ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಜಿಲ್ಲೆಯಲ್ಲಿ ಪಕ್ಷದ ಎಲ್ಲಾ ಶಾಸಕರು ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ (ಅ.20): ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಜಿಲ್ಲೆಯಲ್ಲಿ ಪಕ್ಷದ ಎಲ್ಲಾ ಶಾಸಕರು ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಗುರುವಾರ ಉತ್ತರಿಸಿದ ಸಚಿವರು, ನನಗೆ ಬಹಳ ಒಳ್ಳೆ ಖಾತೆ ಕೊಟ್ಟಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ವಹಿಸಿದ್ದಾರೆ. ಸತೀಶ ಜಾರಕಿಹೊಳಿ ಅವರು ಆರು ಬಾರಿ ಶಾಸಕರು, ನಾನು ಎರಡು ಬಾರಿ ಶಾಸಕಿಯಾಗಿ, ಮೊದಲ ಬಾರಿ ಸಚಿವೆ ಆಗಿರುವೆ.
ಸತೀಶಣ್ಣ ಬಹಳ ಅನುಭವ ಇರುವವರು. ಅವರ ನೇತೃತ್ವದಲ್ಲಿ ನಾವೆಲ್ಲ ಒಂದಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವರು ತಿಳಿಸಿದರು. ಜಿಲ್ಲೆಗೆ ಯಾವುದೇ ಅಧಿಕಾರಿಯನ್ನು ಸತೀಶ್ ಜಾರಕಿಹೊಳಿ ಅವರು ಹಾಕಿದಾಗ ನಾನು ಎಸ್ ಎನ್ನುತ್ತೇನೆ. ನಾನು ಯಾವುದೇ ಅಧಿಕಾರಿ ಹಾಕಿದಾಗ ಅವರು ಎಸ್ ಎನ್ನುತ್ತಾರೆ. ಅದೇ ಕಾಂಪ್ರಮೈಸ್ ಅಷ್ಟೇ ಎಂದರು. ಸಹೋದರ ಚನ್ನರಾಜ್ ಹಟ್ಟಿಹೊಳಿ ಅವರ ಎಂಎಲ್ಸಿ ಚುನಾವಣೆಯಿಂದ ಹಿಡಿದು ಇಲ್ಲಿ ತನಕ ಒಂದೇ ಒಂದು ವಿಚಾರದಲ್ಲೂ ಸತೀಶ್ ಅವರ ಜೊತೆ ಭಿನ್ನಾಭಿಪ್ರಾಯಗಳು ಬಂದಿಲ್ಲ. ನಾನು ಗಟ್ಡಿ ಧ್ವನಿಯಲ್ಲಿ ಸ್ಪಷ್ಟಪಡಿಸ್ತೇನೆ.
ಡಿಕೆಶಿ ಮೇಲೆ ಸಿಬಿಐ ತನಿಖೆ ರಾಜಕೀಯ ಪ್ರೇರಿತ: ವೀರಪ್ಪ ಮೊಯ್ಲಿ
ಒಂದೇ ಒಂದು ವಿಚಾರದಲ್ಲೂ ನನ್ನ ಸತೀಶಣ್ಣ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ ಎಂದರು. ನಾನು ಯಾವುದಾದರೂ ಹಸ್ತಕ್ಷೇಪ ಮಾಡಿದ್ದೀನಾ? ಜಿಲ್ಲಾಡಳಿತದಲ್ಲೇನಾದ್ರೂ ನನ್ನಿಂದ ತೊಂದರೆ ಆಗ್ತಿದೆಯಾ ಅಂತ ಮತ್ತೊಮ್ಮೆ ಸಚಿವರನ್ನೆ ಕೇಳಿ ಎಂದ ಹೆಬ್ಬಾಳಕರ್, ಬೆಳಗಾವಿ ರಾಜಕೀಯ ವಿಷಯಕ್ಕೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಯಾಕೆ ಎಳೆದು ತರುತ್ತೀರಾ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.
ಮೊಮ್ಮಗಳ ನಾಮಕರಣವಿತ್ತು: ಬುಧವಾರ ಬೆಳಗಾವಿಯಲ್ಲಿ ಡಿ.ಕೆ.ಶಿವಕುಮಾರ್ ಅವರ ಸ್ವಾಗತಕ್ಕೆ ಜಿಲ್ಲೆಯ ಶಾಸಕರು ಹೋಗದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮುಜುಗರ ಅನ್ನೋ ಶಬ್ದ ರಾಜಕಾರಣದಲ್ಲಿ ಇಲ್ಲ. ಅದರ ಹೊರತಾಗಿ ನಾವು ರಾಜಕಾರಣ ಮಾಡಬೇಕಾಗುತ್ತದೆ. ಒಂದು ತಿಂಗಳು ಮೊದಲೇ ನನ್ನ ಮೊಮ್ಮಗಳ ನಾಮಕರಣ ನಿಗದಿಯಾಗಿತ್ತು. ಹೀಗಾಗಿ ನಾನು ಭದ್ರಾವತಿಗೆ ಹೋದೆ. ಉಸ್ತುವಾರಿ ಸಚಿವರು ಕೂಡ ಮೊದಲೇ ತಿಳಿಸಿದ್ದರು. ಅವರು ಬೆಂಗಳೂರಲ್ಲೇ ಇದ್ದರು. ದಸರಾ ಹಬ್ಬ, ವಿವಿಧ ಕಾರಣಗಳಿಂದ ಇತರೆ ಶಾಸಕರು ಹೋಗಿರಲಿಲ್ಲ. ನಾನು ಅಧ್ಯಕ್ಷರಿಗೆ ಮುಂಚಿತವಾಗಿ ಗಮನಕ್ಕೆ ತಂದಿದ್ದೆ ಎಂದು ಸಚಿವರು ಹೇಳಿದರು.
ಡಿಕೆಶಿ ವಿರುದ್ಧ ಬಿಜೆಪಿ ರಾಜಕೀಯ ದ್ವೇಷ: ಸಚಿವ ಎಂ.ಬಿ.ಪಾಟೀಲ್
ಡಿಕೆ ಶಿವಕುಮಾರ್ ಸಮರ್ಥರಿದ್ದಾರೆ: ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಡಿ.ಕೆ.ಶಿವಕುಮಾರ್ ಸಮರ್ಥರಿದ್ದಾರೆ. ಯಾವುದೇ ಕಾನೂನು ಹೋರಾಟವಾದರೂ ಸಮರ್ಥವಾಗಿ ಎದುರಿಸುತ್ತಾರೆ. ಎಲ್ಲವನ್ನೂ ನಿಭಾಯಿಸುತ್ತಾರೆ. ಸಂವಿಧಾನ ಕಾನೂನಿನ ಬಗ್ಗೆ ಗೌರವವಿದೆ. ಸಮರ್ಥವಾಗಿ ನಿಭಾಯಿಸಿ ಜಯಶಾಲಿಯಾಗಿ ಹೊರಬರ್ತಾರೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.