
ವಿಧಾನಮಂಡಲ (ಫೆ.14): ಮುಂಬರುವ ಚುನಾವಣೆಯ ಪ್ರಚಾರ ಸಭೆ, ಏರೋ ಇಂಡಿಯಾ ಕಾರ್ಯಕ್ರಮ, ಕ್ಷೇತ್ರದಲ್ಲಿ ಚುನಾವಣೆಗೆ ಸಜ್ಜುಗೊಳಿಸಬೇಕಾಗಿರುವ ಹಿನ್ನೆಲೆಯಲ್ಲಿ ಸೋಮವಾರದ ಅಧಿವೇಶನದಲ್ಲಿ ಉಭಯ ಸದನಗಳು ಬಹುತೇಕ ಖಾಲಿ ಖಾಲಿ... ಸೋಮವಾರ ಸಚಿವರು ಸೇರಿದಂತೆ ಎಲ್ಲ ಪಕ್ಷಗಳ ಸದಸ್ಯರ ಹಾಜರಾತಿ ತೀರಾ ಕಡಿಮೆ ಇತ್ತು. ಹೀಗಾಗಿ ಕಲಾಪ ಸಹ ಪೇಲವವಾಗಿತ್ತು. ಕಳೆದ ಶುಕ್ರವಾರ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ವೇಳೆಯೇ ಪ್ರಮುಖ ಮುಖಂಡರು, ಶಾಸಕರು ಗೈರಾಗಿದ್ದರು. ಸೋಮವಾರ ಇನ್ನಷ್ಟು ಹೆಚ್ಚಿನ ಸಂಖ್ಯೆಯ ಗೈರು ಹಾಜರಾತಿ ಕಂಡುಬಂದಿತು.
ಏರೋ ಇಂಡಿಯಾ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮನದ ಕಾರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಸಚಿವರು ಆಗಮಿಸಿರಲಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್. ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಸದಸ್ಯರೂ ಗೈರಾಗಿದ್ದರು. ವಿಧಾನಸಭೆ ಆರಂಭದ ವೇಳೆ ಆಡಳಿತಾರೂಢ ಪಕ್ಷದಿಂದ ಸುಮಾರು 25 ಶಾಸಕರು, ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಸುಮಾರು 20 ಶಾಸಕರು, 7 ಸಚಿವರು ಮಾತ್ರ ಸದನದಲ್ಲಿ ಕಂಡು ಬಂದರು.
ಯಾರ ಹಂಗಿಲ್ಲದೆ ಸರ್ಕಾರ ರಚಿಸುವ ಶಕ್ತಿ ನೀಡಿ: ನಿಖಿಲ್ ಕುಮಾರಸ್ವಾಮಿ
ಎಲ್ಲ ಪಕ್ಷದವರು ಗೈರು ಹಾಜರಾಗಿದ್ದರಿಂದ ಯಾರೂ ಕೂಡಾ ಆಕ್ಷೇಪ ವ್ಯಕ್ತಪಡಿಸದೆ ಕಲಾಪದಲ್ಲಿ ಪಾಲ್ಗೊಂಡಿದ್ದು ಮಾತ್ರ ವಿಶೇಷವಾಗಿತ್ತು. ಮಧ್ಯಾಹ್ನ ಸುಮಾರು 12 ಗಂಟೆಯ ನಂತರ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕಲಾಪದಲ್ಲಿ ಭಾಗಿಯಾದರು. ಭೋಜನ ವಿರಾಮದ ನಂತರ ಶಾಸಕರು ಸದನದಲ್ಲಿ ಕಾಣಿಸಲಿಲ್ಲ. ಈ ವೇಳೆ ಕಾಂಗ್ರೆಸ್ ಸದಸ್ಯರ ಸಂಖ್ಯೆ ತುಸು ಕಡಿಮೆ ಇದ್ದ ಕಾರಣ ಸಚಿವ ಆರ್.ಅಶೋಕ್, ಸಿ.ಟಿ.ರವಿ ಅವರು ಕಾಂಗ್ರೆಸ್ ಸದಸ್ಯರಿಗೆ ಸ್ವಲ್ಪವೂ ಜನಪರ ಕಾಳಜಿ ಇಲ್ಲ, ಸದನಕ್ಕೆ ಬಂದು ಚರ್ಚಿಸುತ್ತಿಲ್ಲ. ಹೀಗೆ ಗೈರು ಹಾಜರಾದರೆ ಹೇಗೆ ಎಂದು ಟೀಕಿಸಿದರು.
ಗರಂ ಆದ ಸಭಾಪತಿ ಹೊರಟ್ಟಿ: ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಸಚಿವರ ಬದಲಾಗಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಉತ್ತರಿಸಲಿದ್ದಾರೆ ಎಂದು ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಅವರ ಮಾತಿಗೆ ಸಭಾಪತಿ ಬಸವರಾಜ ಹೊರಟ್ಟಿಕೊಂಚ ಗರಂ ಆಗಿ, ಟೇಕನ್ ಫಾರ್ ಗ್ರ್ಯಾಂಟೆಡ್ ಎಂದು ತಿಳಿದುಕೊಳ್ಳಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಜೆಡಿಎಸ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರು ಪ್ರವಾಸೋದ್ಯಮ ಇಲಾಖೆ ಕುರಿತು ಕೇಳಿದ ಪ್ರಶ್ನೆಗೆ ಸಚಿವ ಅಶ್ವತ್ಥನಾರಾಯಣ ಉತ್ತರಿಸಲು ಎದ್ದು ನಿಂತಾಗ, ತಮ್ಮ ಪರವಾಗಿ ಯಾರು ಉತ್ತರಿಸುತ್ತಾರೆ ಎಂದು ಸಚಿವ ಆನಂದ ಸಿಂಗ್ ತಮಗೆ ಮಾಹಿತಿ ನೀಡಿಲ್ಲ.
ಹೀಗಿರುವಾಗ ಉತ್ತರಿಸಲು ಮುಂದಾಗುವುದು ಸರಿಯಲ್ಲ ಎಂದು ಸಭಾಪತಿಗಳು ಪ್ರತಿಕ್ರಿಯಿಸಿದರು. ಇದಕ್ಕೆ ಮುಖ್ಯ ಸಚೇತಕರು ಉತ್ತರ ಸಿದ್ಧವಿದೆ, ಸಚಿವರು ಉತ್ತರ ನೀಡುತ್ತಾರೆಂದು ಸಮಜಾಯಿಸಿ ನೀಡಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಹೊರಟ್ಟಿ, ತಮಗೆ ಸಚಿವ ಆನಂದಸಿಂಗ್ ಯಾವುದೇ ಮಾಹಿತಿ ನೀಡಿಲ್ಲ ಎಂದು ಗರಂ ಆದರು. ಏರೋ ಇಂಡಿಯಾ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಇಲ್ಲದ ಕಾರಣ ಸಚಿವ ಆನಂದ ಸಿಂಗ್ ಕಾರಿನಲ್ಲಿ ಬರುತ್ತಿರುವುದಾಗಿ ಹೇಳಿದ್ದಾರೆ. ಆದರೆ ಟ್ರಾಫಿಕ್ ಕಾರಣ ತಡವಾಗುತ್ತಿದೆ, ಮಧ್ಯಾಹ್ನದ ವೇಳೆಗೆ ಬರುವುದಾಗಿ ತಿಳಿಸಿರುವುದಾಗಿ ಸಭಾಪತಿಗಳು ಸದನಕ್ಕೆ ತಿಳಿಸಿದರು.
ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಬೋಜೇಗೌಡ, ಏರೋ ಇಂಡಿಯಾ ಕಾರ್ಯಕ್ರಮದಿಂದ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗುತ್ತದೆ ಎಂದು ಮೊದಲೇ ಗೊತ್ತಿರಲಿಲ್ಲವೇ? ಅಧಿವೇಶವನವನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ನಿನ್ನೆ ರಾತ್ರಿಯೇ ಬರಬೇಕಿತ್ತು. ನಾವೆಲ್ಲ ನಿನ್ನೆಯೇ ಬಂದಿಲ್ಲವೇ ಎಂದು ಪ್ರಶ್ನಿಸಿದರು.
ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೆಸೆಯಿರಿ: ಪ್ರಜಾಧ್ವನಿ ಯಾತ್ರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕರೆ
ಅನುಮತಿ ಪಡೆದು ಗೈರು: ಸಚಿವರಾದ ಸಿ.ಸಿ.ಪಾಟೀಲ್ ಜಾತ್ರೆಯೊಂದರಲ್ಲಿ ಭಾಗವಹಿಸಲು, ಡಾ.ಸುಧಾಕರ್ ಏರೋ ಇಂಡಿಯಾದಲ್ಲಿ ಭಾಗಿಯಾಗಲಿರುವ ಕಾರಣ ಸದನಕ್ಕೆ ಗೈರು ಹಾಜರಾಗಲು ಕೋರಿದ್ದಾರೆ. ಅದೇ ರೀತಿ ಗೋವಿಂದ ಕಾರಜೋಳ, ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅನುಮತಿ ಕೇಳಿದ್ದಾರೆ ಎಂದು ಸಭಾಪತಿಗಳು ಸದನಕ್ಕೆ ತಿಳಿಸಿದರು.
ಇದು ಕೊನೆಯ ಅಧಿವೇಶನವಾಗಿದೆ. ಹಾಗಾಗಿ ಎಲ್ಲ ಶಾಸಕರು ತಮ್ಮ ಕೆಲಸವನ್ನು ಸ್ವಲ್ಪ ದಿನಗಳ ಕಾಲ ಮುಂದೂಡಿ, ಕಲಾಪದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.
- ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭೆ ಸಭಾಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.