ದಿಲ್ಲಿಗೆ ಹೋಗಿದ್ದ ನಾಯಕರು : ಸಿಎಂ ಬದಲಾವಣೆ ವಿಚಾರ ಮತ್ತೆ ಗುಸು ಗುಸು

By Kannadaprabha NewsFirst Published May 11, 2021, 9:18 AM IST
Highlights
  • ಕೋವಿಡ್‌ ಸಮಯದಲ್ಲಿ ನಾಯಕತ್ವ ಬದಲಾವಣೆ ವಿಷಯವು ಅಪ್ರಸ್ತುತ
  • ರಾಜ್ಯದಲ್ಲಿನ ಕೊರೋನಾ ಸ್ಥಿತಿಗತಿಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜತೆ ಚರ್ಚೆ 
  • ರಾಜ್ಯದಲ್ಲಿ ಕೊರೋನಾ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ

 ಬೆಂಗಳೂರು (ಮೇ.11):  ಕೋವಿಡ್‌ನಂತಹ ಸಮಯದಲ್ಲಿ ನಾಯಕತ್ವ ಬದಲಾವಣೆ ವಿಷಯವು ಅಪ್ರಸ್ತುತವಾಗಿದ್ದು, ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ. ಕೇವಲ ರಾಜ್ಯದಲ್ಲಿನ ಕೊರೋನಾ ಸ್ಥಿತಿಗತಿಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜತೆ ಚರ್ಚೆ ನಡೆಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿಗಳ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ದೆಹಲಿಯಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಲಾಗಿದೆ. ಈ ವೇಳೆ ರಾಜ್ಯದಲ್ಲಿ ಕೊರೋನಾ ನಿರ್ವಹಣೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ. ರಾಜ್ಯದಲ್ಲಿನ ಸ್ಥಿತಿಗತಿ, ಹೆಚ್ಚಾಗಿರುವ ಪ್ರಕರಣಗಳ ಕುರಿತು ಅಮಿತ್‌ ಶಾ ಆತಂಕ ವ್ಯಕ್ತಪಡಿಸಿದ್ದಾರೆ. ಯಾವುದೇ ರಾಜಕೀಯ ಉದ್ದೇಶದ ಭೇಟಿಯಾಗಿಲ್ಲ. ಕೊರೋನಾ ವೇಳೆಯಲ್ಲಿ ಬೇರೆ ಯಾವುದೇ ವಿಷಯ ಚರ್ಚೆ ಮಾಡುವ ಉದ್ದೇಶವಾಗಲಿ, ಆದ್ಯತೆಯಾಗಲಿ ಇಲ್ಲ. ಅದರ ಅಗತ್ಯವೂ ಇಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ಅಪ್ರಸ್ತುತ. ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಯೋಚನೆ ಮಾಡುವುದು ಬಹಳ ದೊಡ್ಡ ತಪ್ಪು. ಕೊರೋನಾ ಸೋಂಕು ನಿಯಂತ್ರಣ ಮಾಡಬೇಕಾದ ವೇಳೆಯಲ್ಲಿ ಇಂತಹ ಆಲೋಚನೆಗಳೇ ಬರಬಾರದು. ಇದೆಲ್ಲಾ ಹಸಿ ಸುಳ್ಳಾಗಿದ್ದು, ನಾಯಕತ್ವ ಬದಲಾವಣೆ ಇಲ್ಲ ಎಂದು ಹೇಳಿದರು.

ಸಿಎಂ ಭೇಟಿಯಾದ ನಳೀನ್ ಕುಮಾರ್ ಕಟೀಲ್: ಬಿಜೆಪಿಯಲ್ಲಿ ಸಮ್‌ಥಿಂಗ್...ಸಮ್‌ಥಿಂಗ್ ...

ಅಮಿತ್‌ ಶಾ ಅವರಿಗೆ ನಮಗೆ ಬೇಕಾಗಿರುವ ಆಮ್ಲಜನಕದ ಬೇಡಿಕೆಯ ಬಗ್ಗೆ ಎಲ್ಲ ವಿವರಗಳನ್ನು ನೀಡಿದ್ದೇವೆ. ರಾಜ್ಯಕ್ಕೆ 965 ಮೆಟ್ರಿಕ್‌ ಟನ್‌ ನಿಗದಿಯಾಗಿದೆ. ರಾಜ್ಯದಲ್ಲಿಯೇ ಉತ್ಪಾದನೆಯಾಗುವ ಆಮ್ಲಜನಕವನ್ನು ನೀಡಬೇಕು. ದೂರದ ರಾಜ್ಯಗಳಿಂದ ತರುವುದು ಕಷ್ಟವಾಗಲಿದೆ ಎಂದಿದ್ದೇವೆ. ಜತೆಗೆ ನಮ್ಮ ರಾಜ್ಯದ ಆಮ್ಲಜನಕದ ಕೋಟಾವನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಲಾಗಿದೆ. ಇದರೊಂದಿಗೆ ಕೇಂದ್ರ ಆಮ್ಲಜನಕ ನೀಡಿದರೂ ಸಹ ಟ್ಯಾಂಕರ್‌ಗಳ ಕೊರತೆಯಿಂದಾಗಿ ಜಿಲ್ಲೆಗಳಿಗೆ ತಲುಪಿಸಲು ಕಷ್ಟವಾಗುತ್ತಿದೆ ಎಂಬ ಮಾಹಿತಿ ನೀಡಲಾಗಿದೆ. ಇದಕ್ಕೆಲ್ಲಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಈಗಾಗಲೇ ನಾಲ್ಕು ಟ್ಯಾಂಕರ್‌ಗಳಿಗೆ ಅನುಮೋದನೆ ನೀಡಿದ್ದಾರೆ. ಇನ್ನು 10 ಟ್ಯಾಂಕರ್‌ಗಳ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಅದಕ್ಕಾಗಿ ಸ್ವಲ್ಪ ಸಮಯ ಹಿಡಿಯಲಿದೆ ಎಂದಿದ್ದಾರೆ. ರೆಮ್‌ಡೆಸಿವಿರ್‌ ಔಷಧ ಬಗ್ಗೆ ವಿವರ ನೀಡಿದ್ದೇವೆ. 2.67 ಲಕ್ಷ ಡೋಸ್‌ ನೀಡಲು ಈಗಾಗಲೇ ಒಪ್ಪಿಗೆ ನೀಡಲಾಗಿದೆ. ಇನ್ನೂ ಹೆಚ್ಚುವರಿ ಕೊಡುವ ಭರವಸೆ ಸಿಕ್ಕಿದೆ ಎಂದರು.

ಸರ್ಕಾರದ ಕೋವಿಡ್ ನಿರ್ವಹಣೆಗೆ ಸಿಡಿಮಿಡಿಗೊಂಡ ಈಶ್ವರಪ್ಪ : ಸುಮ್ಮನೆ ಇದ್ದ ಸಿಎಂ ...

ಮುಖ್ಯಮಂತ್ರಿಗಳು ಬರೆದ ಪತ್ರದ ಮೇರೆಗೆ ಬೋಯಿಂಗ್‌ ಕಂಪನಿ ಯಲಹಂಕದಲ್ಲಿ ಆಮ್ಲಜನಕ ಸಹಿತ 250 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ, ಮತ್ತೊಂದು ಆಮ್ಲಜನಕ ಒಳಗೊಂಡ 250 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಲಬುರಗಿಯಲ್ಲಿ ಆರಂಭಿಸಲು ಸರ್ಕಾರ ಮುಂದಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಅನುಮತಿ ಕೊಡುವ ಕೆಲಸ ಮಾಡಿಸಿಕೊಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭರವಸೆ ನೀಡಿದ್ದಾರೆ. ರಾಜ್ಯದ ಕೊರೋನಾ ನಿರ್ವಹಣೆ ಬಗ್ಗೆ ಹೈಕಮಾಂಡ್‌ ಬೇಸರ ವ್ಯಕ್ತಪಡಿಸಿರುವ ವಿಚಾರ ಸತ್ಯಕ್ಕೆ ದೂರವಾಗಿದೆ. ನಾವು ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರವನ್ನು ನೀಡಿದ್ದೇವೆ. ರಾಜ್ಯದ ಉತ್ತರದ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

click me!