ಕೆ.ಆರ್.ಪೇಟೆ ಉಪ ಚುನಾವಣೆಯ ನನ್ನ ಗೆಲುವಿನಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ, ಚುನಾವಣಾ ಸಾರಥ್ಯ ವಹಿಸಿದ್ದ ಬಿ.ವೈ.ವಿಜಯೇಂದ್ರ ಶ್ರಮ ಅಪಾರ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ಮಂಡ್ಯ (ಫೆ.22): ಕೆ.ಆರ್.ಪೇಟೆ ಉಪ ಚುನಾವಣೆಯ ನನ್ನ ಗೆಲುವಿನಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ, ಚುನಾವಣಾ ಸಾರಥ್ಯ ವಹಿಸಿದ್ದ ಬಿ.ವೈ.ವಿಜಯೇಂದ್ರ ಶ್ರಮ ಅಪಾರ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು. ತಾಲೂಕಿನ ಮಾಚಹಳ್ಳಿ ಗ್ರಾಮದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ಉದ್ಘಾಟನಾ ಸಮಾರಂಭದ ಭಾಷಣದುದ್ದಕ್ಕೂ ಯಡಿಯೂರಪ್ಪ ಮತ್ತು ಅವರ ಮಕ್ಕಳನ್ನು ಕೊಂಡಾಡಿದರು. ವಿಜಯೇಂದ್ರ ತಂದೆಗೆ ತಕ್ಕ ಮಗನಾಗಿದ್ದಾರೆ. ಇಡೀ ಕರ್ನಾಟಕದಲ್ಲಿ ಯುವಕರಿಗೆ ಮತ್ತು ಬಿಜೆಪಿಗೆ ಶಕ್ತಿ ತುಂಬುತ್ತಿದ್ದಾರೆ.
ನಾನು ಜೆಡಿಎಸ್ ಪಕ್ಷದಲ್ಲಿದ್ದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ ಎಂದು ಅವರ ಜೊತೆ ಸೇರಿದೆ. ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಲು ಎರಡು ತಿಂಗಳ ಕಾಲ ವಿಜಯೇಂದ್ರ ಶ್ರಮಿಸಿದ್ದಾರೆ ಎಂದರು. ಜೆಡಿಎಸ್‌ನಲ್ಲಿದ್ದ ವೇಳೆ ಎರಡು ಚುನಾವಣೆ ಎದುರಿಸಿದ್ದೆ. ಅದರಲ್ಲಿ ಏಳೇಳು ಕೆಜಿ ಕರಗಿದ್ದೆ. ಬಿಜೆಪಿಯಿಂದ ಚುನಾವಣೆ ಎದುರಿಸಿದಾಗ 2 ಕೆಜಿ ಕೂಡ ಕರಗಲಿಲ್ಲ. ನನ್ನ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ವಿಜಯೇಂದ್ರ ಅವರೇ ವಹಿಸಿದ್ದರು. ವಿಜಯೇಂದ್ರ, ರಾಘವೇಂದ್ರ ಇಬ್ಬರೂ ತಂದೆಗೆ ತಕ್ಕ ಮಕ್ಕಳು. ಬಿ.ವೈ.ರಾಘವೇಂದ್ರ ಕೂಡ ತಂದೆಯಂತೆ ಶಿವಮೊಗ್ಗ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.
ಮಹದೇವಪ್ರಸಾದ್ ಪುತ್ರ ಗಣೇಶ್ ಪ್ರಸಾದ್‌ಗೆ ಗುಂಡ್ಲುಪೇಟೆ ಟಿಕೆಟ್
ವಿಜಯೇಂದ್ರ ಅವರು ಉತ್ತಮ ಸ್ಥಾನಕ್ಕೆ ಬೆಳೆಯಬೇಕು. ಮುಂದೊಂದು ದಿನ ಅವರು ಉತ್ತಮ ಸ್ಥಾನಕ್ಕೆ ಹೋಗುವರೆಂಬ ವಿಶ್ವಾಸ ನನಗಿದೆ. ಯಡಿಯೂರಪ್ಪ ಅವರು ಶ್ರಮ ಜೀವಿ. ಇಳಿ ವಯಸ್ಸಿನಲ್ಲೂ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ನನ್ನ ಚುನಾವಣೆ ವೇಳೆ ದಿನಕ್ಕೆ ಮೂರು ಸಲ ದೂರವಾಣಿ ಕರೆ ಮಾಡಿ ರಾಜಕೀಯ ಪರಿಸ್ಥಿತಿಯನ್ನು ತಿಳಿದುಕೊಳ್ಳುತ್ತಿದ್ದರು. ನನ್ನ ಚುನಾವಣೆಯನ್ನು ದೂರದಿಂದಲೇ ನಿರ್ವಹಣೆ ಮಾಡುತ್ತಿದ್ದರು. ಯಡಿಯೂರಪ್ಪ ಮತ್ತು ಮಕ್ಕಳ ಶ್ರಮ, ಸೇವೆ ಶ್ಲಾಘನೀಯ ಎಂದು ಕೊಂಡಾಡಿದರು.
ಕಾಂಗ್ರೆಸ್ ಸೇರಲ್ಲ, ಮಂಡ್ಯ ಉಸ್ತುವಾರಿ ಒಪ್ಪಲ್ಲ: ನಾನು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಇದೆಲ್ಲವೂ ಕೇವಲ ಗಾಳಿ ಸುದ್ದಿ, ವದಂತಿ ಅಷ್ಟೆ. ಇದಕ್ಕೆ ಯಾರೂ ಕಿವಿಗೊಡಬಾರದು ಎಂದು ರೇಷ್ಮೆ ಖಾತೆ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು. ವಿರೋಧಿಗಳು ಇಲ್ಲದ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದು ಎಲ್ಲಾದರೂ ಹೇಳಿದ್ದೇನಾ? ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಅನಿವಾರ್ಯತೆ ಏನಿದೆ? ಬಿಜೆಪಿಯಲ್ಲೇ ನಾನು ನೆಮ್ಮದಿಯಿಂದಿದ್ದೇನೆ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಹಾಗಾಗಿ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿ ಹಳ್ಳಿಯ ಟಾಪ್ 10 ಕಾಂಗ್ರೆಸ್ ಕಾರ್ಯಕರ್ತರಿಗೆ ಟಿವಿ ಗಿಫ್ಟ್: ಡಿ.ಕೆ.ಶಿವಕುಮಾರ್
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಕೊಟ್ಟಿರುವುದಕ್ಕೂ ನನಗೆ ಬೇಸರವಿಲ್ಲ. ಆ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿಲ್ಲ. ಈಗ ಮಂಡ್ಯ ಜಿಲ್ಲಾ ಉಸ್ತುವಾರಿ ಕೊಟ್ಟರೂ ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ, ಶಿವಮೊಗ್ಗದಲ್ಲಿ ಹಲವು ಕೆಲಸಗಳು ಅರ್ಧಕ್ಕೇ ನಿಂತಿವೆ. ಅದನ್ನು ಪೂರ್ಣಗೊಳಿಸುವ ಜವಾಬ್ದಾರಿ ನನ್ನ ಮೇಲಿದೆ. ಈ ನಡುವೆ ಮಂಡ್ಯ ಉಸ್ತುವಾರಿ ವಹಿಸಿಕೊಂಡರೆ ಒತ್ತಡ ಇನ್ನಷ್ಟುಹೆಚ್ಚಾಗುತ್ತದೆ. ಎರಡೂ ಕಡೆ ನ್ಯಾಯ ಸಲ್ಲಿಸಲು ಸಾಧ್ಯವಾಗಲ್ಲ ಎಂದು ಹೇಳಿದರು. ಬಿಜೆಪಿ ಯುವ ಸಮಾವೇಶಗಳ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಜಿಲ್ಲೆಯ ಆರು ಕ್ಷೇತ್ರಗಳ ಆಕಾಂಕ್ಷಿಗಳೊಂದಿಗೆ ಸಭೆ ನಡೆಸಿದ್ದಾರೆ. ಚುನಾವಣೆ ಪ್ರಚಾರ ಹೇಗಿರಬೇಕು, ಯುವ ಮತದಾರರನ್ನು ಹೇಗೆ ಸೆಳೆಯಬೇಕು, ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳುವ ಕುರಿತಂತೆ ಮನದಟ್ಟು ಮಾಡಿದ್ದಾರೆ ಎಂದರು.