
ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ಸಚಿವ ಸಂಪುಟ ಪುನರ್‌ರಚನೆ ಹಾಗೂ ನಾಯಕತ್ವ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆ, ಕೃಷ್ಣ ಬೈರೇಗೌಡ ಅವರು ಸ್ಪಷ್ಟನೆ ನೀಡಿದ್ದಾರೆ. ಸರ್ಕಾರದಲ್ಲಿ ಬೃಹತ್ ಬದಲಾವಣೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಸಚಿವ ಸಂಪುಟ ಪುನರ್‌ರಚನೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಈಗ ಅದರ ಅನುಷ್ಠಾನ ನಡೆಯಲಿದೆ. ಸರ್ಕಾರಕ್ಕೆ ಎರಡು ವರ್ಷಕ್ಕೂ ಹೆಚ್ಚು ಕಾಲವಾದ ನಂತರ ಹೊಸ ಮುಖಗಳಿಗೆ ಅವಕಾಶ ನೀಡುವ ಸಮಯ ಬಂದಿದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ. ಈ ಮೂಲಕ ಅವರ ಮಾತಿನ ಮರ್ಮವೇನು ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಹೊಸ ಮುಖಗಳಿಗೆ ಅವಕಾಶ ನೀಡುವ ಸಮಯ ಎಂದರೆ ಮುಖ್ಯಮಂತ್ರಿ ಬದಲಾವಣೆ ಕೂಡ ಆಗಲಿದೆಯಾ ಎಂಬ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಸಂಪುಟಕ್ಕೆ ಅರ್ಹತೆ ಇರುವವರಿಗೆ ಅವಕಾಶ ದೊರೆಯಬೇಕು. ಆದರೆ ನಾಯಕತ್ವ ಬದಲಾವಣೆ ಕುರಿತಂತೆ ತೀರ್ಮಾನ ಮಾಡುವ ಅಧಿಕಾರ ಪಕ್ಷದ ಹೈಕಮಾಂಡ್‌ಗೆ ಮಾತ್ರ ಇದೆ. ಈ ಎರಡಕ್ಕೂ ಪರಸ್ಪರ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಅವರ ಮಾತಿನ ಒಳಾರ್ಥ ನಾಯಕತ್ವ ಕೂಡ ಬದಲಾವಣೆಯನ್ನು ಸೂಚಿಸುತ್ತದೆ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದೆ.
ಪಕ್ಷ ನನ್ನ ಮೇಲೆ ತೋರಿದ ವಿಶ್ವಾಸಕ್ಕೆ ನಾನು ಕೃತಜ್ಞ. ಪಕ್ಷವು ಈಗಾಗಲೇ ಮೂರು ಬಾರಿ ನನಗೆ ಸಚಿವ ಸ್ಥಾನ ನೀಡಿದೆ. ಹೈಕಮಾಂಡ್ ಹೇಳಿದರೆ ನಾನು ಸಚಿವ ಸ್ಥಾನ ತಕ್ಷಣ ಬಿಡಲು ಸಿದ್ಧನಿದ್ದೇನೆ. ಅವಕಾಶದ ವಿಷಯದಲ್ಲಿ ನನಗೆ ಯಾವುದೇ ಅಸಮಾಧಾನ ಇಲ್ಲ. ಆದರೆ ಕೆಲಸದಲ್ಲಿ ಇನ್ನೂ ಸಾಕಷ್ಟು ಮಾಡಲು ಉಳಿದಿದೆ ಎಂದು ಅವರು ಹೇಳಿದರು. ಸಚಿವ ಸ್ಥಾನದಲ್ಲಿರುವುದರಿಂದ ಕ್ಷೇತ್ರದಲ್ಲಿ ಜನರ ನಡುವೆ ತೊಡಗಿಕೊಳ್ಳಲು ಸಮಯ ಸಿಗುತ್ತಿಲ್ಲ. ಆದರೂ ಕೆಲಸ ಮಾಡುವ ಉತ್ಸಾಹ ಕಡಿಮೆಯಾಗಿಲ್ಲ. ನನಗೆ ಪಕ್ಷ ನೀಡಿದ ಅವಕಾಶದಿಂದ ನಾನು ತೃಪ್ತನಿದ್ದೇನೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ಪುನರ್ ರಚನೆಗೂ ನಾಯಕತ್ವ ಬದಲಾವಣೆಗೂ ಸಂಬಂಧವಿಲ್ಲ. ಪಕ್ಷ ನನಗೆ ಮೂರು ಬಾರಿ ಸಚಿವ ಸ್ಥಾನ ನೀಡಿದೆ. ಹೈಕಮಾಂಡ್ ಹೇಳಿದ್ರೆ ನಾನು ಸಚಿವ ಸ್ಥಾನ ಬಿಡಲು ರೆಡಿ. ಅರ್ಹತೆ ಮೀರಿ ನನಗೆ ಪಕ್ಷ ಅವಕಾಶ ಕೊಟ್ಟಿದೆ. ಸಚಿವ ಸ್ಥಾನದಿಂದ ಕ್ಷೇತ್ರದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಅವಕಾಶ ವಿಷಯದಲ್ಲಿ ನನಗೆ ಹೊಟ್ಟೆ ತುಂಬಿದೆ, ಆದ್ರೆ ಕೆಲಸದಲ್ಲಿ ಅಲ್ಲ. ಇನ್ನೂ ಮಾಡುವ ಕೆಲಸ ಬಾಕಿ ಇದೆ. ಅವಕಾಶದ ವಿಚಾರದಲ್ಲಿ ನಾನು ಸಂತೃಪ್ತಿ ಇದೆ ಎಂದಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸುತ್ತಾ, “ಇಂತಹ ವಿಷಯಗಳ ಬಗ್ಗೆ ನಾನು ಸಾರ್ವಜನಿಕವಾಗಿ ಮಾತನಾಡುವುದಿಲ್ಲ. ಮುಖ್ಯಮಂತ್ರಿ ಅವರು ನನಗೆ ಕೆಲಸ ಹಾಗೂ ಜವಾಬ್ದಾರಿ ನೀಡಿದ್ದಾರೆ. ರಾಜಕೀಯ ಅಭಿಪ್ರಾಯವನ್ನು ಹೇಳಲು ಪಕ್ಷದ ಒಳಚೌಕಟ್ಟು ಇದೆ. ಹೈಕಮಾಂಡ್ ಎದುರು ಬೇಕಾದರೆ ಮಾತನಾಡುತ್ತೇನೆ. ತೀರ್ಮಾನ ಕೈಗೊಳ್ಳುವುದು ಅವರ ಹಕ್ಕು,” ಎಂದು ಹೇಳಿದರು.
ಅವರು ಮುಂದುವರಿಸಿ, “ಬಿಜೆಪಿಗರು ದ್ರಾಕ್ಷಿ ಗೊಂಚಲು ಹುಳಿ ಅನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅಧಿಕಾರದ ಆಸೆಯಿಂದ ಅವರು ನಿರಂತರ ರಾಜಕೀಯ ಹೇಳಿಕೆಗಳ ಮೂಲಕ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅವರಿಗೆ ಬೇರೆ ಕೆಲಸವೇ ಇಲ್ಲದಂತಾಗಿದೆ,” ಎಂದು ಟೀಕಿಸಿದರು.
“ಒಬ್ಬೊಬ್ಬರಿಗೂ ತಮ್ಮದೇ ಅಭಿಪ್ರಾಯ ಇರುತ್ತದೆ. ಐದು ಬೆರಳು ಸಮನಾಗಿರುವುದಿಲ್ಲ. ಹೈಕಮಾಂಡ್ ಎಲ್ಲ ವಿಷಯಗಳನ್ನೂ ಗಮನಿಸುತ್ತಿದೆ ಮತ್ತು ತೀರ್ಮಾನ ಮಾಡುವ ಅಧಿಕಾರ ಅವರದೇ. ಬಿಜೆಪಿಗರಿಗೆ ಅಧಿಕಾರದ ಹಪಾಹಪಿಯೇ ಸರ್ವಸ್ವವಾಗಿದೆ; ಅಧಿಕಾರ ಕಳೆದುಕೊಂಡ ಬಳಿಕ ಅವರು ಅಶಾಂತಿಯಾಗಿದ್ದಾರೆ. ನಾವು ಜವಾಬ್ದಾರಿ ಸ್ಥಾನದಲ್ಲಿದ್ದೇವೆ, ಕೆಲಸ ಮಾಡುತ್ತಿದ್ದೇವೆ,” ಎಂದು ಸಚಿವ ಬೈರೇಗೌಡ ಸ್ಪಷ್ಟವಾಗಿ ಹೇಳಿದರು.
ಆರ್‌ಎಸ್‌ಎಸ್ ಪಥಸಂಚಲನಕ್ಕೆ ಸರ್ಕಾರ ಅನುಮತಿ ನೀಡುವ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಅವರು, “ಈ ವಿಷಯ ಪ್ರಸ್ತುತ ನ್ಯಾಯಾಲಯದ ವಿಚಾರಣೆಯಲ್ಲಿದೆ. ಕೋರ್ಟ್‌ನ ಸೂಚನೆ ಬರುವವರೆಗೆ ಯಾವುದೇ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಗೊಂದಲ ಉಂಟಾಗಿದೆ, ಅದನ್ನು ಸರಿಪಡಿಸುವುದು ಮುಖ್ಯ. ಕೋರ್ಟ್ ನೀಡುವ ನಿರ್ದೇಶನದಂತೆ ಸರ್ಕಾರ ಮುಂದುವರಿಯುತ್ತದೆ,” ಎಂದು ಹೇಳಿದರು.
ಇದೇ ವೇಳೆ, ಆರ್‌ಎಸ್‌ಎಸ್ ಸಂಸ್ಥೆಗಳಿಗೆ ನೀಡಲಾದ ಜಮೀನುಗಳ ಲ್ಯಾಂಡ್ ಆಡಿಟ್ ಕುರಿತು ಮಾತನಾಡಿದ ಅವರು, “ಅರ್ಹತೆ ಇರುವ ಸಂಸ್ಥೆಗೆ ಜಾಗ ನೀಡಿದ್ದರೆ ಅದು ಸರಿಯೇ ಸರಿ. ಆದರೆ ಅರ್ಹತೆ ಇಲ್ಲದ ಸಂಸ್ಥೆಗೆ ಜಮೀನು ನೀಡಿದ್ದರೆ ಅದು ತಪ್ಪು. ಇಂತಹ ಪ್ರಕರಣಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಆಗಲೂ ನಮ್ಮ ನಿಲುವು ಇದೇ ಇತ್ತು, ಈಗಲೂ ಅದೇ ನಿಲುವು ಮುಂದುವರೆಯುತ್ತದೆ,” ಎಂದು ಹೇಳಿದರು.
ಈ ಹೇಳಿಕೆಗಳಿಂದ ಸ್ಪಷ್ಟವಾಗುವುದೇನೆಂದರೆ, ಕೃಷ್ಣ ಬೈರೇಗೌಡ ಅವರು ಸಚಿವ ಸಂಪುಟ ಪುನರ್‌ರಚನೆ ಖಚಿತ ಎಂದು ದೃಢಪಡಿಸಿದರೂ, ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ. ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಅವರು ಮತ್ತೊಮ್ಮೆ ನೆನಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.