತಾರೆ ಅಂದರೆ ಇಂಥವರು ಶಾಸಕರು ಆಗೋಕೂ ಅರ್ಹತೆ ಇಲ್ಲ. ಇವರು ಅಧಿಕಾರಕ್ಕಾಗಿ ಯಾವ ಮಟ್ಟಕ್ಕಾದರೂ ಇಳೀತಾರೆ ಅನ್ನೋದು ಇದ್ರಿಂದ ಗೊತ್ತಾಗುತ್ತಿದೆ. ಇಂಥ ಹೇಳಿಕೆ ಮೂರ್ಖತನ ಪರಮಾವಧಿ. ದೇಶದ ಸಂವಿಧಾನ, ನಮ್ಮ ದೇಶದ ಫ್ಯಾಬ್ರಿಕ್ ಗೊತ್ತಿಲ್ಲದ ಇಂಥ ಮೂರ್ಖರ ಪ್ರಶ್ನೆಗಳಿಗೆ ಉತ್ತರ ಕೊಡದೇ ಇರೋದು ಒಳ್ಳೇದು ಎಂದು ತಿರುಗೇಟು ನೀಡಿದರು.