ಅನುದಾನದ ಲೆಕ್ಕವನ್ನು ಜಿಲ್ಲೆಯ ಜನರು ಕೇಳಬೇಕೆ ಹೊರತು ಸಂಸದರಲ್ಲ: ಸಚಿವ ಚಲುವರಾಯಸ್ವಾಮಿ

Published : Mar 14, 2026, 09:32 PM IST
chaluvarayaswamy

ಸಾರಾಂಶ

ರಾಜ್ಯ ಸರ್ಕಾರ ಜಿಲ್ಲೆಗೆ ಬಿಡುಗಡೆ ಮಾಡಿರುವ ಅನುದಾನದ ಲೆಕ್ಕವನ್ನು ಜಿಲ್ಲೆಯ ಜನರು ಕೇಳಬೇಕೆ ಹೊರತು ಸಂಸದರಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.

ಮದ್ದೂರು (ಮಾ.14): ರಾಜ್ಯ ಸರ್ಕಾರ ಜಿಲ್ಲೆಗೆ ಬಿಡುಗಡೆ ಮಾಡಿರುವ ಅನುದಾನದ ಲೆಕ್ಕವನ್ನು ಜಿಲ್ಲೆಯ ಜನರು ಕೇಳಬೇಕೆ ಹೊರತು ಸಂಸದರಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು. ತಾಲೂಕಿನ ಸೋಮನಹಳ್ಳಿ ಬಳಿ 220 ಕೆ.ವಿ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಂಡ್ಯ ಜಿಲ್ಲೆಗೆ 10 ಸಾವಿರ ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ.

ಅದರ ಅಂಕಿ-ಅಂಶಗಳನ್ನು ಇಲಾಖಾವಾರು ನೀಡುವಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಲೆಕ್ಕ ಕೇಳಿದ್ದಾರೆ. ಆದರ ಲೆಕ್ಕವನ್ನು ಜಿಲ್ಲೆಯ ಜನರು ಕೇಳಬೇಕೆ ಹೊರತು ಅವರಲ್ಲ. ಅವರೇನು ಜಿಲ್ಲೆಯ ಮತದಾರರಲ್ಲ. ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಜಿಲ್ಲೆಯ ಜನರು ಅವರಿಗೆ ಆಶೀರ್ವಾದ ಮಾಡಿದ್ದಾರೆ. ಜನರ ನಿರೀಕ್ಷೆ ಹುಸಿಯಾಗದಂತೆ ಕೇಂದ್ರ ಸಚಿವರು ಕೆಲಸ ಮಾಡಲಿ. ಲೆಕ್ಕ ಕೊಡುವ ಸಮಯ ಬರುತ್ತದೆ. ಆಗ ಅಂಕಿ-ಅಂಶಗಳ ಪ್ರಕಾರ ನೀಡಲಾಗುವುದು ಎಂದು ಕುಟುಕಿದರು.

ಕಳೆದ ಮೂರು ವರ್ಷಗಳಲ್ಲಿ ಇಡೀ ರಾಜ್ಯದಲ್ಲಿಯೇ ಮೈಸೂರು ಜಿಲ್ಲೆ ಹೊರತು ಪಡಿಸಿದರೆ ಮಂಡ್ಯ ಜಿಲ್ಲೆಗೆ ಹೆಚ್ಚು ಅನುದಾನ ನೀಡಲಾಗಿದೆ. ಸ್ವಾತಂತ್ರ್ಯನಂತರ ತೂಬಿನಕೆರೆ ಬಳಿ ಮಾತ್ರ 220 ಕೆವಿ ಸಬ್ ಸ್ಟೇಷನ್ ಮಾತ್ರ ಇತ್ತು. ನಂತರ ಕೆ.ಆರ್.ಪೇಟೆ, ಶೀರಂಗಪಟ್ಟಣ, ನಾಗಮಂಗಲದಲ್ಲಿತ್ತು. ಮದ್ದೂರಿಗೂ 220 ಕೆವಿ ಸಬ್ ಸ್ಟೇಷನ್ ನಿರ್ಮಾಣ ಮಾಡಬೇಕೆಂದು 25 ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಆದರೆ, ಶಾಸಕ ಉದಯ್ ಅವರ 3 ವರ್ಷಗಳ ನಿರಂತರ ಪ್ರಯತ್ನದಿಂದಾಗಿ ಇಂದು ಚಾಲನೆ ನೀಡಲಾಗುತ್ತಿದೆ ಎಂದರು.

ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಸಿ ನಾಲೆಗಳ ಆಧುನಿಕರಣ ಮಾಡಲಾಗುತ್ತಿದೆ. ಮೈಷುಗರ್ ಕಾರ್ಖಾನೆಗೆ 65 ಕೋಟಿ ರು. ವೆಚ್ಚದಲ್ಲಿ ಬಾಯ್ಲಿಂಗ್ ಹೌಸ್ ನಿರ್ಮಾಣಕ್ಕೆ ಸಂಜೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಲಿದೆ. ಬಳಿಕ ಡಿಸ್ಟಿಲರಿ ವಿಭಾಗ ನಿರ್ಮಾಣ ಮಾಡಿದರೆ ಮೈಷುಗರ್ ಕಾರ್ಖಾನೆ ಯಾವುದೇ ಲೋಪದೋಷಗಳಿಲ್ಲದೆ ಕಾರ್ಯಾರಂಭ ಮಾಡಲಿದೆ ಎಂದರು.

ಶಾಸಕ ಕೆ.ಎಂ.ಉದಯ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ವರ್ಷದ ಯುಗಾದಿ ಹಬ್ಬದ ವೇಳೆಗೆ 220 ಕೆವಿ ಸಬ್ ಸ್ಟೇಷನ್ ಕಾಮಗಾರಿ ಉದ್ಘಾಟನೆಗೊಂಡು ರೈತರಿಗೆ ಹಾಗೂ ತಾಲೂಕಿನ ಜನತೆಗೆ ಅನುಕೂಲ ಕಲ್ಪಿಸಬೇಕು. ಈ ಸಂಬಂಧ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.

ಕ್ಷೇತ್ರದಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸಮಸ್ಯೆಗಳ ಬಗ್ಗೆ ದಿನನಿತ್ಯ ಸಾಕಷ್ಟು ದೂರುಗಳನ್ನು ನೀಡುತ್ತಿದ್ದರು. ಹೀಗಾಗಿ ಸರ್ಕಾರದಿಂದ 800 ಕೋಟಿ ರು.ಗೂ ಹೆಚ್ಚಿನ ಅನುದಾನದಲ್ಲಿ ಕೆರೆಗಳು ಮತ್ತು ನಾಲೆಗಳ ಆಧುನೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ಹಲವು ವರ್ಷಗಳಿಂದ ತಲೆದೋರುತ್ತಿದ್ದ ವಿದ್ಯುತ್ ಸಮಸ್ಯೆ ಬಗ್ಗೆ ಸರ್ಕಾರದ ಹಂತದಲ್ಲಿ ಸಾಕಷ್ಟು ಹೋರಾಟ ಮಾಡಿ 188 ಕೋಟಿ ರು. ವೆಚ್ಚದಲ್ಲಿ 220 ಕೆವಿ ಸಬ್ ಸ್ಟೇಷನ್ ನಿರ್ಮಾಣ ಮಾಡಲಾಗುತ್ತಿದ್ದು ಮುಂದಿನ ಒಂದು ವರ್ಷದೊಳಗೆ ಕಾಮಗಾರಿ ಮುಕ್ತಾಯವಾಗಿ ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆಗೆ ಮುಕ್ತಿ ನೀಡಲಾಗುವುದು ಎಂದರು.

ಕ್ಷೇತ್ರದಲ್ಲಿ 1800 ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವುದನ್ನು ಸಹಿಸದೆ ವಿರೋಧಿಗಳು ನನ್ನ ವಿರುದ್ಧ ಅನಗತ್ಯ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕ್ಷೇತ್ರದ ಮತದಾರರು ಕಿವಿಗೊಡಬಾರದು. ನನಗೆ ರಾಜಕೀಯ, ಅಧಿಕಾರ ಮುಖ್ಯವಲ್ಲ ಕ್ಷೇತ್ರದ ಅಭಿವೃದ್ಧಿ ಜನರ ಹಿತ ಮುಖ್ಯವಾಗಿದೆ ಎಂದು ವಿರೋಧಿಗಳ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಶಾಸಕ ಹಾಗೂ ಚೆಸ್ಕಾಂ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, 220 ಕೆವಿ ಸಬ್‌ಸ್ಟೇಷನ್ ಯೋಜನೆಯನ್ನು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ 188 ಕೋಟಿ ರು.ಅನುದಾನ ತಂದಿರುವುದು ಪ್ರಶಂಸನೀಯ.ಈ ಕಾಮಗಾರಿ ಪೂರ್ಣಗೊಂಡರೆ ಮದ್ದೂರು, ಶ್ರೀರಂಗಪಟ್ಟಣ, ನಾಗಮಂಗಲ, ಮಳವಳ್ಳಿ ತಾಲೂಕುಗಳಿಗೆ ಅನುಕೂಲವಾಗಲಿದೆ. ಆದ್ದರಿಂದ ರೈತರು ಹಾಗೂ ಜನತೆಯ ಪರವಾಗಿ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಅತ್ಯಂತ ಕ್ರಿಯಾಶೀಲ

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಹೊಸದಾಗಿ ಆಯ್ಕೆಯಾಗಿರುವ 38 ಶಾಸಕರಲ್ಲಿ ಕೆ.ಎಂ.ಉದಯ್ ಅವರು ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುವ ಮೂಲಕ ತಾಲೂಕಿಗೆ ಅತೀ ಹೆಚ್ಚು ಅನುದಾನ ಬಿಡುಗಡೆಗೊಳಿಸಿ ಶಾಶ್ವತ ಅಭಿವೃದ್ಧಿ ಕಾಮಗಾರಿ ಮಾಡುವ ಮೂಲಕ ಜನ ಮನ್ನಣೆಗಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಬಿ.ಬಸವರಾಜು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಗ್ರಾಪಂ ಮಾಜಿ ಅಧ್ಯಕ್ಷ ಸಿ.ಟಿ.ಶಂಕರ್, ಗುತ್ತಿಗೆದಾರ ಶಿವಶಂಕರ್, ತೈಲೂರು ರಘು, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್‌ಕುಮಾರ್, ಭಾರತೀ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಮಹಿಳಾ ಘಟಕದ ಅಧ್ಯಕ್ಷೆ ಮಮತಾ, ಎಸ್.ಇ.ವೆಂಕಟೇಶ್, ಇಇ ಕಿಶೋರ್, ಇಇ ಶಿವಕುಮಾರ್, ಇಇ ಕಿರಣ್ ಇತರರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಡಿಶಾ ಕಾಂಗ್ರೆಸ್ ಶಾಸಕರಿಗೆ ಆಪರೇಷನ್ ಕಮಲದ ಭೀತಿ ಇಲ್ಲ: ಶಾಸಕ ಎಚ್.ಸಿ. ಬಾಲಕೃಷ್ಣ
ಯುಕೆಪಿ ಸಂತ್ರಸ್ತರಿಗೆ ಪರಿಹಾರ ಸಮಸ್ಯೆ ಇಲ್ಲ: ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದಿಷ್ಟು..