
ಬೆಂಗಳೂರು (ಡಿ.06): ನಾನು ಯಾರಿಂದಲೂ ಒಂದು ಪೈಸೆ ಲಂಚ ಪಡೆದಿಲ್ಲ. ನಾನು ಲಂಚ ಪಡೆದಿರುವುದು ಸಾಬೀತುಪಡಿಸಿದರೆ ಆ ಕ್ಷಣವೇ ಪದವಿಗೆ ರಾಜೀನಾಮೆ ನೀಡುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ರಾಜ್ಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ತೊಡಗಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ ಎಂದರು.
ಪೊಲೀಸರ ಭ್ರಷ್ಟಾಚಾರಕ್ಕೆ ವರ್ಗಾವಣೆ ನೀತಿಯೇ ಕಾರಣ ಎಂಬ ಆರೋಪವಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾನು ವರ್ಗಾವಣೆಗೆ ಮಾತ್ರವಲ್ಲ, ಯಾವುದೇ ಕೆಲಸಕ್ಕೂ ಪೊಲೀಸರು ಅಥವಾ ಮತ್ತೊಬ್ಬರಿಂದ ಲಂಚ ಪಡೆದಿಲ್ಲ. ಲಂಚ ಪಡೆದಿರುವುದು ಸಾಬೀತುಪಡಿಸಿದರೆ ಸಚಿವ ಸ್ಥಾನ ತೊರೆಯುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಮನೆ ಬಳಿ ಕಣ್ಗಾವಲು: ವರ್ಗಾವಣೆ ಮಾಡಿಸಿಕೊಡುವುದಾಗಿ ಅಧಿಕಾರಿಗಳಿಗೆ ನನ್ನ ಹಾಗೂ ಮುಖ್ಯಮಂತ್ರಿ ಅವರ ಹೆಸರು ಹೇಳಿಕೊಂಡು ಕೆಲವರು ಹಣ ಪಡೆದಿರಬಹುದು. ಈ ಬಗ್ಗೆ ನನಗೆ ಖಚಿತ ಮಾಹಿತಿ ಗೊತ್ತಿಲ್ಲ. ನನ್ನ ಹಾಗೂ ಮುಖ್ಯಮಂತ್ರಿ ಅವರ ಹೆಸರು ದುರ್ಬಳಕೆ ಮಾಡಿಕೊಳ್ಳುವರ ಮೇಲೆ ನಿಗಾವಹಿಸುತ್ತೇವೆ. ನಮ್ಮ ಮನೆ ಬಳಿ ಮಾರುವೇಷದಲ್ಲಿ ಪೊಲೀಸರ ಕಣ್ಗಾವಲು ವ್ಯವಸ್ಥೆ ಸಹ ಮಾಡುವುದಾಗಿ ತಿಳಿಸಿದರು.
ಬೆಂಗಳೂರಿನ ಎಟಿಎಂ ಹಣ ದರೋಡೆ ಕೃತ್ಯದ ಹಿಂದೆ ಗೋವಿಂದಪುರ ಠಾಣೆ ಕಾನ್‌ಸ್ಟೇಬಲ್ ಪಾತ್ರ ಬಯಲಾದ ನಂತರ ಆತನನ್ನು ಕೇವಲ ಅಮಾತನುಗೊಳಿಸಿದರೆ ಪಾಠ ಕಲಿಯಲ್ಲ. ಹೀಗಾಗಿಯೇ ದರೋಡೆ ಪ್ರಕರಣದ ಆರೋಪಿ ಕಾನ್‌ಸ್ಟೇಬಲ್‌ನನ್ನು ಸೇವೆಯಿಂದಲೇ ವಜಾಗೊಳಿಸಲಾಗುತ್ತದೆ. ಈಗಾಗಲೇ ಈ ಸಂಬಂಧ ಪ್ರಕ್ರಿಯೆ ಶುರುವಾಗಿದೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.