
ಶಿವಮೊಗ್ಗ (ಡಿ.25): ಬಿಜೆಪಿಯವರು ಹಿಜಾಬ್ ವಿಚಾರದಲ್ಲಿ ಇಲ್ಲಸಲ್ಲದ ಟೀಕೆ ಮಾಡುವುದನ್ನು ಬಿಟ್ಟು, ಬರ ಅಧ್ಯಯನ ವರದಿಯನ್ನು ಕೇಂದ್ರಕ್ಕೆ ತಲುಪಿಸಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಹಿಜಾಬ್ ನಿಷೇಧ, ಪಠ್ಯ ಪುಸ್ತಕ ಪರಿಷ್ಕರಣೆ ಕೈ ಹಾಕಿದರು. ಆ ಸಂದರ್ಭದಲ್ಲೇ ಸಿದ್ದರಾಮಯ್ಯ ಅವರು ಹಿಜಾಬ್ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆಯಾ ಧರ್ಮಗಳ ಪದ್ಧತಿಗಳ ಪಾಲನೆಗೆ ಅಡ್ಡಿ ಉಂಟು ಮಾಡಬಾರದು ಎಂದಿದ್ದರು.
ಈಗ ಹಿಜಾಬ್ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದರು. ಕಾರ್ಯಕ್ರಮವೊಂದರಲ್ಲಿ ಯಾರೋ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ನಿಷೇಧ ಹಿಂಪಡೆಯುವ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ. ಬಿಜೆಪಿಯವರು ಇಂತಹ ವಿಷಯಗಳನ್ನು ಮಾತ್ರ ಆಯ್ಕೆ ಮಾಡುತ್ತಾರೆ. ಈ ಹಿಂದೆಯೂ ಪರೇಶ್ ಮೇಸ್ತಾ ವಿಚಾರದಲ್ಲಿ ಹಾಗೂ ಮೊನ್ನೆ ನಡೆದ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಘಟನೆ ವೇಳೆ ಧರ್ಮಗಳ ವಿರುದ್ಧ ಗಲಭೆ ಸೃಷ್ಠಿಸಲು ಮುಂದಾಗಿದ್ದರು ಎಂದು ಖಾರವಾಗಿ ಹೇಳಿದರು. ನಮ್ಮ ದೇಶ ಗಲಭೆಯ ಕಾರಣಕ್ಕೆ ಪ್ರಸಿದ್ಧವಾಗಿಲ್ಲ.
ವೈವಿಧ್ಯತೆಯ ಕಾರಣಕ್ಕೆ ಮನ್ನಣೆ ಗಳಿಸಿದೆ. ಶಾಲೆಯಲ್ಲಿ ಮಕ್ಕಳು ಸಮಾನವಾಗಿರಬೇಕು. ಹಾಗೆಯೇ, ಅವರವರ ಧರ್ಮದ ಪದ್ಧತಿಗೂ ಮನ್ನಣೆ ನೀಡಬೇಕಿದೆ. ಹಿಜಾಬ್ ಕುರಿತು ಎಸ್‌ಡಿಎಂಸಿ ಅವರು ತೀರ್ಮಾನ ಕೈಗೊಳ್ಳಬಹುದು ಎಂದು ನ್ಯಾಯಾಲಯ ಆದೇಶಿಸಿತ್ತು. ಹಿಜಾಬ್ ನಿಷೇಧ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಜೊತೆ ಸಮಾಲೋಚಿಸಲಿದ್ದಾರೆ. ಕಾನೂನು ಇಲಾಖೆ ಅಧಿಕಾರಿಗಳು ಕೂಡ ಪರಿಶೀಲಿಸಲಿದ್ದಾರೆ ಎಂದು ತಿಳಿಸಿದರು. ಬಿಜೆಪಿಯವರು ಬರ ಅಧ್ಯಯನ ನಡೆಸಿದರು. ಅದರ ವರದಿ ಎಲ್ಲಿದೆ.
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ, ಅಲ್ಲಿವರೆಗೂ ಮನೆ ಸೇರಲ್ಲ: ಬಿ.ವೈ.ವಿಜಯೇಂದ್ರ
ಮೊದಲು ಅದನ್ನು ಕೇಂದ್ರಕ್ಕೆ ತಲುಪಿಸಲಿ. ರಾಜ್ಯದಿಂದ ಕೇಂದ್ರಕ್ಕೆ ₹4 ಲಕ್ಷ ಕೋಟಿ ತೆರಿಗೆ ಪಾವತಿ ಆಗುತ್ತಿದೆ. ಆದರೆ, ಕೇಂದ್ರದಿಂದ ರಾಜ್ಯಕ್ಕೆ ಸಿಗುತ್ತಿರುವ ಪಾಲು ತೀರಾ ಕಡಿಮೆ ಇದೆ. ಇಂತಹ ವಿಷಯಗಳನ್ನು ಬಿಜೆಪಿ ಪ್ರಸ್ತಾಪಿಸಲಿ ಎಂದು ಕುಟುಕಿದರು. ಹಿಜಾಬ್ ವಿಚಾರದಲ್ಲಿ ರಾಜ್ಯದಲ್ಲಿ ಗಲಭೆಯಾದ್ರೆ ಸಿಎಂ ಸಿದ್ದರಾಮಯ್ಯ ಕಾರಣ ಎಂದು ಈಶ್ವರಪ್ಪ ಹೇಳಿದ್ದಾರೆ. ದಂಗೆ ಮಾಡುವವರೇ ಹೀಗೆ ಹೇಳುವುದು. ಕಾನೂನು ಬಹಳ ಗಟ್ಟಿಯಾಗಿದೆ, ತಲೆ ಕೆಡಿಸಿಕೊಳ್ಳಲು ಹೋಗಬೇಡಿ. ಎಲ್ಲಾ ಧರ್ಮಗಳಿಗೂ ಗೌರವ ಕೊಡಬೇಕು, ಅದೇ ರೀತಿ ಹಿಜಾಬ್‌ಗೂ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.