ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ರಾಜಕೀಯ ದ್ವೇಷ ಸಾಧಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ವಿಜಯಪುರ (ಅ.20): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ರಾಜಕೀಯ ದ್ವೇಷ ಸಾಧಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಆದಾಯ ಮೀರಿ ಆಸ್ತಿ ಹೊಂದಿದ ಆರೋಪಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಸಮ್ಮತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯೆ ನೀಡಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆದಾಯ ಮೀರಿ ಆಸ್ತಿ ಮಾಡಿರುವ ಬಗ್ಗೆ ಸಿಬಿಐ ತನಿಖೆಗೆ ಹೈಕೋರ್ಟ್ ಅಸ್ತು ಎಂದಿದೆ.
ಆದರೆ ಈ ಬಗ್ಗೆ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ. ಡಿ.ಕೆ.ಶಿವಕುಮಾರ್ ಹಾಗೂ ಅವರ ಕಾನೂನು ತಂಡ ಮೇಲ್ಮನವಿ ಸಲ್ಲಿಸುವ ಕೆಲಸ ಮಾಡಲಿದೆ. ನಾವು ಹಾಗೂ ಪಕ್ಷ ಡಿ.ಕೆ.ಶಿವಕುಮಾರ್ ಜೊತೆಗಿದ್ದೇವೆ ಎಂದರು. ಪ್ರತಿಪಕ್ಷಗಳ ರಾಜೀನಾಮೆ ಬೇಡಿಕೆಯಲ್ಲಿ ಹುರುಳಿಲ್ಲ. ಡಿ.ಕೆ.ಶಿವಕುಮಾರ್ ಮೇಲಿನ ಆರೋಪ ಪಟ್ಟಿ ಸಿಬಿಐ ಬಳಿಯಿದೆ. ನ್ಯಾಯಾಲಯಕ್ಕೆ ಸಲ್ಲಿಕೆಯಾಗಬೇಕು. ಆಗ ನ್ಯಾಯಾಲಯದಲ್ಲಿ ಏನು ನಡೆಯುತ್ತದೆ ಎಂಬುವುದನ್ನು ನೋಡೋಣ. ಅವರ ಮೇಲಿನ ಆರೋಪ ಇನ್ನೂ ಸಾಬೀತಾಗಿಲ್ಲ. ಆರೋಪ ಸಾಬೀತಾಗದೆ ರಾಜೀನಾಮೆ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಸಮರ್ಥಿಸಿಕೊಂಡರು.
ಸರ್ಕಾರ ಬೀಳಿಸೋ ತಾಕತ್ತು ಒಳಗಿನ ಕಾಂಗ್ರೆಸ್ಸಿಗರಿಗಿದೆ: ಸಿ.ಟಿ.ರವಿ
ಕಾಂಗ್ರೆಸ್ಸಿನ ಕೆಲ ಶಾಸಕರು ಮುಂದಿನ ಸಿಎಂ ಡಿಕೆಶಿ ಎಂಬ ಹೇಳಿಕೆ ನೀಡುತ್ತಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅವರ ಮೇಲಿನ ಪ್ರೀತಿಯಿಂದ ಡಿಕೆಶಿ ಪರ ಹೇಳಿಕೆ ನೀಡಿರಬಹುದು. ಬಿಜೆಪಿ ಮಾಜಿ ಸಚಿವ ಸೋಮಶೇಖರ ನಾನು ಸಿಎಂ ಆಗಲಿ ಎಂದ ಹೇಳಿಕೆ ನೀಡಿದ್ದರು. ಇದೆಲ್ಲ ಪ್ರೀತಿ, ವಿಶ್ವಾಸದಿಂದ ಮಾತಾಡಿರುವ ಮಾತುಗಳು ಎಂದರು. ಕಾಂಗ್ರೆಸ್ ನಲ್ಲಿ ಸತೀಶ ಜಾರಕಿಹೊಳಿ ರೆಬೆಲ್ ನಾಯಕರಾಗಲ್ಲ. ಈಗಾಗಲೇ ಅವರ ಜೊತೆಗೆ ಮಾತನಾಡಿದ್ದೇನೆ. ಶಾಸಕರೆಲ್ಲರೂ ಮೈಸೂರು ದಸರಾಕ್ಕೆ ತೆರಳಲು ಅಣಿಯಾಗಿದ್ದರು. ನನ್ನನ್ನು ಸಹ ಕರೆದಿದ್ದರು. ಶಾಸಕರೆಲ್ಲರೂ ಸೇರಿಕೊಂಡು ಟ್ರಿಪ್ ಹೋಗಬಾರದಾ ಎಂದು ಪ್ರಶ್ನಿಸಿದರು.