ಯುಕೆಪಿ ಸಂತ್ರಸ್ತರಿಗೆ ಪರಿಹಾರ ಸಮಸ್ಯೆ ಇಲ್ಲ: ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದಿಷ್ಟು..

Published : Mar 14, 2026, 08:36 PM IST
RB Timmapur

ಸಾರಾಂಶ

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ತಕ್ಷಣಕ್ಕೆ 8 ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕೆ ಈಗ ₹3450 ಕೋಟಿ ಪರಿಹಾರ ನೀಡಲಾಗುವುದು ಎಂದು ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು.

ಬಾಗಲಕೋಟೆ (ಮಾ.14): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ತಕ್ಷಣಕ್ಕೆ 8 ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕೆ ಈಗ ₹3450 ಕೋಟಿ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು.

ಕೊಟ್ಟ ಮಾತಿನಂತೆ ಈ ಬಜೆಟ್‌ ನಲ್ಲಿ ₹18 ಸಾವಿರ ಕೋಟಿ ಇಡದೇ ಉಪ ಚುನಾವಣೆ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಪರಿಹಾರ ವಿತರಿಸುವ ಕಾರ್ಯ ನಡೆಯುತ್ತಿದೆಯಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಜೆಟ್‌ ನಲ್ಲಿ ಹಣ ಇಡದಿದ್ದರೂ ಪರಿಹಾರಕ್ಕೆ ಅಗತ್ಯವಿರುವ ಹಣ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಯಾವುದೇ ಸರ್ಕಾರ ಇದ್ದರೂ ಭರವಸೆ ನೀಡಿದ್ದೆಲ್ಲವನ್ನು ಒಮ್ಮೆಲೆ ಮಾಡಲು ಆಗಲ್ಲ. ಆದರೆ, ಹಿಂದಿನ ಬಿಜೆಪಿ ಸರ್ಕಾರದಂತೆ ನಮ್ಮ ಸರ್ಕಾರ ಜನರನ್ನು ದಾರಿತಪ್ಪಿಸುವ ಕೆಲಸ ಮಾಡಿಲ್ಲ.

ಈ ಹಿಂದೆ ನಮ್ಮದೇ ಸರ್ಕಾರ ಇದ್ದಾಗ ನಾನು ಉಸ್ತುವಾರಿ ಸಚಿವ ಇದ್ದು, ಆಲಮಟ್ಟಿ ಜಲಾಶಯದ ಗೇಟ್ ಹಾಕಿ ನೀರು ನಿಲ್ಲಿಸಿದ್ದೇವು. ಈಗ ಜಮೀನಿಗೆ ನ್ಯಾಯಯುತ ಬೆಲೆ ನಿರ್ಧಾರ ಮಾಡಿ ಪರಿಹಾರ ವಿತರಣೆಗೂ ಚಾಲನೆ ನೀಡುತ್ತಿದ್ದೇವೆ. ಇದು ನಮ್ಮ ಬದ್ಧತೆ. ಅದೇ ಬಿಜೆಪಿ ಸರ್ಕಾರ ಏನು ಮಾಡಿತ್ತು? ಇದೇ ಜಿಲ್ಲೆಯವರು ಜಲಸಂಪನ್ಮೂಲ ಸಚಿವರಾಗಿದ್ದರಲ್ಲ ಅವರು ಏನು ಮಾಡಿದ್ದರು? ಬಿಜೆಪಿ ಸರ್ಕಾರ ಯುಕೆಪಿಗೆ ನಾಮ ಹಾಕಿತ್ತು. ಆದರೆ, ನಮ್ಮ ಸರ್ಕಾರ ಬದ್ಧತೆಯಿಂದ ಯುಕೆಪಿ ವಿಚಾರದಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಉಪಚುನಾವಣೆ: ಹೊರಗಿನವರಿಗೆ ಟಿಕೆಟ್‌ ಇಲ್ಲ: ಶಾಸಕ ಎಚ್.ವೈ.ಮೇಟಿ ಅವರ ನಿಧನನಿಂದ ತೆರವಾಗಿರುವ ಬಾಗಲಕೋಟೆ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಬಾಗಲಕೋಟೆ ಕ್ಷೇತ್ರದ ವ್ಯಕ್ತಿಗೆ ಕೊಡಲಾಗುತ್ತಿದೆ ವಿನಃ ಯಾವುದೇ ಕಾರಣಕ್ಕೂ ಹೊರಗಿನ (ಮೈಸೂರ ಭಾಗದ) ವ್ಯಕ್ತಿಗೆ ಟಿಕೆಟ್ ನೀಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸ್ಪಷ್ಟವಾಗಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಬಾಗಲಕೋಟೆ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಮೈಸೂರ ಭಾಗದವರನ್ನು ಕರೆತರಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಈ ಸ್ಪಷ್ಟೀಕರಣ ನೀಡಿದರು. ಬಾಗಲಕೋಟೆ ಉಪ ಚುನಾವಣೆಗೆ ಬಾಗಲಕೋಟೆ ಜಿಲ್ಲೆಯ ವ್ಯಕ್ತಿಗೆ ಅದರಲ್ಲೂ ಬಾಗಲಕೋಟೆ ಕ್ಷೇತ್ರದ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಮೆಡಿಕಲ್ ಕಾಲೇಜಿಗೆ ಇಂದು ಶಂಕು ಸ್ಥಾಪನೆ

ದಿ. ಎಚ್.ವೈ.ಮೇಟಿ ಅವರ ಒಂದು ದಶಕದ ಪ್ರಯತ್ನದ ಫಲವಾಗಿ ಮಾ.14ರಂದು ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಂದಾಜು ₹450 ಕೋಟಿ ವೆಚ್ಚದ ಯೋಜನೆಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಇದರ ಜೊತೆಗೆ ಯುಕೆಪಿಗೆ ಮುಳುಗಡೆ ಆಗುವ ಜಮೀನಿಗೆ ಪರಿಹಾರ ವಿತರಣೆ ಚೆಕ್ ವಿತರಣೆಗೆ ಚಾಲನೆ ನೀಡಲಿದ್ದಾರೆ.

ಆರೋಗ್ಯ ಇಲಾಖೆಯಿಂದ ಸುತಗುಂಡಾರದಲ್ಲಿ ನಿರ್ಮಾಣವಾಗಿರುವ ₹12.40 ಕೋಟಿ ವೆಚ್ಚದ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆ, ₹6.50 ಲಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೆಟ್ರಿಕ್ ನಂತರದ ವಸತಿ ನಿಲಯ ಉದ್ಘಾಟನೆ, ₹6.56 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿವಿಧ ಇಲಾಖೆ ಸಚಿವರು ಭಾಗವಹಿಸಲಿದ್ದಾರೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಳ್ಳಾರಿಯಲ್ಲಿ ₹55 ಕೋಟಿ ವೆಚ್ಚದಲ್ಲಿ ಇನ್‌ಕ್ಯುಬೇಷನ್‌ ಕೇಂದ್ರ: ಸಚಿವ ಪ್ರಿಯಾಂಕ್‌ ಖರ್ಗೆ
ಮಹಿಳಾ ಸಬಲೀಕರಣ ಸಮಾಜದ ಅಭಿವೃದ್ಧಿಗೆ ಮುಖ್ಯ: ಸಚಿವ ರಾಮಲಿಂಗಾರೆಡ್ಡಿ