Asianet Suvarna News Asianet Suvarna News

ಎಐಸಿಸಿ ಅಧ್ಯಕ್ಷ ಸ್ಥಾನ: 'ನಂಬಿಕಸ್ಥ’ ಎಂಬುದೇ ಖರ್ಗೆಗೆ ಪ್ಲಸ್‌ ಪಾಯಿಂಟ್‌..!

5 ದಶಕದಲ್ಲಿ ಒಮ್ಮೆಯೂ ಬಂಡಾಯ ಎದ್ದಿಲ್ಲ, ಅಜಾತ ಶತ್ರು, ದಲಿತ ಕಾರ್ಡ್‌, ಅಪಾರ ಅನುಭವಿ, ಸದನದ ಒಳಗೂ, ಹೋರಾಡುವ ಸಾಮರ್ಥ್ಯದ ಹಿರಿಮೆ, ಹಿಂದಿ ಭಾಷೆಯ ಹಿಡಿತ ಉತ್ತರ ಭಾರತದಲ್ಲಿ ಅನುಕೂಲ

Mallikarjun Kharge Plus Point Trustful in Congress grg
Author
First Published Oct 1, 2022, 12:00 AM IST

ನವದೆಹಲಿ(ಅ.01):  ಹೆಚ್ಚು ಕಡಿಮೆ ಒಂದೂವರೆ ಶತಮಾನಗಳ ಇತಿಹಾಸ ಹೊಂದಿರುವ ಕಾಂಗ್ರೆಸ್‌, ಕಂಡು ಕೇಳರಿಯದ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿರುವ ಹೊತ್ತಿನಲ್ಲೇ ಪಕ್ಷವನ್ನು ಒಂದುಗೂಡಿಸುವ ಮತ್ತು ಅದನ್ನು ಮುನ್ನಡೆಸುವ ಹೊಣೆಯನ್ನು ಗಾಂಧೀ ಕುಟುಂಬ ಇದೀಗ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಹಿಸಲು ಮುಂದಾಗಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಇನ್ನೇನು ಎಐಸಿಸಿ ಅಧ್ಯಕ್ಷರಾಗುವುದು ಖಚಿತ ಎನ್ನುವ ಹೊತ್ತಿನಲ್ಲೇ ನಡೆದ ರಾಜಕೀಯ ಬಿಕ್ಕಟ್ಟು ಅವರನ್ನು ಅಧ್ಯಕ್ಷ ಸ್ಥಾನದ ರೇಸ್‌ನಿಂದ ಹೊರಗೆಸೆದಿದೆ. ಈ ಹಂತದಲ್ಲಿ ಅನುಭವಿ, ನಂಬಿಕಸ್ಥ, ಹೋರಾಟಗಾರ, ಪಕ್ಷದಲ್ಲಿನ ಎಲ್ಲಾ ಬಣಗಳನ್ನೂ ಒಂದುಗೂಡಿಸುವ ಶಕ್ತಿಗಾಗಿ ಕಾಂಗ್ರೆಸ್‌ ಹೈಕಮಾಂಡ್‌ ಹುಡುಕಾಡಿದಾಗ ಕಂಡ ಮೊದಲ ಹೆಸರೇ ಮಲ್ಲಿಕಾರ್ಜುನ ಖರ್ಗೆ.

ಸತತವಾಗಿ 9 ಬಾರಿ ಕರ್ನಾಟಕ ವಿಧಾನಸಭೆಗೆ, 2 ಬಾರಿ ಲೋಕಸಭೆಗೆ ಮತ್ತು ಹಾಲಿ ರಾಜ್ಯಸಭೆಗೆ ಆಯ್ಕೆಯಾದ ಖರ್ಗೆ, 50 ವರ್ಷಗಳ ಸುದೀರ್ಘ ರಾಜಕೀಯ ಇತಿಹಾಸ ಹೊಂದಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೊದಲ ಸೋಲು ಅನುಭವಿಸುವವರೆಗೂ ಖರ್ಗೆ ಅವರನ್ನು ಸೋಲರಿಯದ ಸರದಾರ ಎಂದೇ ಬಣ್ಣಿಸಲಾಗುತ್ತಿತ್ತು. ಈ ಅನುಭವವೇ ಅವರನ್ನು ಇದೀಗ ಎಐಸಿಸಿ ಅಧ್ಯಕ್ಷ ಹುದ್ದೆಯ ಹೊಸ್ತಿಲಲ್ಲಿ ನಿಲ್ಲಿಸಿದೆ.

ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಟ್ವಿಸ್ಟ್, ಗಾಂಧಿ ಕುಟುಂಬದ ಅಭ್ಯರ್ಥಿಯಾಗಿ ಖರ್ಗೆ?

ನಂಬಿಕಸ್ಥ:

50 ವರ್ಷ ರಾಜಕಾರಣ ಮಾಡಿ ಹಲವು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗುವ ಅವಕಾಶ ಇದ್ದರೂ ಅದು ಒಲಿಯದಾಗ ಬಂಡಾಯ ಎದ್ದವರಲ್ಲ ಖರ್ಗೆ. ಹೈಕಮಾಂಡ್‌ ವಿರುದ್ಧ ಎದುರಾಡಿದವರಲ್ಲ. ರಾಜ್ಯ ರಾಜಕೀಯದ ಬಳಿಕ ಕೇಂದ್ರದಲ್ಲಿ ಅವರ ಅಗತ್ಯ ಕಾಣಿಸಿಕೊಂಡು ಅಲ್ಲಿಗೆ ಕರೆಸಿಕೊಂಡಾಗಲೂ ಗಾಂಧಿ ಕುಟುಂಬಕ್ಕೆ ಧ್ವನಿಯಾಗಿ ನಿಂತಿದ್ದರು. ಸದನದ ಒಳಗೂ, ಹೊರಗೂ ಪಕ್ಷ ಮತ್ತು ಗಾಂಧೀ ಕುಟುಂಬದ ಪರವಾಗಿ ಸದಾ ಕೈಎತ್ತಿ ನಿಂತವರು. ಇದು ಅವರ ಕಡೆಗೆ ಗಾಂಧೀ ಕುಟುಂಬ ವಿಶ್ವಾಸ ಇಡಲು ದೊಡ್ಡ ಕಾರಣ.

ಹೋರಾಟಗಾರ:

80 ವರ್ಷದ ಖರ್ಗೆ ತಮ್ಮ ಗಡಸು ಧ್ವನಿಯಿಂದಲೇ ದಿಲ್ಲಿಯಲ್ಲಿ ಪರಿಚಿತರು. ಈ ವಯಸ್ಸಿನಲ್ಲೂ ಅವರ ಹೋರಾಟದ ಮನೋಭಾವ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ರೀತಿಗೆ ಸ್ವಪಕ್ಷೀಯರು ಮಾತ್ರವಲ್ಲದೇ, ಆಡಳಿತ ಪಕ್ಷದಿಂದಲೂ ಸೈ ಅನ್ನಿಸಿಕೊಂಡವರು. ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಖರ್ಗೆ ಅವರ ಹೋರಾಟದ ಮನೋಭಾವ ಮೆಚ್ಚಿಕೊಂಡಿದ್ದು ಅವರ ಹಿರಿಮೆಗೆ ಸಾಕ್ಷಿ.

ಅಜಾತ ಶತ್ರು:

ಕಾಂಗ್ರೆಸ್‌ ಇದೀಗ, ಬಿಜೆಪಿಗಿಂತ ಮೊದಲು ತನ್ನ ಪಕ್ಷದೊಳಗೆ ಹೋರಾಡಬೇಕಾದ ಪರಿಸ್ಥಿತಿ ಇದೆ. ಆಂತರಿಕ ಭಿನ್ನಮತ ಅದನ್ನು ಬಹುವಾಗಿ ಕಾಡುತ್ತಿದೆ. ಈ ಹೊತ್ತಿನಲ್ಲಿ ಗಾಂಧೀ ಕುಟುಂಬದ ಜೊತೆಗೆ ಬಂಡಾಯದ ಧ್ವನಿ ಎತ್ತಿದ್ದ ಜಿ23 ಸೇರಿದಂತೆ ಎಲ್ಲರಿಂದಲೂ ಗೌರವ ಹೊಂದಿರುವ ನಾಯಕ ಖರ್ಗೆ. ಪ್ರಧಾನಿ ನರೇಂದ್ರ ಮೋದಿ ಕೂಡ ಒಮ್ಮೆ ಲೋಕಸಭೆಯಲ್ಲಿ ಖರ್ಗೆ ಅವರ ಕಾರ್ಯವೈಖರಿ ಹೊಗಳಿದ್ದರು. ಈ ವಿಷಯವೇ ಅವರನ್ನು ಇತರರಿಗಿಂತ ವಿಶೇಷವಾಗಿಸಿದೆ. ಈ ಅಂಶವೇ ಮುಂದಿನ ದಿನಗಳಲ್ಲಿ ಅವರು ಪಕ್ಷವನ್ನು ಒಗ್ಗೂಡಿಸಲು ನೆರವಾಗಬಹುದು ಎಂಬುದು ಪಕ್ಷದ ಹೈಕಮಾಂಡ್‌ನ ನಂಬಿಕೆ. ಜೊತೆಗೆ ಖರ್ಗೆ ಪಕ್ಷಾತೀತವಾಗಿ ಎಲ್ಲಾ ಹಿರಿ-ಕಿರಿಯ ನಾಯಕರ ಬೆಂಬಲ ಹೊಂದಿದ್ದಾರೆ. ಇದು ಮುಂದಿನ ಲೋಕಸಭಾ ಚುನಾವಣೆ ಬಳಿಕ ನೆರವಾಗಬಹುದು ಎಂಬ ಲೆಕ್ಕಾಚಾರದಲ್ಲೂ ಕಾಂಗ್ರೆಸ್‌ ಹೈಕಮಾಂಡ್‌ ಇದೆ.

ದಲಿತ ವರ್ಗ

ದಲಿತ ನಾಯಕ ಎಂಬ ಲಾಭ ಕೂಡಾ ಖರ್ಗೆ ಅವರ ಆಯ್ಕೆಯಲ್ಲಿದೆ. ಚುನಾವಣೆಯಲ್ಲಿ ಎಸ್‌ಸಿ, ಎಸ್ಟಿ, ಒಬಿಸಿ ಮತಗಳ ಪಾತ್ರ ಪ್ರಮುಖವಾದುದು. ಹೀಗಾಗಿ ಖರ್ಗೆ ಆಯ್ಕೆ ಕಾಂಗ್ರೆಸ್‌ ಪಾಲಿಗೆ ಮತ್ತಷ್ಟು ಬೋನಸ್‌.

ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ ಉತ್ಸುಕ?

ಭಾಷೆಯ ಲಾಭ:

ಉತ್ತರದ ನಾಯಕರು ದಕ್ಷಿಣದಲ್ಲಿ ಸಲ್ಲುವುದು, ದಕ್ಷಿಣದ ನಾಯಕರು ಉತ್ತರದಲ್ಲಿ ಸಲ್ಲುವುದು ಅಷ್ಟುಸುಲಭವಲ್ಲ. ಆದರೆ ದಕ್ಷಿಣದ ಭಾರತ ಖರ್ಗೆಗೆ ಹಿಂದಿಯ ಮೇಲೆ ಉತ್ತಮ ಹಿಡಿತವಿದೆ. ಇದು ಉತ್ತರ ಭಾರತದಲ್ಲೂ ಇವರು ತಮ್ಮ ಧ್ವನಿ ಒಂದು ಸ್ಥಳೀಯರಿಗೆ ಒಪ್ಪಿಕೊಳ್ಳಲು ನೆರವಾಗಲಿದೆ.

ಕರ್ನಾಟಕ ಗಮನ:

ಮುಂದಿನ ವರ್ಷ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ ಏಕಾಂಗಿಯಾಗಿ ಅಧಿಕಾರ ಹೊಂದಿರುವ ಅತಿದೊಡ್ಡ ರಾಜ್ಯವೆಂದರೆ ಹಾಲಿ ಕರ್ನಾಟಕ ಮಾತ್ರ. ಚುನಾವಣೆಯಲ್ಲಿ ಹೊಸ್ತಿಲಲ್ಲಿ ಖರ್ಗೆ ಆಯ್ಕೆ, ಫಲಿತಾಂಶದ ಮೇಲೂ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರವಿದೆ.
 

Follow Us:
Download App:
  • android
  • ios