Breaking: ಸಂಸದ ಕರಡಿ ಸಂಗಣ್ಣ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

By Sathish Kumar KHFirst Published Apr 16, 2024, 7:16 PM IST
Highlights

ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಕರಡಿ ಸಂಗಣ್ಣ ಅವರು ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಕೊಪ್ಪಳ (ಏ.16): ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಕರಡಿ ಸಂಗಣ್ಣ ಅವರು ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಪತ್ರವನ್ನು ಸಲ್ಲಿಕೆ ಮಾಡಿದ್ದು, ಇದನ್ನು ಅಂಗೀಕಾರ ಮಾಡಬೇಕು ಎಂದು ಮನವಿ ಮಾಡಿದ್ದಾರೆ. 

ಕೊಪ್ಪಳ ಲೋಕಸಭಾ ಕ್ಷೇತ್ರದ ಹಾಲಿ ಸಂಸದರೂ ಆಗಿದ್ದ ಕರಡಿ ಸಂಗಣ್ಣ ಅವರಿಗೆ ಈ ಬಾರಿ ಲೋಕಸಭೆ ಟಿಕೆಟ್ ಕೊಡದೇ ಹೊಸ ಅಭ್ಯರ್ಥಿ ಡಾ.ಬಸವರಾಜ್ ಕ್ಯಾವಟರ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಆರಂಭದಿಂದಲೂ ಅಸಮಾಧಾನ ಹೊರ ಹಾಕಿದ್ದ ಕರಡಿ ಸಂಗಣ್ಣ ಅವರು, ನಮ್ಮ ಲೋಕಸಭಾ ಟಿಕೆಟ್‌ ಅನ್ನು ಪುನಃ ಬದಲಾಯಿಸಿ ತಮಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದರು. ಇದ್ಯಾವುದಕ್ಕೂ ಬಿಜೆಪಿ ಹೈಕಮಾಂಡ್ ಆಗಲೀ ಅಥವಾ ರಾಜ್ಯ ಬಿಜೆಪಿ ನಾಯಕರಾಗಲೂ ಸೊಪ್ಪು ಹಾಕಲಿಲ್ಲ. ಇದರಿಂದಾಗಿ ಮನನೊಂದ ಸಂಸದ ಕರಡಿ ಸಂಗಣ್ಣ ಇಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಕರಡಿ ಸಂಗಣ್ಣನನ್ನು ಗುಜರಿ ಲೀಡರ್ ಮಾಡ್ಯಾರ: ಸಂಸದರ ಆಕ್ರೋಶದ ನುಡಿ

ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನವೇ ಕೊಪ್ಪಳ ಕ್ಷೇತ್ರದಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಬಿಜೆಪಿಯಿಂದ ಟಿಕೆಟ್ ಕೊಡದೇ ಅವರನ್ನು ಕೈ ಬಿಡಲಾಗಿತ್ತು. ಇದರಿಂದ ಸಂಗಣ್ಣ ಅವರ ಅಭಿಮಾನಿಗಳು ಡಾ. ಬಸವರಾಜ್ ಕ್ಯಾವಟರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ, ಕೊಪ್ಪಳದ ಬಿಜೆಪಿ ಜಿಲ್ಲಾ ಕಚೇರಿಗೂ ಹಾನಿಯನ್ನುಂಟು ಮಾಡಿದ್ದರು. ನಂತರ, ಸಂಸದ ಕರಡಿ ಸಂಗಣ್ಣ ಅವರು ತಮ್ಮ ಬೆಂಬಲಿಗರೊಂದಿಗೆ ಸಭೆ ಮಾಡಿ, ಬಿಜೆಪಿ ಹೈಕಮಾಂಡ್‌ಗೆ ಮತ್ತೊಮ್ಮೆ ತಮಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಅವರ ಯಾವ ಪ್ರಯತ್ನವೂ ಕೂಡ ಫಲಿಸಲಿಲ್ಲ. ಇದರಿಂದ ತಾವು ಪಕ್ಷದಲ್ಲಿರುವುದೇ ಬೇಡ, ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಶಪಥ ಮಾಡಿ ಬಿಜೆಪಿ ಸ್ಥಾನಕ್ಕೆ ಹಾಗೂ ಸಂಸದ ಸ್ಥಾನಕ್ಕೂ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಸಂಸದ ಸ್ಥಾನಕ್ಕೂ ರಾಜೀನಾಮೆ ಸಲ್ಲಿಕೆ: ರಾಜ್ಯದಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸಲ್ಲಿಕೆ ಮಾಡಿದ್ದಾರೆ. ಮತ್ತೊಂದೆಡೆ, ಇನ್ನು ಕೆಲವು ದಿನಗಳವರೆಗೆ ಸಂಸದ ಸ್ಥಾನ ಇರುತ್ತಿದ್ದರೂ ಅದನ್ನೂ ಉಳಿಸಿಕೊಳ್ಳದೇ ಸಂಸದ ಸ್ಥಾನಕ್ಕೂ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಇ-ಮೇಲ್‌ ಮೂಲಕ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. 

ಕಾಂಗ್ರೆಸ್‌ಗೆ ಶಾಕ್ ನೀಡಿದ ಆಯೋಗ, 2 ದಿನ ಚುನಾವಣಾ ಪ್ರಚಾರದಿಂದ ಸುರ್ಜೆವಾಲ ಬ್ಯಾನ್!

ನಾಳೆ‌ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ: ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿರುವ ಕಾಂಗ್ರೆಸ್‌ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿಯೇ ಕರಡಿ ಸಂಗಣ್ಣ ಸಂಸದ ಸ್ಥಾನ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, ಶಾಸಕ ಲಕ್ಷ್ಮಣ ಸವದಿ ಅವರು ನಿನ್ನೆ ಕರಡಿ ಸಂಗಣ್ಣ ಅವರನ್ನು ಭೇಟಿ ಮಾಡಿ ಅಂತಿಮವಾಗಿ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಚರ್ಚೆ ಮಾಡಿದ್ದರು. ಮಂಗಳವಾರ ಬೆಳಗ್ಗೆ ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರು  ಕರಡಿ ಸಂಗಣ್ಣ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ಮಾಡಿದ್ದರು. ಈಗ ಬಿಜೆಪಿ ತೊರೆದಿರುವ ಕರಡಿ ಸಂಗಣ್ಣ ನಾಳೆ ಕಾಂಗ್ರೆಸ್‌ ಸೇರ್ಪಡೆ ಆಗಲಿದ್ದಾರೆ ಎಂದು ತಿಳಿದುಬಂದಿದೆ.

click me!