ಆಗ ವಾಜಪೇಯಿ, ಅಡ್ವಾಣಿ ಜೋಡಿ ಯಾತ್ರೆ, ಈಗ ಬೊಮ್ಮಾಯಿ, ಬಿಎಸ್‌ವೈ ಜೋಡಿಯಿಂದ ಜನಸಂಕಲ್ಪ
ರಾಯಚೂರು(ಅ.12): ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲ್ಲಬೇಕು. ಎನ್ನುವ ದೃಷ್ಟಿಯನ್ನಿಟ್ಟುಕೊಂಡು ಜನಸಂಕಲ್ಪ ಯಾತ್ರೆ ರೂಪಿಸಿದ್ದು, ಬಿಜೆಪಿಯ 150 ವೇಗದ ಓಟಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ 100 ಭಾರತ್ ಜೋಡೋ ಯಾತ್ರೆ ಮಾಡಿದರು ಸಹ ಆಗುವುದಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ನುಡಿದರು.
ತಾಲೂಕಿನ ಗಿಲ್ಲೆಸುಗೂರಿನಲ್ಲಿ ಮಂಗಳವಾರ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ದೇಶದಲ್ಲಿ ಹಿಂದೆ ಬಿಜೆಪಿ ನಡೆಸಿದ ಜನಸಂಕಲ್ಪ ಯಾತ್ರೆಗಳು ಯಶಸ್ವಿಯಾಗಿವೆ. ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ ಜೋಡಿ ಯಾತ್ರೆಯಿಂದ ಲೋಕಸಭೆ ಸ್ಥಾನಗಳು ಹೆಚ್ಚಾದವು. ಮೋದಿ- ಅಮಿತ್ ಶಾ ಜೋಡಿಯಿಂದಾಗಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಇದೀಗ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಬಿಎಸ್‌ವೈ ಅವರ ಜೋಡಿಯಿಂದ ಜನಸಂಕಲ್ಪ ಯಾತ್ರೆ ನಡೆಸುತ್ತಿದ್ದು, ಇದರಲ್ಲಿಯೇ ಯಶಸ್ವಿ ಕಂಡು 150 ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನ ಖಚಿತ: ಯಡಿಯೂರಪ್ಪ
ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡಗಳಿಗೆ ಮೀಸಲಾತಿ ಕೊಡಲು ಯಾವುದೇ ಸರ್ಕಾರಗಳು ಮನಸು ಮಾಡಲಿಲ್ಲ. ಹಿಂದುಳಿದ ವರ್ಗಗಳನ್ನು ಬಳಸಿಕೊಂಡರೂ ಮಾಜಿ ಸಿಎಂ ಸಿದ್ದರಾಮಯ್ಯ ಮೀಸಲಾತಿ ಹೆಚ್ಚಿಸಲಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ವರಿಷ್ಠರ ಬುಗರಿಯಂತಾಗಿದ್ದು, ಗುಲಾಮರಾಗಿ ಕೆಲಸ ಮಾಡುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ 2 ಸ್ಥಾನದಲ್ಲಿದ್ದ ಬಿಜೆಪಿಯನ್ನು 110 ಸ್ಥಾನಕ್ಕೆ ತಂದ ಕೀರ್ತಿ ಬಿ.ಎಸ್.ಯಡಿಯೂರಪ್ಪನವರಿಗೆ ಸಲ್ಲುತ್ತದೆ. ಲಿಂಗಾಯತ ಸಮುದಾಯದಲ್ಲಿ ಹುಟ್ಟಿದರೂ ಅವರು 40 ವರ್ಷದ ಜೀವನ ಹಿಂದುಳಿದ ಸಮುದಾಯಗಳ ಕಲ್ಯಾಣಕ್ಕಾಗಿಯೇ ಸವೆಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ನಮ್ಮ ಬೇಡಿಕೆಯನ್ನು ಮಂಡಿಸಿದಾಗ ಯೋಚನೆ ಮಾಡದೇ ಈಡೇರಿಸಿದ್ದಾರೆ. ಇಂದು ಮೀಸಲಾತಿ ಹೆಚ್ಚಳಕ್ಕೆ ಕಾರಣರಾದ ಈ ನಾಯಕರಿಗೆ ನಮ್ಮ ಸಮಾಜ ಎಂದಿಗೂ ಋುಣಿಯಾಗಿರುತ್ತದೆ ಎಂದು ಹೇಳಿದರು.