ಸಿದ್ದರಾಮಯ್ಯಗೆ ನಮ್ಮ ಸಮುದಾಯದ ಬಗ್ಗೆ ಭಯ ಶುರುವಾಗಿದೆ: ಶ್ರೀರಾಮುಲು

By Kannadaprabha NewsFirst Published Nov 1, 2022, 2:30 PM IST
Highlights

ಸಿದ್ದರಾಮಯ್ಯ ಸ್ವಯಂಘೋಷಿತ ಅಹಿಂದ ನಾಯಕ, ಸ್ವಾರ್ಥಕ್ಕಾಗಿ ಅಹಿಂದ ಮುಖವಾಡ ಹಾಕೊಂಡಿದ್ದಾರೆ ಎಂದು ಅವರ ವಿರುದ್ಧ ವಾಗ್ದಾಳಿ ನಡೆಸಿದ ಶ್ರೀರಾಮುಲು

ಯಾದಗಿರಿ(ನ.01):  ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಎಲೆಕ್ಷನ್‌ ಬಂದಾಗ ಮಾತ್ರ ಹಿಂದುಳಿದ ವರ್ಗಗಳು ನೆನಪಾಗುತ್ತವೆ ಎಂದು ಸಚಿವ ಬಿ. ಶ್ರೀರಾಮುಲು ಟೀಕಿಸಿದ್ದಾರೆ. ಬಳ್ಳಾರಿಯಲ್ಲಿ ಬಿಜೆಪಿ ಎಸ್ಟಿ ಸಮಾವೇಶ ಹಿನ್ನೆಲೆಯಲ್ಲಿ, ಪೂರ್ವಭಾವಿ ಸಭೆಗೆಂದು ಸೋಮವಾರ ಇಲ್ಲಿನ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಶ್ರೀರಾಮುಲು, ಅಹಿಂದ ನಾಯಕ ಎನ್ನುವ ಅರ್ಹತೆ ಸಿದ್ದರಾಮಯ್ಯ ಅವರಿಗೆ ಇಲ್ಲ ಎಂದು ಟೀಕಿಸಿದರು.

ಸಿದ್ದರಾಮಯ್ಯ ಸ್ವಯಂಘೋಷಿತ ಅಹಿಂದ ನಾಯಕ, ಸ್ವಾರ್ಥಕ್ಕಾಗಿ ಅಹಿಂದ ಮುಖವಾಡ ಹಾಕೊಂಡಿದ್ದಾರೆ ಎಂದು ಅವರ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಬಿ. ಶ್ರೀರಾಮುಲು, ಹಿಂದುಳಿದ ಸಮುದಾಯಗಳಿಗೆ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ. 2016 ರಲ್ಲಿ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ಅವರು ಆಯೋಗ ರಚನೆ ಮಾಡಬಹುದು ಎಂದು ಹೇಳಿದ್ದರೂ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆಯೋಗ ರಚನೆ ಮಾಡಲಿಲ್ಲ. ಮೀಸಲಾತಿ ಕೊಡಿಸಲೂ ಸಿದ್ದರಾಮಯ್ಯನ ಕೈಯಲ್ಲಿ ಆಗಲಿಲ್ಲ ಎಂದು ಕಿಡಿ ಕಾರಿದರು.

ಡಿಕೆಶಿ- ಸಿದ್ದು ಒಗ್ಗೂಡಿಸುವ ಬೂಸ್ಟರ್‌ ಡೋಸ್‌ ಫೇಲ್‌ ಆಗಿದೆ: ಸಚಿವ ಶ್ರೀರಾಮುಲು

ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಹೆಚ್ಚು ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಹಾಗೂ ಹಿಂದುಳಿದ ವರ್ಗಗಳ ಸಚಿವರಿದ್ದಾರೆ, ಸಿಎಂ ಬೊಮ್ಮಾಯಿ ನುಡಿದಂತೆ ನಡೆದಿದ್ದಾರೆ. ಸಿದ್ದರಾಮಯ್ಯ ಮನಸ್ಸು ಮಾಡಿದ್ದರೆ ಯಾವಾಗಲೋ ಮೀಸಲಾತಿ ಕೊಡಬಹುದಿತ್ತು. 2016ರಲ್ಲಿ ಸಿದ್ದರಾಮಯ್ಯ ಓಬಿಸಿಗಳಿಗೆ ಮೋಸ ಮಾಡಿದರು. ಸಿದ್ದರಾಮಯ್ಯ ಅದನ್ನ ಎದೆಮುಟ್ಟಿಕೊಂಡು ಹೇಳಲಿ. ಇದನ್ನ ಆತ್ಮಸಾಕ್ಷಿಯಾಗಿ ಹೇಳಬೇಕು ಎಂದು ಗುಡುಗಿದರು.
ಸಿದ್ದರಾಮಯ್ಯ ಅಹಿಂದ ನಾಯಕ ಎಂದು ಬಿಂಬಿಸೋದು ಬಿಡಬೇಕು. ನಮ್ಮದು ಡಬಲ್‌ ಎಂಜಿನ್‌ ಸರ್ಕಾರ. ರಾಷ್ಟ್ರಪತಿ ದ್ರೌಪದಿ ಮುರ್ಮು ಬುಡಕಟ್ಟು ಜನಾಂಗದವರು. ಸಿದ್ದರಾಮಯ್ಯಗೆ ನಮ್ಮ ಸಮುದಾಯದ ಬಗ್ಗೆ ಭಯ ಶುರುವಾಗಿದೆ ಎಂದರು.

ರೆಡ್ಡಿ ಹೇಳಿಕೆಗೆ ಅಂತರ ಕಾಯ್ದುಕೊಂಡ ರಾಮುಲು

ಬಿಜೆಪಿಯವರೇ ನನಗೆ ಹೆಚ್ಚು ತೊಂದರೆ ಕೊಡುತ್ತಿದ್ದಾರೆ ಎಂಬುದಾಗಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹೇಳಿಕೆಗೆ ಸಚಿವ ಹಾಗೂ ರೆಡ್ಡಿ ಆಪ್ತ ಶ್ರೀರಾಮುಲು ಅಂತರ ಕಾಯ್ದುಕೊಂಡು ಪ್ರತಿಕ್ರಿಯಿಸಿದ್ದಾರೆ.

ಯಾದಗಿರಿಯಲ್ಲಿ ಸೊಮವಾರ ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನಾರ್ಧನ ರೆಡ್ಡಿ ರೆಡ್ಡಿ ಅವರು ಎನು ಮಾತಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಜನಾರ್ದನ ರೆಡ್ಡಿ ಹಾಗೂ ನಾನು ಸ್ನೇಹಿತರು. ಆದರೆ, ರಾಜಕೀಯವೇ ಬೇರೆ, ಸ್ನೇಹ ಸಂಬಂಧವೇ ಬೇರೆ ಎಂದು ಚುಟುಕಾಗಿ ಉತ್ತರಿಸಿದರು.
 

click me!