
ಮಂಗಳೂರು (ಅ.03): ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಡಿಸಿಎಂ ಡಿಕೆಶಿ ಬೆಂಬಲಿಗರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಿವರಾಮೇಗೌಡ ಅವರು ಈಗಷ್ಟೇ ನಮ್ಮ ಪಕ್ಷಕ್ಕೆ ಮರಳಿ ಬಂದಿದ್ದಾರೆ. ಸುಮ್ಮನೆ ಈ ರೀತಿಯ ಹೇಳಿಕೆ ಕೊಡುವುದು ಸರಿಯಲ್ಲ. ಪಕ್ಷದಲ್ಲಿ ಏನಾಗಬೇಕು ಎನ್ನುವುದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವರಾಮೇಗೌಡ ಅವರಿಗೆ ಮೊದಲಿನಿಂದಲೂ ಈರೀತಿ ಮಾತನಾಡೋದು ಅಭ್ಯಾಸ. ಅವರು ಹೇಳಿದ್ದಕ್ಕೆಲ್ಲ ಪ್ರತಿಕ್ರಿಯೆ ನೀಡಲಾಗದು. ಈಗಷ್ಟೇ ನಮ್ಮ ಪಕ್ಷಕ್ಕೆ ಮರಳಿ ಬಂದಿದ್ದಾರೆ. ಪಕ್ಷದಲ್ಲಿ ಕೆಲಸ ಮಾಡಿಕೊಂಡು ಓಡಾಡಿಕೊಂಡು ಇದ್ದರೆ ಒಳ್ಳೆಯದು. ಕೆಲವರಿಗೆ ಮಾಧ್ಯಮಗಳ ಮುಂದೆ ಹೋಗಿ ಹೇಳುವ ಚಟ ಇರುತ್ತದೆ. ಸುದ್ದಿಯಲ್ಲಿರಬೇಕು ಅಂತ ಹೇಳಿಕೆಗಳನ್ನು ಕೊಡ್ತಾರೆ. ಅನವಶ್ಯಕ ಗೊಂದಲ ಸೃಷ್ಟಿ ಮಾಡಬಾರದು ಎಂದರು.ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಬರುಡೆ ಪ್ರಕರಣದಲ್ಲಿ ಅವರನ್ನು, ಇವರನ್ನು ಬಂಧನ ಮಾಡಿ ಅಂತ ನಾವು ಹೇಳಕ್ಕಾಗಲ್ಲ.
ದೊರೆತ ಸಾಕ್ಷಾಧಾರಗಳ ಮೇಲೆ ಪೊಲೀಸರು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತಗೆದುಕೊಳ್ಳುತ್ತಾರೆ. ಷಡ್ಯಂತ್ರ ಆಗಿರುವ ಬಗ್ಗೆ ಅವರ ತನಿಖೆಯಿಂದಲೇ ಗೊತ್ತಾಗಬೇಕು ತಾನೆ? ತನಿಖೆ ಮುಖಾಂತರ ಮುಂದೇನು ಮಾಡಬೇಕು ಅನ್ನೋದನ್ನ ಅವರೇ ನಿರ್ಧರಿಸುತ್ತಾರೆ. ಈ ಪ್ರಕರಣದಲ್ಲಿ ಅಥವಾ ತನಿಖೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ. ಏನೇ ಕ್ರಮ ಕೈಗೊಳ್ಳಲು ಎಸ್‌ಐಟಿಗೆ ಮುಕ್ತ ಅವಕಾಶ ನೀಡಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ರಾಜ್ಯದಲ್ಲಿ ಹದಗೆಟ್ಟ ರಸ್ತೆಗಳ ಅಭಿವೃದ್ಧಿ, ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಮಳೆ ಇನ್ನೂ ಮುಗಿದಿಲ್ಲ. ಅದಕ್ಕೂ ಮೊದಲೇ ರಸ್ತೆಗಳ ದುರಸ್ತಿಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ನೆರೆಹಾವಳಿ ಇದೆ. ಅಲ್ಲಿಗೆ ಮುಖ್ಯಮಂತ್ರಿ ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಎಷ್ಟು ಹಣ ಬಿಡುಗಡೆಯಾಗಿದೆ ಅಂತ ನೋಡಿ ಇಲ್ಲೂ ಕೂಡ ರಸ್ತೆ ದುರಸ್ತಿ ಕಾಮಗಾರಿ ಮಾಡುತ್ತೇವೆ. ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಭಾಗಕ್ಕೆ ಹೆಚ್ಚಿನ ಹಣ ಬಿಡುಗಡೆ ಮಾಡಲಾಗಿದೆ. ಆದಷ್ಟು ಬೇಗ ಕಾಮಗಾರಿ ಆರಂಭಿಸಲು ಸೂಚನೆ ನೀಡುತ್ತೇನೆ ಎಂದರು.
ಕೆಂಪುಕಲ್ಲಿಗೆ ಮಾರ್ಗಸೂಚಿ ಜಿಲ್ಲೆಯ ಕೆಂಪು ಕಲ್ಲು ಗಣಿಗಾರಿಕೆ ಮತ್ತು ಸಾಗಾಟದ ಕುರಿತು ನಿಯಮ ರೂಪಿಸಿ, ಅದಕ್ಕೆ ಪೂರಕವಾದ ಮಾರ್ಗಸೂಚಿಗಳನ್ನೂ ನೀಡಲಾಗಿದೆ. ಹೊಸ ಮಾರ್ಗಸೂಚಿ ಪ್ರಕಾರ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುತ್ತಾರೆ. ಮರಳಿಗೆ ಸಂಬಂಧಿಸಿದಂತೆ ಟೆಂಡರ್ ಮುಖಾಂತರ ತೆಗೆಯಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.