
ಬೆಳಗಾವಿ (ಜೂ.27): ದೇಶದಲ್ಲಿ ತರ್ತು ಪರಿಸ್ಥಿತಿ ಹೇರಿಕೆಗೆ ಇಂದಿಗೆ ಐದು ದಶಕವಾಗಿದೆ. ಅನ್ಯಾಯ ಮಾಡಿದವರು ಮರೆಯಬಹುದು. ಆದರೆ, ಅದನ್ನು ಅನುಭವಿದವರು ಇಂದಿಗೂ ಮರೆತಿಲ್ಲ. ಕಾಂಗ್ರೆಸ್ ಮಾಡಿದ ತಪ್ಪಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಲಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಒತ್ತಾಯಿಸಿದರು. ನಗರದ ಮಹಾವೀರ ಭವನದಲ್ಲಿ ಇಂದಿರಾ ಕಾಂಗ್ರೆಸ್‌ನ ತುರ್ತು ಪರಿಸ್ಥಿತಿ ಹೇರಿಕೆ 50 ವರ್ಷ ಪೂರ್ಣಗೊಂಡ ಹಿನ್ನೆಲೆ ಬಿಜೆಪಿಯ ವತಿಯಿಂದ ತುರ್ತು ಪರಿಸ್ಥಿತಿ ಮತ್ತು ಸಂವಿಧಾನಕ್ಕೆ ಮಾಡಿದ ಅಪಚಾರ ಸಂವಾದ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಿಜೆಪಿ ನಾಯಕರು ಬಿಡಿ ಅವರ ಮನೆಯ ನಾಯಿಯಾದರೂ ಹೋರಾಡಿತ್ತೇ ಎಂದು ಪ್ರತಿಬಾರಿ ಟೀಕಿಸುತ್ತಾರೆ. ಆದರೆ, ದೇಶದಲ್ಲಿ ಸರ್ವಾಧಿಕಾರಿ ಧೋರಣೆ ತಳೆದು, ತುರ್ತು ಪರಿಸ್ಥಿತಿ ಹೇರಿದಾಗ ಅದರ ವಿರುದ್ಧ ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಸಿ ಜೈಲಿನಲ್ಲಿ ಒದೆ ತಿಂದಿದ್ದು ಬಿಜೆಪಿ ಕಾರ್ಯಕರ್ತರು. ಆ ಸಮಯದಲ್ಲಿ ಕಾಂಗ್ರೆಸ್ಸಿಗರ ಮನೆಯ ಬೆಕ್ಕಾದರೂ ಕೂಗಿತ್ತೆ ಎಂದು ವಾಗ್ದಾಳಿ ನಡೆಸಿದರು.
ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ದೇಶ ಕಂಡ ಅತ್ಯಂತ ಕೆಟ್ಟ ಕಾಲಘಟ್ಟವೆಂದರೇ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಹೇರಿದ ತುರ್ತು ಪರಿಸ್ಥಿತಿ. ಸಂವಿಧಾನದ ಆಶಯವನ್ನು ಗಾಳಿಗೆ ತೂರಿ ಕೇವಲ ಅಧಿಕಾರವನ್ನು ಕಾಯ್ದುಕೊಳ್ಳಲು ತುರ್ತು ಪರಿಸ್ಥಿತಿ ಹೇರಿ ಕಾಂಗ್ರೆಸ್ ದೇಶದ ಜನತೆಗೆ ಸಂವಿಧಾನಕ್ಕೆ ಮತ್ತು ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದೆ. ಸಂವಿಧಾನ ಬದಲಿಸುವ ಹೇಳಿಕೆ ಬಿಜೆಪಿಗರು ನೀಡಿದ್ದಾರೆ ಎಂದು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುವ ಕಾಂಗ್ರೆಸ್, ಇಂದಿರಾಗಾಂಧಿ ಲೋಕಸಭೆಯಲ್ಲೇ ಸಂವಿಧಾನ ಬದಲಾವಣೆಯ ಪ್ರತಿಪಾದನೆ ಮಾಡಿದ್ದನ್ನು ಒಮ್ಮೆ ನೆನಪಿಸಿಕೊಳ್ಳಲಿ. ಸಂವಿಧಾನದಲ್ಲಿ 106 ತಿದ್ದುಪಡಿಗಳಾಗಿದ್ದು ಅದರಲ್ಲಿ 75 ತಿದ್ದುಪಡಿಗಳನ್ನು ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಕಿಡಿಕಾರಿದರು.
ಅಧಿಕಾರಕ್ಕಾಗಿ ಇಂದಿರಾಗಾಂಧಿ ಸರ್ವಾಧಿಕಾರಿ ನಿರ್ಧಾರ: ಎನ್.ರವಿಕುಮಾರ್
ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಇಂದಿರಾ ಕಾಂಗ್ರೆಸ್ ದೇಶದ ಜನರ ಬಗ್ಗೆ ಮುಂದಾಲೋಚಿಸದೇ ಕೇವಲ ಸ್ವಾರ್ಥ ರಾಜಕಾರಣಕ್ಕಾಗಿ ಮತ್ತು ತನ್ನ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ತುರ್ತು ಪರಿಸ್ಥಿತಿ ಜಾರಿಗೊಳಿಸಿತ್ತು. ವಿರೋಧ ಪಕ್ಷದವರನ್ನು ಜೈಲಿಗಟ್ಟಿ, ಪತ್ರಕರ್ತ ಸ್ವಾತಂತ್ರ್ಯ ಹರಣಗೊಳಿಸಿ, ನ್ಯಾಯ ವ್ಯವಸ್ಥೆಗೂ ಮಾರಕವಾಗಿತ್ತು. ಓಟ ಬ್ಯಾಂಕ್ ರಾಜಕಾರಣ ಮಾಡುವ ಕಾಂಗ್ರೆಸ್ಸಿಗರು ಸಂವಿಧಾನಕ್ಕೆ ದ್ರೋಹ ಬಗೆದಿದ್ದಾರೆ ಎಂದು ದೂರಿದರು. ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ಪದಾಧಿಕಾರಿಗಳು, ವಕೀಲರು, ವಿದ್ಯಾರ್ಥಿಗಳು ಮತ್ತಿತ್ತರರು ಭಾಗಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.