ಕೈ..ಕಾಲು, ಪಕ್ಕೆಲುಬು ಮುರಿದು ಸ್ಮಶಾನಕ್ಕೆ ಕಳಿಸುತ್ತೇವೆ: ಬಿಜೆಪಿ ನಾಯಕ ಖಡಕ್​ ವಾರ್ನಿಂಗ್​

By Suvarna NewsFirst Published Nov 9, 2020, 8:09 PM IST
Highlights

ಬಿಜೆಪಿ ಹಾಗೂ ಟಿಎಂಸಿ ನಡುವಿನ ಗುದ್ದಾಟ ಮುಂದುವರೆದಿದ್ದು  ಟಿಎಂಸಿ ಕಾರ್ಯಕರ್ತರಿಗೆ ಬಿಜೆಪಿ ಅಧ್ಯಕ್ಷ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. 

ಕೋಲ್ಕತ್ತಾ, (ನ.09): ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್​ ಘೋಷ್​ ಅವರು ತೃಣಮೂಲ ಕಾಂಗ್ರೆಸ್​ ಕಾರ್ಯಕರ್ತರಿಗೆ ಖಡಕ್​ ಎಚ್ಚರಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಪೂರ್ವ ಮಿಡ್ನಾಪೋರ್​ ಜಿಲ್ಲೆಯ ಹಲ್ದಿಯಾ ಟೌನ್​​ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಿಲೀಪ್​ ಘೋಷ್​, ಗೂಂಡಾಗಿರಿ ತೋರುತ್ತಿರುವ ಟಿಎಂಸಿ ಕಾರ್ಯಕರ್ತರಿಗೆ ಇನ್ನು 6 ತಿಂಗಳು ಸಮಯ ನೀಡಲಾಗುತ್ತದೆ. ಅಷ್ಟರಲ್ಲಿ ಅವರು ತಪ್ಪು ಸರಿ ಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕೈ, ಕಾಲು, ಪಕ್ಕೆಲುಬುಗಳನ್ನು ಮುರಿದು, ಆಸ್ಪತ್ರೆಗೆ ಸೇರಿಸಲಾಗುವುದು. ಅಷ್ಟಾದರೂ ತಮ್ಮ ದುಷ್ಕೃತ್ಯಗಳನ್ನು ಮುಂದುವರಿಸಿದರೆ ಖಂಡಿತವಾಗಿಯೂ ಸ್ಮಶಾನಕ್ಕೆ ಕಳಿಸಲಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಬಿಜೆಪಿ VS ಮಮತಾ,  ಪಶ್ಚಿಮ ಬಂಗಾಳದಿಂದ ಬಂದ ಭಯಾನಕ ಪೋಟೋಗಳು!

ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಜನರೊಂದಿಗೆ ಇದೆ. ಇಲ್ಲಿನ ವಿಧಾನಸಭೆ ಚುನಾವಣೆ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು. ಯಾವುದೇ ಹೆದರಿಕೆ ಇಲ್ಲದೆ ಇಲ್ಲಿನ ಜನರು ಮತ ಚಲಾವಣೆ ಮಾಡಲು ಅನುಕೂಲ ಕಲ್ಪಿಸಲಾಗುವುದು ಎಂದರು.

ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭೆ ಚುನಾವಣೆಯಂದು ರಾಜ್ಯ ಪೊಲೀಸರ ಭದ್ರತೆಯ ಬದಲು ಕೇಂದ್ರೀಯ ರಕ್ಷಣಾ ಪಡೆಗಳ ಬಿಗಿ ಭದ್ರತೆ ಇರುತ್ತದೆ. ಗೂಂಡಾಗಿರಿ ಮಾಡುತ್ತಿರುವ ಟಿಎಂಸಿ ಕೇಡರ್​ಗಳು ತಮ್ಮ ದಾರಿ ಸರಿಪಡಿಸಿಕೊಳ್ಳದೆ ಇದ್ದಲ್ಲಿ, ಸಾಮಾನ್ಯ ಜನರಿಗೆ ಹಿಂಸೆ ಮಾಡುವುದನ್ನು ಬಿಡದೆ ಇದ್ದಲ್ಲಿ ಅವರನ್ನು ಸ್ಮಶಾನಕ್ಕೆ ಕಳಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ದಿಲೀಪ್ ಘೋಷ್​ ಅವರ ಈ ಮಾತುಗಳಿಗೆ ಟಿಎಂಸಿ ಕಟು ಪ್ರತಿಕ್ರಿಯೆ ಕೊಟ್ಟಿದ್ದು. ಬಿಜೆಪಿ ದ್ವೇಷಯುತ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದೆ

click me!