Congress Presidential Elections: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಚುನಾವಣೆ ಕುರಿತಂತೆ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿವೆ. ಇದಕ್ಕೆ ತೆರೆ ಎಳೆಯಲು ಯತ್ನಿಸಿದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿಯವರು ಅಧ್ಯಕ್ಷ ಚುನಾವಣೆಗೆ ನನ್ನನ್ನು ಅಭ್ಯರ್ಥಿಯಾಗಿ ಸೂಚಿಸಿಲ್ಲ ಎಂದಿದ್ದಾರೆ.
ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇನ್ನೇನು ಬೆರಳೆಣಿಕೆ ದಿನದೊಳಗೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ಅವರ ಎದುರು ಶಶಿ ತರೂರ್ ಚುನಾವಣಾ ಕಣಕ್ಕಿಳಿದಿದ್ದಾರೂ ಅವರಿಗೆ ಖರ್ಗೆಯವರಿರುವಷ್ಟು ಸದಸ್ಯರ ಬಲವಿಲ್ಲ. ಚುನಾವಣೆಯಲ್ಲಿ ಗಾಂಧಿ ಕುಟುಂಬ ಪಾಲ್ಗೊಳ್ಳುವುದಿಲ್ಲ ಮತ್ತು ಅಧಿಕೃತ ಅಭ್ಯರ್ಥಿ ಎಂದು ಯಾರನ್ನೂ ಬಿಂಬಿಸುವುದಿಲ್ಲ ಎಂದು ಈ ಹಿಂದೆಯೇ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಹೇಳಿದ್ದರು. ಆದರೂ ಮಲ್ಲಿಕಾರ್ಜುನ್ ಖರ್ಗೆಯವರನ್ನು ಸೋನಿಯಾ ಗಾಂಧಿಯವರೇ ಕಣಕ್ಕಿಳಿಯುವಂತೆ ಹೇಳಿದ್ದಾರೆ. ಚುನಾವಣೆ ನೆಪ ಮಾತ್ರಕ್ಕಷ್ಟೇ ನಡೆಯುತ್ತಿದೆ, ಸೋನಿಯಾ ಅವರ ಅಭ್ಯರ್ಥಿಯಾಗಿರುವ ಮಲ್ಲಿಕಾರ್ಜುನ್ ಖರ್ಗೆ ಅವರೇ ಗಾಂಧಿ ಕುಟುಂಬದ ಅಧಿಕೃತ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಅವರು ನನ್ನ ಹೆಸರು ಸೂಚಿಸಿದ್ದಾರೆ ಎಂಬುದು ಕೇವಲ ವದಂತಿ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಲ್ಲಿಕಾರ್ಜುನ್ ಖರ್ಗೆ, "ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸೋನಿಯಾ ಗಾಂಧಿ ನನ್ನನ್ನು ಸೂಚಿಸಿದ್ದಾರೆ ಎಂದು ಕೇವಲ ವದಂತಿ. ನಾನು ಆ ರೀತಿಯಾಗಿ ಎಲ್ಲೂ ಹೇಳಿಲ್ಲ. ಸೋನಿಯಾ ಗಾಂಧಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಗಾಂಧಿ ಕುಟುಂಬದ ಸದಸ್ಯರು ಈ ಚುನಾವಣೆಯಲ್ಲಿ ಸ್ಪರ್ಧಿಸುವುದೂ ಇಲ್ಲ ಅಥವಾ ಯಾವ ಅಭ್ಯರ್ಥಿಯ ಪರವಾಗಿ ನಿಲ್ಲುವುದೂ ಇಲ್ಲ ಎಂದು. ಜತೆಗೆ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಕೂಡ ಭಾಗಿಯಾಗುತ್ತಿಲ್ಲ," ಎಂದಿದ್ದಾರೆ.
ಮುಂದುವರೆದ ಅವರು, "ನಮ್ಮ ಪಕ್ಷಕ್ಕೆ, ಸೋನಿಯಾ ಗಾಂಧಿ ಅವರಿಗೆ ಮತ್ತು ನನಗೆ ಮಸಿ ಬಳಿಯಬೇಕು ಎಂಬ ಕಾರಣಕ್ಕೆ ಈ ರೀತಿಯ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದ ಯಾರೊಬ್ಬರೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ. ಸೋನಿಯಾ ಗಾಂಧಿ ಅವರು ನನಗೆ ಬೆಂಬಲ ನೀಡುತ್ತಾರೆ ಎಂಬುದು ಶುದ್ಧ ಸುಳ್ಳು," ಎಂದಿದ್ದಾರೆ. ಕಾಂಗ್ರೆಸ್ ಸದಸ್ಯರು ಈಗಾಗಲೇ 9,300 ಸದಸ್ಯರ ಪಟ್ಟಿ ಮಾಡಿದೆ. ಆ ಎಲ್ಲಾ ಸದಸ್ಯರು ಚುನಾವಣೆಯಲ್ಲಿ ಮತ ಹಾಕುತ್ತಾರೆ. ಅದರಲ್ಲಿ ಹೆಚ್ಚು ಮತ ಪಡೆಯುವ ಅಭ್ಯರ್ಥಿ ಮುಂದಿನ ಅಧ್ಯಕ್ಷರಾಗುತ್ತಾರೆ ಎಂದು ಖರ್ಗೆ ಹೇಳಿದರು. ಉತ್ತರ ಪ್ರದೇಶ ರಾಜ್ಯ ಕಾಂಗ್ರೆಸ್‌ನಿಂದ ಒಟ್ಟೂ 1,250 ಸದಸ್ಯರು ಮತ ಚಲಾಯಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
"ನಾನು ನನ್ನ ಗೆಲುವಿನ ಬಗ್ಗೆ ಎದುರು ನೋಡುತ್ತಿಲ್ಲ. ನನಗೆ ಚುನಾವಣೆ ಸ್ಪರ್ಧಿಸುವಂತೆ ಪ್ರೇರೇಪಿಸಿದ ಪಕ್ಷದ ಸದಸ್ಯರ ಮೇಲೆ ನನ್ನ ಸೋಲು ಮತ್ತು ಗೆಲುವಿನ ಜವಾಬ್ದಾರಿ ಹಾಕಿದ್ದೇನೆ," ಎಂದರು. ಇದೇ ಭಾನುವಾರ ಮಾತನಾಡಿದ್ದ ಮಲ್ಲಿಕಾರ್ಜುನ್ ಖರ್ಗೆ ದೇಶದ ಪರಿಸ್ಥಿತಿ ಹದಗೆಟ್ಟಿದೆ ಮತ್ತು ದೇಶದ ಒಳಿತಿಗಾಗಿ ಹೋರಾಡಲು ತಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದರು.
ಇದನ್ನೂ ಓದಿ: Congress ಅಧ್ಯಕ್ಷ ಪಟ್ಟ: ಶಶಿ ತರೂರ್ vs ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಈಗ ಅಧಿಕೃತ
"ದೇಶದ ಪರಿಸ್ಥಿತಿ ತೀರಾ ಹಾಳಾಗಿದೆ. ಅದಕ್ಕಾಗಿ ನಾನು ಸ್ಪರ್ಧಿಸುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ರಾಜನೀತಿಯಲ್ಲಿ ಪ್ರಜಾಪ್ರಭುತ್ವವೇ ಇಲ್ಲ. ಸಿಬಿಐ, ಜಾರಿ ನಿರ್ದೇಶನಾಲಯದ ರೀತಿಯ ಸ್ವತಂತ್ರ ತನಿಖಾ ಸಂಸ್ಥೆಗಳು ಬಲ ಕಳೆದುಕೊಳ್ಳುತ್ತಿವೆ. ಈ ರೀತಿಯ ರಾಜನೀತಿಯ ವಿರುದ್ಧ ಹೋರಾಡಲು ನನಗೆ ಅಧಿಕಾರದ ಅವಶ್ಯಕತೆಯಿದೆ. ಇದೇ ಕಾರಣಕ್ಕೆ ನಾನು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ," ಎಂದಿದ್ದರು.
ಖರ್ಗೆ ಸ್ಪರ್ಧೆಗೂ ಮುನ್ನ ಕಾಂಗ್ರೆಸ್ ಹಿರಿಯ ನಾಯಕ, ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದರು. ಶಶಿ ತರೂರ್ ಅವರನ್ನೂ ಭೇಟಿ ಮಾಡಿ ಸ್ನೇಹಿತರ ನಡುವಿನ ಸ್ಪರ್ಧೆ ಎಂದು ಇಬ್ಬರೂ ಹೇಳಿದ್ದರು. ಆದರೆ ಖರ್ಗೆ ಚುನಾವಣಾ ಕಣಕ್ಕೆ ಪ್ರವೇಶಿಸುತ್ತಿದ್ದಂತೆ ಕಣದಿಂದ ಹಿಂದೆ ಸರಿದ ದಿಗ್ವಿಜಯ್ ಸಿಂಗ್ ಮಲ್ಲಿಕಾರ್ಜುನ್ ಖರ್ಗೆಯವರಿಗೆ ಬೆಂಬಲ ಸೂಚಿಸಿದ್ದರು. ಖರ್ಗೆ ಪಕ್ಷದಲ್ಲಿ ಅತ್ಯಂತ ಹಿರಿಯ ನಾಯಕರಾಗಿದ್ದು ಅವರ ಮೇಲೆ ಅಪಾರ ಗೌರವವಿದೆ, ಈ ಕಾರಣಕ್ಕಾಗಿ ನಾನು ಅವರಿಗೆ ಬೆಂಬಲ ನೀಡುತ್ತೇನೆ ಎಂದಿದ್ದರು. ಲೆಕ್ಕದ ಪ್ರಕಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಿಎಂ ಸ್ಥಾನ ತ್ಯಜಿಸಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಬೇಕಿತ್ತು. ಆದರೆ ಕುರ್ಚಿ ಸಚಿನ್ ಪೈಲಟ್‌ಗೆ ಬಿಟ್ಟುಕೊಡಲು ಮನಸ್ಸಿಲ್ಲದ ಗೆಹ್ಲೋಟ್ ರಾಜಕೀಯ ಚಾಣಾಕ್ಷತೆ ಮೆರೆದಿದ್ದರು.
ಇದನ್ನೂ ಓದಿ: Rajasthan Politicsನಲ್ಲಿ ಗೆಹ್ಲೋಟ್ ಶಕ್ತಿ ಎಂಥದ್ದು? ರಬ್ಬರ್‌ಸ್ಟಾಂಪ್ ಅಂದ್ಕೊಂಡ್ರೆ ರೆಬೆಲ್‌ಸ್ಟಾರ್ ಆದ್ರಲ್ಲಾ?
ಇನ್ನೇನು ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಗೆಹ್ಲೋಟ್‌ರ ಉತ್ತರಾಧಿಕಾರಿಯಾಗಿ ಪೈಲಟ್‌ರನ್ನು ಘೋಷಿಸಬೇಕು ಎನ್ನುವಷ್ಟರಲ್ಲಿ ರಾಜಸ್ಥಾನದ ಎಂಭತ್ತಕ್ಕೂ ಹೆಚ್ಚು ಶಾಸಕರು ರಾಜೀನಾಮೆಯ ಬೆದರಿಕೆ ಹಾಕಿದ್ದರು. ಸಚಿನ್ ಪೈಲಟ್‌ರನ್ನು ಮುಖ್ಯಮಂತ್ರಿಯಾಗಿ ಒಪ್ಪುವುದಿಲ್ಲ ಎಂದು ಬಹಿರಂಗವಾಗಿ ಗಾಂಧಿ ಕುಟುಂಬದ ವಿರುದ್ಧ ಸಿಡಿದೆದ್ದಿದ್ದರು. ಇದರ ಸೂತ್ರದಾರ ಗೆಹ್ಲೋಟ್ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಕಡೆಗೆ ಮತ್ತೊಂದು ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಲು ಸಿದ್ಧವಿಲ್ಲದ ಕಾಂಗ್ರೆಸ್ ಹೈಕಮಾಂಡ್ ಗೆಹ್ಲೋಟ್‌ರನ್ನು ರಾಜಸ್ಥಾನದ ಮುಖ್ಯಮಂತ್ರಿಯಾಗಿ ಮುಂದುವರೆಸಿದೆ.