
ಮಂಡ್ಯ (ಮಾ.10): ಮಂಡ್ಯದ ಗಂಡು ಖ್ಯಾತಿಯ ಅಂಬರೀಶ್ ನಮ್ಮ ಪಕ್ಷದಲ್ಲಿ ಮಂತ್ರಿಯಾಗಿದ್ದರು. ಮುಖ್ಯವಾಗಿ ಅಂಬರೀಶ್ ಅವರು ಕಾಂಗ್ರೆಸ್ಸಿಗರಾಗಿಯೇ ಪ್ರಾಣ ಬಿಟ್ಟಿದ್ದಾರೆ. ಇದೆಲ್ಲವೂ ನಿಮ್ಮ ತಲೆಯಲ್ಲಿರಲಿ. ಈಗ ಅಂಬರೀಶ್ ಸ್ನೇಹಿತ ಸ್ಟಾರ್ ಚಂದ್ರು ಅವರನ್ನೇ ಅಭ್ಉರ್ಥಿ ಮಾಡಿದ್ದೇವೆ. ಅವರನ್ನು ಗೆಲ್ಲಿಸುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮಂಡ್ಯ ಜಿಲ್ಲಾ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಬೇಸತ್ತ ಜನರ ಋಣ ತೀರಿಸಲು ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿ ಋಣ ತೀರಿಸಿದ ಸಮಾಧಾನ ನಮಗಿದೆ. ನಟ ಅಂಬರೀಶ್ ನಮ್ಮ ಪಕ್ಷದಲ್ಲಿ ಮಂತ್ರಿಯಾಗಿದ್ದರು. ಹೀಗಾಗಿ, ಅವರ ಹೆಸರಿನಲ್ಲಿ ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದೇವೆ. ಮುಖ್ಯವಾಗಿ ಅಂಬರೀಶ್ ಪ್ರಾಣ ಬಿಡುವಾಗ ಕಾಂಗ್ರೆಸ್ಸಿಗರಾಗಿದ್ದರು ಎಂಬುದು ನಿಮ್ಮ ತಲೆಯಲ್ಲಿರಲಿ. ಈಗ ಅಂಬರೀಶ್ ಸ್ನೇಹಿತರನ್ನೇ ಅಭ್ಯರ್ಥಿ ಮಾಡಿದ್ದೇವೆ. ಸೂರ್ಯ ಚಂದ್ರರಷ್ಟೇ ಸ್ಟಾರ್ ಚಂದ್ರು ಗೆಲುವು ಸತ್ಯ. ನಿಜ ತಾನೇ ಅಮ್ಮಾ, ನಿಜ ತಾನೇ ಅಕ್ಕಾ ಎಂದು ಮನವಿ ಮಾಡಿದರು.
Loksabha Elections 2024: ರಾಜ್ಯದಲ್ಲಿ ಕಾಂಗ್ರೆಸ್‌ಗೆ 15 ರಿಂದ 16 ಸೀಟು ಗೆಲುವು: ಸಚಿವ ಕೆ.ಎನ್.ರಾಜಣ್ಣ
ನಾನು, ಸಿದ್ದರಾಮಯ್ಯ ನಿಮ್ಮಿಂದ ಜೈಕಾರ ಅಥವಾ ಹೂವಿನ ಹಾರ ಹಾಕಿಸಿಕೊಳ್ಳಲು ಬಂದಿಲ್ಲ. 5 ಗ್ಯಾರಂಟಿ ಅನುಷ್ಠಾನಕ್ಕೆ ಕಾರಣಕರ್ತರಾದ ನಿಮಗೆ ಧನ್ಯವಾದ ಹೇಳಲು ಬಂದಿದ್ದೇವೆ. ದೇವರು ವರವನ್ನು ಕೊಡಲ್ಲ, ಶಾಪವನ್ನು ಕೊಡಲ್ಲ ಅವಕಾಶ ಮಾತ್ರ ಕೊಡುತ್ತಾನೆ. ನೀವು ಕೊಟ್ಟ ಅವಕಾಶದಿಂದ ದೇಶಕ್ಕೆ ಮಾದರಿ ಆಡಳಿತ ಮಾಡುತ್ತಿದ್ದೇವೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದಿದ್ದೆ. ಹೀಗಾಗಿ, 5 ಗ್ಯಾರಂಟಿ ನೋಡಿ ಅರಳಿದ ಕಮಲ ಮುದುಡಿತು ಎಂದು ಟೀಕೆ ಮಾಡಿದರು.
ರಾಜ್ಯದ ಎಲ್ಲ ತಾಯಂದಿರ ಮೊಗದಲ್ಲಿ ನಗು ಕಾಣುತ್ತಿದೆ. ಗ್ಯಾರಂಟಿ ಯೋಜನೆಗಳು ಬಳಕೆ ಆಗುತ್ತಿವೆ. ಫ್ರೀಯಾಗಿ ಬಸ್‌ನಲ್ಲಿ ಓಡಾಡುತ್ತಿದ್ದೀರಾ? 2000 ಸಾವಿರ ಬರ್ತಿದೆಯಾ? ಕೈ ಎತ್ತಿ. ನಿಮ್ಮ ಹೆಂಡತಿಯರಿಗೂ 2000 ಬರ್ತಿದೆ ಅಲ್ವಾ ಕೈ ಎತ್ತಿ ಎಂದರು. ರಾಜ್ಯದ ಜನರಿಗಾಗಿ ಇಂತಹ ಕಾರ್ಯಕ್ರಮ ಮಾಡಿದ್ದು ಕುಮಾರಸ್ವಾಮಿ, ಯಡಿಯೂರಪ್ಪ ಅಲ್ಲ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಮಾಡಿದ್ದು. ನುಡಿದಂತೆ ನಡೆದದ್ದು ಕಾಂಗ್ರೆಸ್ ಸರ್ಕಾರ. ಧರ್ಮರಾಯ ಧರ್ಮತ್ವ, ಕರ್ಣನ ದಾನ, ಅರ್ಜುನ ಗುರಿ, ಕೃಷ್ಣನ ತಂತ್ರ ಇದ್ರೆ ಯಶಸ್ಸು. ಇವತ್ತಿಗೆ ಕೆಪಿಸಿಸಿ ಅಧ್ಯಕ್ಷನಾಗಿ 4 ವರ್ಷ ತುಂಬಿದೆ. ಖಾಲಿ ಇದ್ದ ಮಂಡ್ಯ ಜಿಲ್ಲೆಯಲ್ಲಿ ಅತೀ ಹೆಚ್ಚು ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಹೇಳಿ ಎಂದು ಹೇಳಿದರು.
ಮಂಡ್ಯದಲ್ಲಿ ಕೆರೆ ತುಂಬಿಸಲು, ನಾಲೆ ಅಭಿವೃದ್ಧಿಗೆ 2000 ಕೋಟಿ ಮಂಜೂರು ಮಾಡಿದ್ದೇವೆ. KRS ಪ್ರವಾಸಿ ಕೇಂದ್ರ ಮಾಡಲು ತೀರ್ಮಾನ ಮಾಡಿದ್ದೇವೆ. ರೈತರ ಬದುಕು, ನೀರಿಗಾಗಿ ಮೇಕೆದಾಟು ಯೋಜನೆ ಮಾಡಲಾಗುತ್ತಿದೆ. ಮೇಕೆದಾಟು ಅನುಷ್ಠಾನವಾದರೆ, ಕಷ್ಟಕಾಲದಲ್ಲಿ ಸಹಕಾರಿಯಾಗಲಿದೆ. ಬಿಜೆಪಿ, ಜೆಡಿಎಸ್ ಸರ್ಕಾರ ಇದ್ದಾಗ ಇದ್ಯಾವುದನ್ನು ಮಾಡಲಿಲ್ಲ. ರೈತರಿದ್ದೀರಾ ನಿಮ್ಮ ಬೆಳೆಗಳನ್ನು ಉಳಿಸಿದ್ದೇವೆ, ಆತ್ಮಸಾಕ್ಷಿ ಮುಟ್ಟಿ ಹೇಳಿ. ಇವತ್ತು ನಂಟುಸ್ಥನ ಮಾಡಿಕೊಂಡು ಓಡಾಡುವ ಜೆಡಿಎಸ್ ಬಿಜೆಪಿ ಏನು ಮಾಡಿದ್ದಾರೆ. ದೇವೇಗೌಡರು ಇವತ್ತು ಅಯ್ಯಯ್ಯೋ ಎಂದು ಕಣ್ಣೀರು ಹಾಕುತ್ತಿದ್ದಾರೆ. ನಿಮ್ಮ ಕಣ್ಣೀರು ನಿಮ್ಮ ಮನೆಗೆ ಹೊರತು ರಾಜ್ಯಕ್ಕಲ್ಲ ದೇವೇಗೌಡರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರನ್ನು ಉಳಿಸಲು ಗ್ಯಾರಂಟಿ ಯೋಜನೆ. ನಿಮ್ಮ ಋಣ ತೀರಿಸಿದ ಸಮಾಧಾನ ನಮಗಿದೆ ಎಂದು ಹೇಳಿದರು.
ಜನರ ಬಳಿ ಕುಮಾರಸ್ವಾಮಿ ಹೇಗೆ ಮುಖ ತೋರಿಸ್ತಾರೆ?: ಡಿ.ಕೆ. ಶಿವಕುಮಾರ್
ಕುಮಾರಣ್ಣ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಬಂದು ಕುಮಾರಣ್ಣನ ಮಗನ ಪರ ಮತ ಕೇಳೋಕೆ ಬಂದಿದ್ದೆನು. ಆದರೆ, ನೀವು ಅದನ್ನ ಒಪ್ಪಲಿಲ್ಲ. ಅದು ಒಂದು ಬದಿಗಿರಲಿ. ಮೈತ್ರಿ ಧರ್ಮ ಪಾಲಿಸಬೇಕಿದ್ದು ನನ್ನ ಧರ್ಮವಾಗಿತ್ತು. ಅದನ್ನ ಅಂದು ನಾನು ಪ್ರಾಮಾಣಿಕವಾಗಿ ಮಾಡಿದೆ. ಈಗ ಕುಮಾರಣ್ಣ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಅಧಿಕಾರದಿಂದ ಕೆಳಗಿಳಿಸಿದವರ ಜೊತೆಯೇ ಮೈತ್ರಿ ಮಾಡಿಕೊಂಡಿದ್ದಾರೆ. ಈ ಅಪವಿತ್ರ ಮೈತ್ರಿಯನ್ನ ನಾನು ಒಪ್ಪಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.