ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರಿಯಾಗಿದ್ದು, ಅದು ಅವರ ವಿವೇಚನಕ್ಕೆ ಬಿಟ್ಟ ಸಂಗತಿಯಾಗಿದೆ ಎಂದ ಬೈರತಿ ಬಸವರಾಜ
ರಾಯಚೂರು(ಅ.30): ರಾಜ್ಯ ಸರ್ಕಾರ ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾರನ್ನು ಕೈ ಬಿಡಬೇಕು ಮತ್ತು ಯಾರಿಗೆ ಸ್ಥಾನ ನೀಡಬೇಕು ಎನ್ನುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರವಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದರು.
ನಗರದ ಯರಮರಸ್ ಸರ್ಕ್ಯೂಟ್ ಹೌಸ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯಲ್ಲಿ ಮುಂಬಾಯಿ ಸ್ನೇಹಿತರಿಗೂ ಅವಕಾಶ ದೊರೆಯಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಬೈರತಿ ಅವರು ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರಿಯಾಗಿದ್ದು, ಅದು ಅವರ ವಿವೇಚನಕ್ಕೆ ಬಿಟ್ಟಸಂಗತಿಯಾಗಿದೆ. ಅವರು ಯಾರನ್ನು ಬೇಕಾದರು ಸೇರಿಸಿಕೊಳ್ಳಬಹುದು, ಕೈಬಿಡಬಹುದು. ಯಾರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವುದನ್ನು ಸಿಎಂ ಅವರೇ ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ಜೋಡೋ ಯಶಸ್ಸು: ಕಾಂಗ್ರೆಸ್‌ನಲ್ಲಿ ಹುಮ್ಮಸ್ಸು..!
ಕುರುಬ ಸಮುದಾಯಕ್ಕೆ ಪರಿಶಿಷ್ಟಪಂಗಡ ಮೀಸಲಾತಿ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ವರದಿಗಳನ್ನು ಪರಿಶೀಲಿಸಲಾಗಿದೆ. ಕುಲಶಾಸ್ತ್ರ ವರದಿಯನ್ನು ಸಿಎಂಗೆ ಸಲ್ಲಿಸಲಾಗಿದೆ. ಅವರು ಸಹ ಉನ್ನತ ಮಟ್ಟದ ಸಮಿತಿಯೊಂದಿಗೆ ಸಮಾಲೋಚನೆ ನಡೆಸಲಿದ್ದು, ಮೀಸಲು ಕೊಡುವುದರ ಬಗ್ಗೆ ಸಾಧಕ-ಬಾಧಕಗಳನ್ನು ನೋಡಿಕೊಂಡು ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಲಿದ್ದು, ಕುರುಬರಿಗೆ ಎಸ್ಟಿಮೀಸಲು ಸಿಗುವ ವಿಶ್ವಾಸವಿದೆ ಎಂದರು.
ಬೆಂಗಳೂರಿನ ಎಸ್‌ಐ ನಂದೀಶ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಎಂಟಿಬಿ ನಾಗರಾಜ ಅವರು 70-80 ಲಕ್ಷ ಕೊಟ್ಟರೆ ಹೃದಯಾಘಾತವಾಗದೇ ಇನ್ನೇನಾಗುತ್ತದೆ ಎನ್ನುವ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಬೈರತಿ ಬಸವರಾಜ ಅವರು ಯಾವ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆಯೋ, ಘಟನೆಯನ್ನು ಅವರು ಯಾವ ರೀತಿ ಅರ್ಥೈಸಿದ್ದಾರೆಯೋ ಗೊತ್ತಿಲ್ಲ ಈ ಕುರಿತು ಅವರೇ ಸ್ಪಷ್ಟೀಕರಣ ನೀಡಬೇಕು ಎಂದರು.