ಗೌರಿಬಿದನೂರು ಕ್ಷೇತ್ರದಲ್ಲಿ ಕಮಲ ಅರಳಿಸಲು ಶ್ರಮಿಸಿ: ಸಚಿವ ಡಾ.ಕೆ.ಸುಧಾಕರ್‌

By Kannadaprabha NewsFirst Published Sep 3, 2022, 2:00 PM IST
Highlights

ರಾಜ್ಯ ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಪೂರೈಸಿದ್ದರೆ, ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದೆ. ಹಾಗಾಗಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಜನೋತ್ಸವ ಕಾರ್ಯಕ್ರಮ ಆಯೋಜನೆ: ಸುಧಾಕರ್‌

ಚಿಕ್ಕಬಳ್ಳಾಪುರ(ಸೆ.03): ಜಿಲ್ಲೆಯ ಗೌರಿಬಿದನೂರಿನಲ್ಲಿ ಬಿಜೆಪಿ ನೆಲೆ ಭದ್ರವಾಗಿದ್ದು ಒಗ್ಗಟ್ಟು ಮತ್ತು ಒಂದೇ ಗುರಿಯೊಂದಿಗೆ ಕ್ಷೇತ್ರದಲ್ಲಿ ಕಮಲ ಅರಳಿಸಲು ಶ್ರಮಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು. ದೊಡ್ಡಬಳ್ಳಾಪುರದಲ್ಲಿ ಸೆ.8ರಂದು ನಡೆಯಲಿರುವ ಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಶುಕ್ರವಾರ ಮಾತನಾಡಿ, ಮುಂದೆ ಎದುರಾಗಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಜನೋತ್ಸವ ಕಾರ್ಯಕ್ರಮ ಗಟ್ಟಿ ಅಡಿಪಾಯ ಆಗಬೇಕು ಎಂದು ಸಲಹೆ ನೀಡಿದರು.

ಸರ್ಕಾರದ ಸಾಧನೆ ತಿಳಿಸುವ ಜನೋತ್ಸವ

ಪ್ರಸ್ತುತ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಈ ಸಮಯದಲ್ಲಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಪೂರೈಸಿದ್ದರೆ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದೆ. ಹಾಗಾಗಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಜನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಜನಸಾಮಾನ್ಯರಿಗೆ ನೀಡಿರುವ ಜನಪರ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿಬೇಕು. ಸರ್ಕಾರದ ರಿಪೋರ್ಚ್‌ ಕಾರ್ಡ್‌ ಜನರ ಮುಂದಿಡಬೇಕು. ಅಂತಿಮವಾಗಿ ನಿರ್ಣಯ ಮಾಡುವುದು ಜನಸಾಮಾನ್ಯರೇ ಆಗಿರುವುದರಿಂದ ಜನರ ಮುಂದೆ ಎಲ್ಲ ಮಾಹಿತಿ ಇಡಬೇಕು ಎಂಬ ಉದ್ಧೇಶದಿಂದ ಜನೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

Karnataka Politics: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಜ್ಜಾಗುವಂತೆ ಮೋದಿ ಪರೋಕ್ಷ ಸೂಚನೆ?

ಬಿಜೆಪಿ ಸಿದ್ಧಾಂತ ದೇಶಕ್ಕಾಗಿ ಮೊದಲ ಹೋರಾಟ ಮಾಡುವುದು, ನಂತರ ರಾಜಕೀಯ ಪಕ್ಷ, ಕೊನೆಯದಾಗಿ ನಮ್ಮ ಬಗ್ಗೆ ನಾವು ವಿಚಾರ ಮಾಡಬೇಕು. ಅದೇ ವಿಚಾರವಾಗಿ ದೇಶಕ್ಕೆ ಸಮರ್ಪಣೆ ಮಾಡಿಕೊಳ್ಳಬೇಕು. ಮಂಗಳೂರಿನಲ್ಲಿ 3 ಸಾವಿರ ಕೋಟಿಗೂ ಹೆಚ್ಚು ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

ಫಲಾನುಭವಿಗಳನ್ನು ಕರೆತರಬೇಕು

ಮುಖ್ಯವಾಗಿ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆತರುವ ಕೆಲಸವಾಗಬೇಕು, ವಿದ್ಯಾಸಿರಿ ಯೋಜನೆ, ಕೃಷಿ ಸಮ್ಮಾನ್‌ ಯೋಜನೆಯಂತಹ ಫಲಾನುಭವಿಗಳು ತಪ್ಪದೇ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು, ರೈತರ ಖಾತೆಗೆ ಬರುತ್ತಿರುವ ಹಣ ನೀಡುತ್ತಿರುವವರು ಯಾರು ಎಂಬ ಅರಿವು ಜನಸಾಮಾನ್ಯರಿಗೆ ಇರಬೇಕಲ್ಲವೇ ಎಂದು ಸಚಿವರು ಪ್ರಶ್ನಿಸಿದರು. ಈ ಹಿಂದೆ ಯಾವುದೇ ಯೋಜನೆಯ ಹಣ ಪಡೆಯಬೇಕಾದರೆ ಮಧ್ಯವರ್ತಿಗಳಿಗೆ ಹಣ ಸಲ್ಲಿಸಬೇಕಿತ್ತು, ಅಲ್ಲದೆ ತಿಂಗಳುಗಳ ಗಟ್ಟಲೆ ಕಚೇರಿಗಳಿಗೆ ಅಳೆಯಬೇಕಿತ್ತು, ಆದರೆ ಈಗ ಅಂತಹ ಸ್ಥಿತಿ ಇಲ್ಲ ಎಂದರು.

ಫಸಲ್‌ ಭೀಮಾ ಯೋಜನೆಯಡಿ ರೈತರು ಬೆಳೆದ ಬೆಳೆಗಳಿಗೆ ಪರಿಹಾರ, ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರುಪಾಯಿ ಉಚಿತ ಚಿಕಿತ್ಸೆ ನೀಡುತ್ತಿದೆಯೆಂದ ಅವರು, ಬಿಜೆಪಿ ಜನರಿಗಾಗಿ ಶ್ರಮಿಸುತ್ತಿರುವ ಪಕ್ಷವಾಗಿದೆ. ಕಳೆದ ಮೂರು ವರ್ಷದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಜನಪರ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂಬ ಉದ್ಧೇಶದಿಂದ ಜನೋತ್ಸವ ಆಯೋಜಿಸಿದ್ದು, ಇದನ್ನು ಯಶಸ್ವಿಗೊಳಿಸಲು ಎಲ್ಲರೂ ಕೈ ಜೋಡಿಸಬೇಕೆಂದು ಸಚಿವರು ಕೋರಿದರು.

Karnataka Assembly Poll 2023 ಕಾಂಗ್ರೆಸ್ ಪಾಳಯದಲ್ಲಿ 'ದಲಿತೋತ್ಸವ' ಪೈಪೋಟಿ

ಕಾರ್ಯಕ್ರಮದಲ್ಲಿ ದ್ರಾಕ್ಷಿ ಮಂಡಳಿ ಅಧ್ಯಕ್ಷ ರವಿನಾರಾಯಣರೆಡ್ಡಿ, ಮಾಜಿ ಶಾಸಕಿ ಜೋತಿರೆಡ್ಡಿ, ಎಂ.ಎನ…. ಶಶಿಧರ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಗೌರಿಬಿದನೂರನ್ನು ಪಕ್ಷ ಗುರ್ತಿಸಿದೆ

ಗೌರಿಬಿದನೂರು ಕ್ಷೇತ್ರವನ್ನು ಪಕ್ಷ ಈಗಾಗಲೇ ಗುರ್ತಿಸಿದೆ. ರಾಜ್ಯ ಮಟ್ಟದ ಮಂಡಳಿಯೊಂದರ ಅಧ್ಯಕ್ಷ ಸ್ಥಾನ ಈ ಕ್ಷೇತ್ರಕ್ಕೆ ಸಿಕ್ಕಿದೆ. ಸೆ.8 ರಂದು ನಡೆಯಲಿರುವ ಜನೋತ್ಸವ ಪಕ್ಷ ಸಂಘಟನೆಗೆ ಒಂದು ಅವಕಾಶ. ಗೌರಿಬಿದನೂರಿನಲ್ಲಿರುವ 31 ಗ್ರಾಪಂ, ನಗರದಲ್ಲಿರುವ 31 ವಾರ್ಡುಗಳ ಜವಾಬ್ದಾರಿ ಸ್ಥಳೀಯ ಮುಖಂಡರಿಗೆ ವಹಿಸಬೇಕು ಎಂದು ಸಚಿವ ಡಾ.ಕೆ.ಸುಧಾಕರ್‌ ಪಕ್ಷದ ಮುಖಂಡರಿಗೆ ಸಲಹೆ ನೀಡಿದರು.
 

click me!