ಜನರ ಮೂಗಿಗೆ ತುಪ್ಪ ಹಚ್ಚುವ ಕಾಂಗ್ರೆಸಿಗರು: ಸಚಿವ ಹಾಲಪ್ಪ ಆಚಾರ್

By Govindaraj SFirst Published Nov 18, 2022, 2:31 PM IST
Highlights

ನೀರಾವರಿ ಯೋಜನೆ ವಿಚಾರದಲ್ಲಿ ಜನರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಅವರಿಗೆ ಈಗ ಎಲ್ಲೂ ಎಡ್ರೆಸ್‌ ಇಲ್ಲ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ. 

ಕುಕನೂರು (ನ.18): ನೀರಾವರಿ ಯೋಜನೆ ವಿಚಾರದಲ್ಲಿ ಜನರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಅವರಿಗೆ ಈಗ ಎಲ್ಲೂ ಎಡ್ರೆಸ್‌ ಇಲ್ಲ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ. ತಾಲೂಕಿನ ವೀರಾಪುರ ಗ್ರಾಮದಲ್ಲಿ 4.95 ಕೋಟಿ ವೆಚ್ಚದ ವೀರಾಪುರ ಗ್ರಾಮದಿಂದ ಭಾನಾಪುರ ಗ್ರಾಮದ ವರೆಗೆ ರಸ್ತೆ ಅಗಲೀಕರಣ ಅಭಿವೃದ್ಧಿ ಹಾಗೂ .4.95 ಕೋಟಿಯಲ್ಲಿ ವೀರಾಪುರದಿಂದ ಯತ್ನಟ್ಟಿಗ್ರಾಮದ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. 

ರೈತ ಆರ್ಥಿಕವಾಗಿ ಸಬಲರಾಗಬೇಕು ಎಂದು ನಾನು 2013 ಜನವರಿಯಲ್ಲಿ ಕೃಷ್ಣಾ ಬಿ ಸ್ಕೀಂಗೆ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹಾಗೂ ಆಗಿನ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಕರೆಯಿಸಿ ಅಡಿಗಲ್ಲು ಹಾಕಿಸಿದ್ದರೆ ಅದನ್ನು ಮಾಜಿ ಸಚಿವ ಬಸವರಾಜ ರಾಯರಡ್ಡಿ ಅಡ್ಡಗಲ್ಲು ಎಂದು ಜರಿದರು. ಸತ್ಯ ಹರಿಶ್ಚಂದ್ರ ಬಂದ್ರೂ ನೀರಾವರಿ ಆಗುವುದಿಲ್ಲ ಎಂದು ದೂರಿದ್ದ ಅವರೇ, ಇಂದು ಕೆರೆ ತುಂಬಿಸುವ ಯೋಜನೆಯ ಪುಸ್ತಕ ವಿತರಣೆ ಮಾಡುತ್ತಿರುವುದು ಚುನಾವಣೆ ಗಿಮಿಕ್‌ ಎಂದರು.

ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಭಾರೀ ಪೈಪೋಟಿ: 7 ಕ್ಷೇತ್ರಕ್ಕೆ 40ಕ್ಕೂ ಹೆಚ್ಚು ಜನರಿಂದ ಅರ್ಜಿ

ನಾನು ಇದುವರೆಗೂ ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೆಸರನ್ನು ಹೇಳಿ ಮಾತನಾಡಿರಲಿಲ್ಲ. ಆದರೆ ಈಗ ಮಾತನಾಡುವ ಸಂದರ್ಭ ಎದುರಾಗಿದೆ. ಸತ್ಯ ಹರಿಶ್ಚಂದ್ರ ಬಂದರೂ ನೀರಾವರಿ ಆಗುವುದಿಲ್ಲ ಎಂದಿದ್ದ ಅವರಿಗೆ ನೀರಾವರಿ ಬಗ್ಗೆ ಕಾಳಜಿ ಇತ್ತೆ? ಯೋಚಿಸಿ, ರೈತರ ಬಗ್ಗೆ ಒಲವು ಇದ್ದಿದ್ದರೆ ಯೋಜನೆ ಅನುಷ್ಠಾನಕ್ಕೆ ಶ್ರಮಿಸುತ್ತಿದ್ದರು. ಅವರಿಗೆ ಕೃಷ್ಣಾ ಬಿ ಸ್ಕೀಂನ 2ನೇ ಹಂತದ ಕಾಮಗಾರಿಗೆ ಅನುಮೋದನೆ ತರಲು ಆಗಲಿಲ್ಲ. ನೀರಾವರಿ ಮತ್ತು ಶಿಕ್ಷಣ ನನ್ನ ರಾಜಕೀಯ ಧ್ಯೇಯ. ಶೀಘ್ರದಲ್ಲಿ ಕ್ಷೇತ್ರದ ಕೆರೆಗಳಿಗೆ ನೀರು ತರುತ್ತೇನೆ. ಮಳೆ ನಿಮಿತ್ತ ಕಾಮಗಾರಿ ವಿಳಂಬವಾಗಿದೆ ಎಂದರು.

2003ರಲ್ಲಿ ಅರಕೇರಿ ಹಿರೇಹಳ್ಳ ಜಲಾಶಯ ನಿರ್ಮಾಣ ಆದಾಗ ಪುನರ್ವಸತಿ ಗ್ರಾಮಗಳಿಗೆ .507 ಕೋಟಿಯ ಪರಿಹಾರವನ್ನು ಮನೆ ಮನೆಗೆ ತಲುಪಿಸಿದ್ದೆ. ವೀರಾಪುರ, ಮುದ್ಲಾಪುರ, ಶಿರೂರು, ಮುತ್ತಾಳ ಪುನರ್ವಸತಿ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ವೀರಾಪುರ ಗ್ರಾಮಕ್ಕೆ .35 ಕೋಟಿ ಹಣ ನೀಡಿದ್ದೇನೆ. ವೀರಾಪುರ ಗ್ರಾಮಕ್ಕೆ 100 ಮನೆಗಳನ್ನು ನೀಡಲು ಸೂಚಿಸುತ್ತೇನೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತಪರ ಆಡಳಿತಗಾರರು. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ನೀಡಿದ್ದಾರೆ. ಸುಮಾರು 24 ಸಾವಿರ ಕೋಟಿ ರೈತರಿಗೆ ಬೆಳೆಸಾಲ ನೀಡಲು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರೈತರು ಸ್ವಾವಲಂಬಿಗಳಾಗಿ ಎಂದು ಪಿಎಂ ಕಿಸಾನ್‌ ಯೋಜನೆ ಜಾರಿಗೆ ತಂದಿದ್ದಾರೆ ಎಂದರು. ಶೀಘ್ರದಲ್ಲಿ ಅರಕೇರಿ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಿ, ಅರಕೇರಿ ಹಾಗು ವೀರಾಪುರ ಭಾಗದ ಜಮೀನುಗಳಿಗೆ ಹನಿ ನೀರಾವರಿ ಕಲ್ಪಿಸುತ್ತೇನೆ. ಹಿಂದೆಯೂ ಈ ಯೋಜನೆ ಇದ್ದು, ಆಡಳಿತ ಮಾಡಿದ ಪಕ್ಷಗಳ ಭ್ರಷ್ಟಾಚಾರದಿಂದ ಯೋಜನೆ ಮರೀಚೀಕೆ ಆಗಿದೆ ಎಂದರು.

ಸಚಿವ-ಸಂಸದರ ನಿರ್ಲಕ್ಷ್ಯ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಗ್ರಾಪಂ ಸದಸ್ಯ ಶಿವಕುಮಾರ ಎಸ್‌. ಸೊಪ್ಪಿಮಠ, ಬಿಜೆಪಿ ಹಿರಿಯ ಮುಖಂಡ ಕೊಟ್ರಪ್ಪ ತೋಟದ, ವೀರಣ್ಣ ಅಂಗಡಿ, ಪ್ರಭು ಪಾಟೀಲ ಮಾತನಾಡಿದರು. ತಹಸೀಲ್ದಾರ್‌ ಚಿದಾನಂದ ಗುರುಸ್ವಾಮಿ, ಇಒ ರಾಮಣ್ಣ ದೊಡ್ಮನಿ, ಗ್ರಾಪಂ ಅಧ್ಯಕ್ಷೆ ಅನ್ನಮ್ಮ ತಿಪ್ಪರಸನಾಳ, ವೀರಣ್ಣ ಹುಬ್ಬಳ್ಳಿ, ಪ್ರಾಣೇಶ ಮಾದಿನೂರು, ನಾಗರಾಜ ವೆಂಕಟಾಪುರ, ಶರಣಪ್ಪ ವಡ್ಡರ್‌, ಎಂಜಿನಿಯರ್‌ ರಾಘವೇಂದ್ರ ಜೋಷಿ ಇತರರಿದ್ದರು.

click me!