Latest Videos

ಅಧಿಕಾರಕ್ಕಾಗಿ ಇಂದಿರಾಗಾಂಧಿ ಸರ್ವಾಧಿಕಾರಿ ನಿರ್ಧಾರ: ಎನ್.ರವಿಕುಮಾರ್‌

By Kannadaprabha NewsFirst Published Jun 27, 2024, 10:48 PM IST
Highlights

ಸರ್ವಾಧಿಕಾರಿ ಧೋರಣೆಯಿಂದ ಜನರ ವೈಯಕ್ತಿಕ ಸ್ವಾತಂತ್ರ್ಯ ಹರಣ ಮಾಡಿ ಸಂವಿಧಾನದ ಆಶಯಗಳನ್ನು ದುರ್ಬಲಗೊಳಿಸಿ, ದೇಶವನ್ನು ಬಲಿಕೊಟ್ಟ ಅಪಕೀರ್ತಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಹೇಳಿದರು. 

ತುಮಕೂರು (ಜೂ.27): ಸರ್ವಾಧಿಕಾರಿ ಧೋರಣೆಯಿಂದ ಜನರ ವೈಯಕ್ತಿಕ ಸ್ವಾತಂತ್ರ್ಯ ಹರಣ ಮಾಡಿ ಸಂವಿಧಾನದ ಆಶಯಗಳನ್ನು ದುರ್ಬಲಗೊಳಿಸಿ, ದೇಶವನ್ನು ಬಲಿಕೊಟ್ಟ ಅಪಕೀರ್ತಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಹೇಳಿದರು. ನಗರದ ಕನ್ನಡ ಭವನದಲ್ಲಿ ‘ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು’ ವೇದಿಕೆಯಿಂದ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ಮಾಡಿದ ಅಪಚಾರ’ ಎಂಬ ವಿಷಯ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ತಮ್ಮ ಅಧಿಕಾರದ ಅನುಕೂಲದ ಅಗತ್ಯ ಪರಿಸ್ಥಿತಿಯಲ್ಲಿ ಸಂವಿಧಾನ ತಿದ್ದುಪಡಿ ಮಾಡಿಕೊಂಡು ಸಂವಿಧಾನದ ಆಶಯಗಳಿಗೆ ಇಂದಿರಾಗಾಂಧಿ ಅಪಚಾರ ಮಾಡಿದರು. 

ತುರ್ತು ಪರಿಸ್ಥಿತಿಯಲ್ಲಿ ದೇಶದ ಜನ ಅನುಭವಿಸಿದ ಯಾತನೆ ಬಗ್ಗೆ ಇಂದಿನ ತಲೆಮಾರಿನವರಿಗೆ ತಿಳಿಸಿಕೊಡಬೇಕಾದ ಅಗತ್ಯವಿದೆ ಎಂದು ಹೇಳಿದರು. ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪ ಬಂದಾಗ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದರು. ಈ ವೇಳೆ 1.1 ಲಕ್ಷ ಹೋರಾಟಗಾರರನ್ನು ಜೈಲಿಗೆ ಹಾಕಿಸಿದರು. ಆಗ ಇಡೀ ದೇಶದಲ್ಲಿ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂದಿರಾಗಾಂಧಿ ಬಗ್ಗೆ ಮಾತನಾಡಲು ಜನ ಹೆದರುವಂತಾಗಿತ್ತು. ಮಾತನಾಡಿದರೆ ಸಾಕು ಅವರನ್ನು ಬಂಧಿಸುತ್ತಿದ್ದರು. ಇಂತಹ ಕರಾಳ ಪರಿಸ್ಥಿತಿಯನ್ನು ದೇಶದ ಜನ ಅನುಭವಿಸಿದರು. ಮಾಧ್ಯಮಗಳ ಸ್ವಾತಂತ್ರ್ಯವನ್ನೂ ಹರಣ ಮಾಡಲಾಗಿತ್ತು ಎಂದರು.

ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್‌ನವರು ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನ ಆಶಯಗಳನ್ನು ಹರಣ ಮಾಡಿದ್ದ ಬಗ್ಗೆ ಕ್ಷಮೆ ಕೇಳಬೇಕು. ಡಾ. ಅಂಬೇಡ್ಕರ್ ಅವರ ವಿರೋಧದ ನಡುವೆಯೂ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸಂವಿಧಾನ ತಿದ್ದುಪಡಿ ಮಾಡಿ ಸರ್ವಾಧಿಕಾರಿ ಧೋರಣೆ ಅನುಸರಿಸಿತ್ತು ಎಂದು ಹೇಳಿದರು. ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವಶ್ಥನಾರಾಯಣ ಮಾತನಾಡಿ, ಬೇರೆ ದೇಶಗಳೊಂದಿಗೆ ಯುದ್ಧ ನಡೆದ ಸಂದರ್ಭದಲ್ಲಿ, ದೇಶದಲ್ಲಿ ತೀವ್ರ ಬರ ಬಂದಾಗ, ಮಿಲಿಟರಿಯವರೇ ದಂಗೆ ಎದ್ದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಬಹುದಾದ ಪರಿಸ್ಥಿತಿ ಎದುರಾಗಬಹುದು. ಆದರೆ ಇದಾವುದೂ ಅಲ್ಲದ, ಇಂದಿರಾಗಾಂಧಿಯವರು ತಮ್ಮ ಅಧಿಕಾರ ಉಳಿಸಿಕೊಳ್ಳಲು ತಮ್ಮ ವಿರುದ್ಧ ಯಾರೂ ಧ್ವನಿ ಎತ್ತಬಾರದು ಎನ್ನುವ ಕಾರಣಕ್ಕೆ ತುರ್ತು ಪರಿಸ್ಥಿತಿ ಹೇರಿ, ಹೋರಾಟಗಾರರನ್ನು ಜೈಲಿಗೆ ಹಾಕಿಸಿದ್ದು, ಈ ದೇಶದ ಇತಿಹಾಸದಲ್ಲಿ ಕರಾಳ ಛಾಯೆ. 

ಸಿ.ಪಿ.ಯೋಗೇಶ್ವರ್‌ಗೆ ದೇವರು ಒಳ್ಳೆಯದು ಮಾಡಲಿ: ಡಿ.ಕೆ.ಶಿವಕುಮಾರ್ ವ್ಯಂಗ್ಯ

ಇಂತಹ ಕರಾಳ ಪರಿಸ್ಥಿತಿಯ ಬಗ್ಗೆ ಇಂದಿನವರು ತಿಳಿಯಬೇಕು ಎಂದು ಹೇಳಿದರು. ತುರ್ತು ಪರಿಸ್ಥಿತಿ ಬಳಿಕ ನಡೆದ ಚುನಾವಣೆಯಲ್ಲಿ ಇಂದಿರಾಗಾಂಧಿ ಅವರನ್ನೇ ದೇಶದ ಜನ ಸೋಲಿಸಿದರು. ಜನತಾ ಪರಿವಾರ ಆಡಳಿತಕ್ಕೆ ಬಂದಿತು. ಇದು ನಿಜಕ್ಕೂ ಪ್ರಜಾಪ್ರಭುತ್ವದ ಗೆಲುವು ಆಯಿತು. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಕಾಂಗ್ರೆಸ್‌ನವರು ಸುಖಾಸುಮ್ಮನೇ ಆರೋಪ ಮಾಡುತ್ತಾರೆ. ಸಂವಿಧಾನದ ಬಗ್ಗೆ ಕಾಂಗ್ರೆಸ್‌ನವರಿಗೆ ಬದ್ಧತೆ ಇಲ್ಲ ಎಂದರು. ಸರ್ಕಾರಿ ಕೈಗಾರಿಕಾ ಸಂಸ್ಥೆಯ ನಿವೃತ್ತ ಪ್ರಾಚಾರ್ಯ ವಿ.ಟಿ.ತಿಪ್ಪೇಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ರಾಜ್ಯ ಬಿಜೆಪಿ ವಕ್ತಾರ ವೆಂಕಟೇಶ್ ದೊಡ್ಡೇರಿ ಭಾಗವಹಿಸಿದ್ದರು.

click me!