ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಖುರ್ಚಿ ರೇಸ್‌: ಸಚಿವೆ ಲಕ್ಷ್ಮಿ ಹೆಬ್ಳಾಳ್ಕರ್ ಹೇಳಿದ್ದಿಷ್ಟು

By Kannadaprabha NewsFirst Published Sep 4, 2024, 5:28 AM IST
Highlights

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಹಿಂದುಳಿದ ವರ್ಗಗಳ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಬಡವರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ ಎಂದ ಸಚಿವೆ ಲಕ್ಷ್ಮಿ ಹೆಬ್ಳಾಳ್ಕರ್ 

ತುಮಕೂರು(ಸೆ.04):  ಬಾಕಿ ಇರುವ ಕೋಲಾರ, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ವೇತನವನ್ನು ಗಣೇಶ ಚತುರ್ಥಿ ಒಳಗಾಗಿ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಳಾಳ್ಕರ್ ಭರವಸೆ ನೀಡಿದರು.

ನಗರದ ಬಾಲಭವನದಲ್ಲಿ ಪೋಷಣ್ ಮಾಸಾಚರಣೆ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಸೀಮಂತ ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿರು. ಅಂಗನವಾಡಿ ನೌಕರರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಿಂದ ವೇತನ ನೀಡಲಾಗುತ್ತಿದೆ. ಈ ಬಾರಿ ಕೇಂದ್ರ ದಿಂದ ಅನುದಾನ ಬರುವುದು ವಿಳಂಬವಾಗಿದೆ. ಹಾಗಾಗಿ ಈ ಮೂರು ಜಿಲ್ಲೆಗಳ ನೌಕರರಿಗೆ ವೇತನ ತಡವಾಗಿದೆ ಎಂದರು.ಈ ಸಂಬಂಧ ರಾಜ್ಯ ಸರ್ಕಾರದಿಂದ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಶೀಘ್ರ ಕೇಂದ್ರದಿಂದ ಅನುದಾನ ಬರುವ ನಿರೀಕ್ಷೆಯಿದ್ದು, ಗಣಪತಿ ಹಬ್ಬದ ಒಳಗಾಗಿ ಕೋಲಾರ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಯ ಅಂಗನವಾಡಿ ನೌಕರರಿಗೆ ವೇತನ ಪಾವತಿಸಲಾಗುವುದು ಎಂದು ಹೇಳಿದರು.

Latest Videos

ರಾಜಭವನ ಒತ್ತಡದಲ್ಲಿ ಕೆಲಸ ಮಾಡುತ್ತಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಅಂಗನವಾಡಿ ನೌಕರರಿಗೆ ವೇತನ ವಿಳಂಬವಾಗಿರುವುದು ಇದೇ ಮೊದಲಲ್ಲ. ಹಾಗೆಯೇ ಈ ಮೂರು ಜಿಲ್ಲೆಗಳಿಗೆ ಮಾತ್ರವಲ್ಲ, ರಾಜ್ಯದ ಕೆಲ ಜಿಲ್ಲೆಗಳಲ್ಲೂ ಈ ರೀತಿಯ ಸಮಸ್ಯೆ ಆಗುತ್ತಿರುತ್ತದೆ. ಹಾಗಂತ ನಾನು ಯಾವ ಸರ್ಕಾರಗಳ ಮೇಲೂ ಆರೋಪ ಮಾಡುವುದಿಲ್ಲ. ಈ ರೀತಿಯ ವಿಳಂಬ ಮೊದಲಿನಿಂದಲೂ ಆಗುತ್ತಲೇ ಬಂದಿದೆ ಎಂದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ವಿಳಂಬ ಮಾಡಿದಾಗ ಈ ಸಮಸ್ಯೆ ಎದುರಾಗುತ್ತದೆ. ನಂತರ ಸರಿ ಹೋಗುತ್ತದೆ. ನಮ್ಮ ಇಲಾಖೆಯ ಬಹಳಷ್ಟು ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಣ ಬರುತ್ತದೆ. ಹಾಗಾಗಿ ಎರಡೂ ಇಲಾಖೆಗಳ ಅನುದಾನದಿಂದಲೇ ವೇತನ ನೀಡಬೇಕಾಗಿದೆ ಎಂದು ತಿಳಿಸಿದರು.

ಅಂಗನವಾಡಿಗಳಿಗೆ ಮೊಟ್ಟೆ, ಹಾಲಿನ ಪೌಡರ್ ವಿತರಣೆಗೆ ಯಾವುದೇ ರೀತಿಯ ಹಣದ ಕೊರತೆ ಇಲ್ಲ. ಅಂಗನವಾಡಿಗೆ ಅಗತ್ಯ ಇರುವ ಪೌಷ್ಠಿಕ ಆಹಾರ ಪದಾರ್ಥಗಳ ವಿತರಣೆ ಸಮರ್ಪಕವಾಗಿ ನಡೆಯುತ್ತಿದೆ. ಗೃಹಲಕ್ಷ್ಮೀ ಯೋಜನೆಯಡಿ ಜಿಎಸ್‌ಟಿ ಮತ್ತು ಆದಾಯ ತೆರಿಗೆ ಪಾವತಿ ಮಾಡುವವರ ಹೆಸರು ಮಾತ್ರ ನೋಂದಣಿಯಾಗಿಲ್ಲ. ಇದನ್ನು ಹೊರತುಪಡಿಸಿ ಯಾರ ಹೆಸರನ್ನೂ ತೆಗೆದು ಹಾಕಿಲ್ಲ. ಜಿಎಸ್‌ಟಿ ಮತ್ತು ಆದಾಯ ತೆರಿಗೆ ಪಾವತಿಸುವವರ ಹೆಸರುಗಳು ನೋಂದಣಿ ಮಾಡುವ ಸಂದರ್ಭದಲ್ಲೇ ಅಪ್‌ಲೋಡ್ ಆಗಿರುವುದಿಲ್ಲ ಎಂದು ಹೇಳಿದರು.

ಅದ್ದೂರಿ ಸ್ವಾಗತ‌‌‌‌:

ಇದಕ್ಕೂ ಮೊದಲು ಬಾಲಭವನದಲ್ಲಿ ಆಯೋಜಿಸಿದ್ದ ಪೋಷಣ್ ಅಭಿಯಾನ ಹಾಗೂ ಸೀಮಂತ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಎಂ.ಜಿ. ರಸ್ತೆಯಲ್ಲಿ ಪೂರ್ಣಕುಂಭ ಕಳಸ ಹೊತ್ತ ಸುಮಂಗಲಿಯರು ಅದ್ಧೂರಿಯಾಗಿ ಸ್ವಾಗತಿಸಿದರು.

ಪೂರ್ಣಕುಂಭ ಕಳಸದೊಂದಿಗೆ ಮೆರವಣಿಗೆಯಲ್ಲಿ ಬಾಲಭವನಕ್ಕೆ ಆಗಮಿಸಿದ ಸಚಿವೆ 11 ಮಂದಿ ಗರ್ಭಿಣಿ ಮಹಿಳೆಯರಿಗೆ ಮಡಿಲಕ್ಕಿ ತುಂಬಿ ಸೀಮಂತ ನೆರವೇರಿಸಿದರು. ನಂತರ 5 ಮಂದಿ ವಿಕಲಚೇತನರಿಗೆ ಇಲಾಖೆ ವತಿಯಿಂದ ತ್ರಿಚಕ್ರ ವಾಹನಗಳು, ಕಿವಿ ಮಿಷನ್ ವಿತರಿಸಿದರು.

ಮುಡಾ ಪ್ರಕರಣ ಸಿಎಂ ವಿಚಾರಣೆ: 'ನಮಗೆ ಸಂವಿಧಾನ, ಕಾನೂನಿನ ಮೇಲೆ ಸಂಪೂರ್ಣ ವಿಶ್ವಾಸವಿದೆ' ಎಂದ ಲಕ್ಷ್ಮೀ ಹೆಬ್ಬಾಳ್ಕರ್

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಫಲಾನುಭವಿಗಳು ಪಾಲ್ಗೊಂಡಿದ್ದರು.

ಸಿಎಂ ಕುರ್ಚಿ ಖಾಲಿ ಇಲ್ಲ‌‌‌

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಹಿಂದುಳಿದ ವರ್ಗಗಳ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಬಡವರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಳಾಳ್ಕರ್ ಹೇಳಿದರು.

click me!