ಮಂಡ್ಯ ಜಿಲ್ಲೆಯಲ್ಲಿ ಮೂವರು ರೌಡಿಶೀಟರ್‌ಗಳು ಅಧಿಕೃತವಾಗಿ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಅವರಿಂದ ಜಿಡಿಎಸ್ ಪಕ್ಷ ಸೇರ್ಪಡೆ ಆಗಿದ್ದಾರೆ.
ಮಂಡ್ಯ (ಫೆ.08): ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರೌಡಿಗಳ ರಾಜಕಾರಣ ಪ್ರವೇಶಕ್ಕೆ ಭಾರಿ ವೇದಿಕೆ ಸೃಷ್ಟಿಯಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಮೂವರು ರೌಡಿಶೀಟರ್‌ಗಳು ಅಧಿಕೃತವಾಗಿ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಅವರಿಂದ ಜಿಡಿಎಸ್ ಪಕ್ಷ ಸೇರ್ಪಡೆ ಆಗಿದ್ದಾರೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ರೌಡಿಗಳ ರಾಜಕೀಯ ಎಂಟ್ರಿ ಶುರುವಾಗುತ್ತದೆ. ಹಲವು ವರ್ಷಗಳವರೆಗೆ ರೌಡಿಸಂ ಮಾಡಿಕೊಂಡು ಬಂದು ಇನ್ನೇನು ವಯಸ್ಸಾಗುತ್ತಿದ್ದಂತೆ ಪೊಲೀಸರಿಂದ ಬಚಾವಾಗಲು ರಾಜಕಾರಣ ಸೇರಿ ಅಧಿಕಾರ ಹಿಡಿದುಕೊಳ್ಳುವುದು ಮಾಮೂಲಿ ಆಗಿದೆ. ಇಲ್ಲವೆಂದರೆ ರೌಡಿಸಂ ವೇಳೆ ತಾನು ಕೊಟ್ಟಿದ್ದ ಕಿರುಕುಳ ಹಾಗೂ ಇತರೆ ಅನೈತಿಕ ಕಾರ್ಯಗಳಿಗೆ ದ್ವೇಷವನ್ನು ಹೊಂದಿದವರು ಅವರನ್ನು ಹೊಡೆದುರುಳಿಸುತ್ತಾರೆ. ಇಲ್ಲವಾದರೆ ರೌಡಿಗಳ ಮೇಲಿರುವ ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರೇ ಬಂಧಿಸಿ ಜೈಲುಗಟ್ಟುತ್ತಾರೆ. ಈ ಎಲ್ಲದರಿಂದ ರಕ್ಷಣೆ ಮಾಡಿಕೊಳ್ಳಲು ರೌಡಿಗಳಿಗೆ ರಾಜಕೀಯ ಪ್ರವೇಶ ಸರ್ವೇ ಸಾಮಾನ್ಯವಾದಂತಾಗಿದೆ.
Assembly election: ಬಿಜೆಪಿ ರೌಡಿ ಮೋರ್ಚಾ ವೆಬ್ ಸೈಟ್ ಆರಂಭಿಸಿದ ಕಾಂಗ್ರೆಸ್ : ವಿನೂತನ ಅಪಪ್ರಚಾರ
ಜೆಡಿಎಸ್ ಶಾಲು ಹಾಕಿದ ಶಾಸಕ ಡಿ.ಸಿ. ತಮ್ಮಣ್ಣ: ಇತ್ತೀಚೆಗೆ ಬೆಂಗಳೂರಿನಲ್ಲಿ ಸ್ಯಾಂಟ್ರೋ ರವಿ ಮತ್ತು ಮಂಡ್ಯದ ಫೈಟರ್ ರವಿ ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದ ವಿಚಾರ ಭಾರಿ ಮುನ್ನೆಲೆಗೆ ಬಂದಿತ್ತು. ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿ ಮಾಡಿತ್ತು. ಈ ಬಗ್ಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪರಸ್ಪರ ಕೆಸರೆರಚಾಟ ಮಾಡಿಕೊಂಡಿದ್ದರು. ಕೊನೆಗೆ ಕೆಲವು ಪ್ರತಿಷ್ಠಿತ ಮಠದ ಪೀಠಾಧ್ಯಕ್ಷ ಸ್ವಾಮೀಜಿಗಳು ಕೂಡ ರೌಡಿಶೀಟರ್‌ಗಳು ರಾಜಕೀಯ ಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಈಗ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮೂವರು ರೌಡಿಶೀಟರ್‌ಗಳು ಜೆಡಿಎಸ್‌ಗೆ ಸೇರ್ಪಡೆ ಆಗಿದ್ದಾರೆ. ಈಗ ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಅವರಿಂದ ಜೆಡಿಎಸ್ ಪಕ್ಷ ಟವೆಲ್ ಅನ್ನು ಹೊದಿಸಿಕೊಳ್ಳುವ ಮೂಲಕ ಮೂವರು ರೌಡಿಶೀಟರ್‌ಗಳು ಅಧಿಕೃತವಾಗಿ ರಾಜಕಾರಣಕ್ಕೆ ಪ್ರವೇಶ ಮಾಡಿದ್ದಾರೆ.
ರೌಡಿಶೀಟರ್‌ಗಳ ನೂರಾರು ಸಹಚರರೂ ಪಕ್ಷ ಸೇರ್ಪಡೆ: ಇಂದು ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮೂವರು ರೌಡಿಶೀಟರ್‌ಗಳು ಶಾಸಕ ಡಿ.ಸಿ. ತಮ್ಮಣ್ಣ ನೇತೃತ್ವದಲ್ಲಿ ಪಕ್ಷ ಸೇರಿದ್ದಾರೆ. ಅವರಲ್ಲಿ ಪ್ರಶಾಂತ್ @ಕುಳ್ಳಿ, ವರುಣ್@ ಚೊತ್ತ ಹಾಗೂ ನಿತಿನ್ ಜೆಡಿಎಸ್ ಸೇರಿದ ರೌಡಿಶೀಟರ್‌ಗಳು ಆಗಿದ್ದಾರೆ. ಇವರೊಂದಿಗೆ ರೌಡಿಶೀಟರ್‌ಗಳ ನೂರಾರು ಸಹಚರರು, ವಿವಿಧ ಪಕ್ಷಗಳಲ್ಲಿ ಕೆಲಸ ಮಾಡಿದ್ದ ಕಾರ್ಯಕರ್ತರು ಹಾಗೂ ಹೊಸ ಯವಕರು ಸೇರಿದಂತೆ ಹಲವರು ಜೆಡಿಎಸ್ ಸೇರಿದ್ದಾರೆ.
ಕೊಲೆ ಸೇರಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿ: ಮಂಡ್ಯ ಜಿಲ್ಲೆ ಸೇರಿದಂತೆ ಬೆಂಗಳೂರು, ಮೈಸೂರು ಹಾಗೂ ರಾಜ್ಯದ ವಿವಿಧೆಡೆ ಕೊಲೆ, ಗಲಭೆಗಳು ಹಾಗೂ ಆಫ್ ಮರ್ಡರ್ ಪ್ರಕರಣಗಳಲ್ಲಿ ಜೆಇಎಸ್ ಪಕ್ಷ ಸೇರ್ಪಡೆ ಆಗಿರುವ ರೌಡಿಶೀಟರ್‌ಗಳು ಭಾಗಿಯಾಗಿದ್ದಾರೆ. ಇವರು ಕಳೆದ 8 ವರ್ಷಗಳಿಂದ ಆಕ್ಟೀವ್ ಆಗಿರುವ ರೌಡಿಶೀಟರ್‌ಗಳು ಆಗಿದ್ದಾರೆ. ಮತ್ತೊಂದೆಡೆ ಜಾತ್ರೆಗಳು, ವಿವಿಧ ಆಚರಣೆಗಳು, ಕಾರ್ಯಕ್ರಮಗಳು ಹಾಗೂ ರಾಜಕೀಯ ಸಮಾವೇಶದ ಮೊದಲು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಇತರೆ ಪೊಲೀಸರು ನಡೆದುವ ರೌಡಿಶೀಟರ್ ಪರೇಡ್ ವೇಳೆಯೂ ಇವರು ಹಾಜರಾಗಿರುತ್ತಾರೆ. ಇನ್ನು ಜೆಡಿಎಸ್ ಸೇರ್ಪಡೆ ಆಗಿರುವ ರೌಡಿಶೀಟರ್ಗಳ ಮೇಲೆ ಮದ್ದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ಇವೆ ಎಂದುತಿಳಿದುಬಂದಿದೆ.
ರಾಜಕೀಯಕ್ಕೆ ರೌಡಿಗಳ ಎಂಟ್ರಿ: ಪೇಜಾವರ ಶ್ರೀ ಕಿಡಿ
ರೌಡಿಶೀಟರ್ ಸೇರ್ಪಡೆ ಸಮರ್ಥಿಸಿಕೊಂಡ ತಮ್ಮಣ್ಣ: ಮದ್ದೂರಿನಲ್ಲಿ ರೌಡಿಶೀಟರ್‌ಗಳು ಜೆಡಿಎಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಶಾಸಕ ಡಿ.ಸಿ. ತಮ್ಮಣ್ಣ ಮಾಧ್ಯಮಗಳೊಂದಿಗೆ ಮಾತನಾಡಿ, ಸರ್ಟಿಫಿಕೇಟ್ ತಂದು ಪಕ್ಷಕ್ಕೆ ಸೇರಿಕೊಳ್ಳಿ ಎನ್ನಲು ಆಗಲ್ಲ. ಸೇರ್ಪಡೆ ಆದವರಲ್ಲಿ 5% ರೌಡಿಗಳು ಇರಬಹುದು. ರೌಡಿಗಳೆಲ್ಲಾ ಮನುಷ್ಯರಲ್ಲವಾ? ರೌಡಿಶೀಟರ್‌ಗಳು ಎಲ್ಲರೂ ಕೊಲೆಗಾರರ.? ಕ್ರಿಮಿನಲ್ ಗಳು ಆಗಿದ್ರೆ ಏನೋ ನೋಡಬಹುದು. ಅವರು ಕೊಲೆ ಮಾಡಿರುವ ಲಿಸ್ಟ್ ಇದ್ದರೆ ಕೊಡಿ.
ತಮ್ಮಣ್ಣ ಏನು ರೌಡಿ ಅಲ್ಲ. ರೌಡಿಗಳು ಮನಪರಿವರ್ತನೆ ಆಗಬಾರದಾ.? ಎಂದು ರೌಡಿಶೀಟರ್‌ಗಳು ಪಕ್ಷ ಸೇರ್ಪಡೆ ಆಗಿರುವ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಮನಪರಿವರ್ತನೆ ಮಾಡಲು ರೌಡಿಗಳ ಸೇರ್ಪಡೆ: ಸಾರ್ವಜನಿಕರು ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಬಾರದು. ಕುಮಾರಸ್ವಾಮಿ ಅವರು ಯುವಚೈತನ್ಯದಲ್ಲಿ ಎಲ್ಲರೂ ಬದುಕು ಕಟ್ಟಿಕೊಳ್ಳಬೇಕು ಅಂತಾ ಇದೆ. ಮದ್ದೂರಿನಲ್ಲಿ ರೌಡಿಸಂ ಕಡಿಮೆ ಮಾಡಿದ್ದೇನೆ. ರೌಡಿಗಳನ್ನು ಪರಿವರ್ತನೆ ಮಾಡಬೇಕಿರುವುದು ನಮ್ಮ ಕರ್ತವ್ಯ. ಸೆಂಟ್ರಲ್ ಜೈಲ್‌ನಲ್ಲಿ ರೌಡಿಗಳನ್ನು ಪರಿವರ್ತನೆ ಮಾಡಲ್ವಾ.? ಎಷ್ಟೋ ಜನ ಮಂತ್ರಿಗಳು ಕ್ರಿಮಿನಲ್‌ಗಳು ಇದ್ದಾರೆ. ಎಲ್ಲಾ ಪಕ್ಷದಲ್ಲೂ ರೌಡಿಗಳು ಇದ್ದಾರೆ. ಬೇರೆ ಪಕ್ಷದಲ್ಲಿ ರೌಡಿಶೀಟರ್‌ಗಳು ಸ್ಪರ್ಧೆ ಮಾಡುತ್ತೇನೆ ಎಂದಿದ್ದರು. ಆಗ ನಮ್ಮ ನಾಯಕರು ಅದಕ್ಕೆ ಮಾತನಾಡಿದ್ದರು. ನಮ್ಮ ಬಳಿ ಸೇರ್ಪಡೆಯಾಗಿರುವವರು ಅಧಿಕಾರಕ್ಕಾಗಿ ಬಂದಿಲ್ಲ. ಎಲ್ಲರೂ ಬದಲಾಗಿ ಒಳ್ಳೆಯವರಾಗುತ್ತೇವೆ ಎಂದು ಬಂದಿದ್ದಾರೆ. ಮನಪರಿವರ್ತನೆ ಮಾಡಲು ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾಗಿ ಶಾಸಕ ಡಿಸಿ ತಮ್ಮಣ್ಣ ತಿಳಿಸಿದರು.