ಅಗ್ನಿಪಥ್ ಕೈಬಿಡಲು ಆಗ್ರಹಿಸಿ ನಾಳೆ ಜಂತರ್ ಮಂತರ್ ಮುಂದೆ ಕಾಂಗ್ರೆಸ್ ಪ್ರತಿಭಟನೆ: ಮಲ್ಲಿಕಾರ್ಜುನ್ ಖರ್ಗೆ

By Govindaraj SFirst Published Jun 18, 2022, 2:19 PM IST
Highlights

ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆ ಕೂಡಲೇ ವಾಪಾಸ್ ಪಡೆಯಬೇಕೆಂದು ಆಗ್ರಹಿಸಿ ನಾಳೆ ದೆಹಲಿಯ ಜಂತರ ಮಂತರ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. 

ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಲಬುರಗಿ

ಕಲಬುರಗಿ (ಜೂ.18): ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆ ಕೂಡಲೇ ವಾಪಾಸ್ ಪಡೆಯಬೇಕೆಂದು ಆಗ್ರಹಿಸಿ ನಾಳೆ ದೆಹಲಿಯ ಜಂತರ ಮಂತರ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. 

ಕಲಬುರ್ಗಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಗ್ನಿಪಥ ಯೋಜನೆ ಇದು ನಮ್ಮ ದೇಶದ ರಕ್ಷಣಾ ಇಲಾಖೆಗೆ ಉಪಯುಕ್ತವಾದ ಯೋಜನೆ ಅಲ್ಲ. ಕಾರಣ ಇಷ್ಟೆ, ನೀವು ಕೆಲವು ಜನರಿಗೆ ಟ್ರೈನಿಂಗ್ ಕೊಟ್ಟು ನಾಲ್ಕು  ವರ್ಷದಲ್ಲಿ ಅವರಿಗೆ ರಿಟೈರ್ಡ್ ಮಾಡಿದ್ರೆ ಯಾವ ಸೈನಿಕ ಕೂಡ ವೆಲ್ ಟ್ರೈನ್ಡ್ ಆಗಿ ಹೋರಬರೋದಿಲ್ಲ. ನಾಲ್ಕು ವರ್ಷದಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟು ಕಾಲ ರಜೆಯಲ್ಲೆ ಹೋಗುತ್ತೆ. ಟ್ರೈನಿಂಗ್ 50% ಕೂಡ ಆಗೋದಿಲ್ಲ. ಹಾಗಾಗಿ ಇದು ವಿಫಲ ಯೋಜನೆಯಾಗಿದ್ದು ಕೃಷಿ ಕಾಯ್ದೆ ಕೈ ಬಿಟ್ಟ ರೀತಿಯಲ್ಲಿಯೇ ಇದನ್ನೂ ಕೈ ಬಿಡಬೇಕು ಎಂದು ಖರ್ಗೆ ಆಗ್ರಹಿಸಿದರು. 

11 ರಾಜ್ಯಗಳಿಗೆ ವಿಸ್ತರಿಸಿದ ಪ್ರತಿಭಟನೆಯ ಜ್ವಾಲೆ, ಅಗ್ನಿಪಥ ವಿರೋಧಿಸಿ ಹಿಂಸಾಚಾರ, 2 ಬಲಿ!

ಹುದ್ದೆ ಭರ್ತಿ ಮಾಡ್ತಿಲ್ಲ: ಕೇಂದ್ರ ಸರ್ಕಾರ ಇತ್ತಿಚಿಗೆ ಯಾವ ಹುದ್ದೆಗಳನ್ನು ಭರ್ತಿ ಮಾಡ್ತಿಲ್ಲ. ರಕ್ಷಣಾ ಇಲಾಖೆಯಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ರಾಜ್ಯದಲ್ಲಿ ಕೇಂದ್ರ ಸರ್ಕಾರದ ಅನೇಕ ಹುದ್ದೆಗಳು ಇವೆ. ಅದಕ್ಕು ಕೂಡ ಕೇಂದ್ರ ಸರ್ಕಾರ ಸಹಾಯ ಮಾಡ್ತಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಕೂಡ ಅದನ್ನ ಭರ್ತಿ ಮಾಡ್ತಿಲ್ಲ. ಕೇಂದ್ರದ 16 ಲಕ್ಷ ಹುದ್ದೆಗಳು ಇನ್ನೂ ಭರ್ತಿಯಾಗಿಲ್ಲ. ಪ್ರಧಾನಿ ಮೋದಿ ಮೊನ್ನೆ ಒಂದೂವರೆ ವರ್ಷದಲ್ಲಿ ಹತ್ತು ಲಕ್ಷ ಹುದ್ದೆ ಭರ್ತಿ ಮಾಡ್ತೆನೆ ಅಂತಾ ಹೇಳಿದ್ದಾರೆ.  16 ಲಕ್ಷ ಖಾಲಿ ಇವೆ , ಆದ್ರೆ ಒಂದು ವರ್ಷದಲ್ಲಿ ಹತ್ತು ಲಕ್ಷ ಭರ್ತಿ ಮಾಡ್ತೆನೆ ಅಂದ್ರೆ ಏನರ್ಥ? ಜನರಿಗೆ ಸುಳ್ಳು ಹೇಳಬೇಡಿ , ಮೋಸ ಮಾಡಬೇಡಿ ಜನ ಸುಮ್ಮನೆ ಇದ್ದು ಯಾವುದೋ ಕಾರಣಕ್ಕೆ ಬೆಂಬಲ ಕೊಟ್ಟಿದ್ದಾರೆ. ಹಾಗಂತ ಜನರಿಗೆ ಹೇಗಬೇಕಾದ್ರು ಶೋಷಣೆ ಮಾಡಬಹುದು ಅಂತಾ ತಿಳಿದುಕೊಳ್ಳಬೇಡಿ. 

ಸೇನೆಯಲ್ಲಿ ದಿನಗೂಲಿ ಥರ ಬೇಡ: ಸೈನ್ಯದಲ್ಲಿ ಭರ್ತಿ ಆಗುವವರು ದೇಶದ ರಕ್ಷಣೆಗಾಗಿ ತಮ್ಮ ಸರ್ವಸ್ವ ತ್ಯಾಗ ಮಾಡಿ ಹೋಗ್ತಾರೆ. ಅಂತಹವರಿಗೂ ನೀವು ಕಾಂಟ್ರ್ಯಾಕ್ಟರ್ ಲೇಬರ್ ತರಹ ಟ್ರೀಟ್ ಮಾಡಿದ್ರೆ ಒಳ್ಳೆಯದಾಗುತ್ತಾ ? ನಾಲ್ಕು ವರ್ಷ ಆದ ಮೇಲೆ ಅವನು ಯಾರ ಮನೆಗೆ ಹೋಗಬೇಕು ? ರಕ್ಷಣಾ ಇಲಾಖೆಯಲ್ಲಿ ಗುತ್ತಿಗೆ ಆಧಾರ , ದಿನಗೂಲಿ ಆಧಾರದ ಮೇಲೆ ತೆಗೆದುಕೊಳ್ಳೊದು ಸರಿಯಲ್ಲ. ರಕ್ಷಣಾ ಇಲಾಖೆಯ ಬಗ್ಗೆ ಅವನಿಗೆ ತಿಳಿದುಕೊಳ್ಳೊಕೆ‌ ಸಾಕಷ್ಟು ವರ್ಷ ಬೇಕು.‌ ನೀವು ನಾಲ್ಕೆ ವರ್ಷಕ್ಕೆ ಮನೆಗೆ ಹೋಗಿ ಅಂದ್ರೆ ಹೇಗಾಗುತ್ತೆ ? ಇದನ್ನ ತುರ್ತಾಗಿ ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು. ಇದನ್ನ ಪ್ರತಿಷ್ಟೆಯಾಗಿ ಸರ್ಕಾರ ತೆಗೆದುಕೊಳ್ಳಬಾರದು. ಇದನ್ನ ದೇಶದ ಜನರು ನಮ್ಮ ಯುವಕರು ಒಪ್ಪೋದಿಲ್ಲ.‌ ಹಾಗಾಗಿ ಇದನ್ನ ತಕ್ಷಣ ವಾಪಸ್ ಪಡೆದುಕೊಳ್ಳಬೇಕು. ಇದರಲ್ಲಿ ರಾಜಕಾರಣ ಮಾಡೋದು ಸರಿ ಅಲ್ಲ. ನಾಳೆ ಕಾಂಗ್ರೆಸ್ ಪಕ್ಷದ ವತಿಯಿಂದ ಇದನ್ನ ವಿರೋಧಿಸಿ ಜಂತರ್ ಮಂತರ್ ನಲ್ಲಿ ಸತ್ಯಾಗ್ರಹ ಮಾಡ್ತೆವೆ ಎಂದರು. 

ಹಿಂಸಾರೂಪಕ್ಕೆ ಸರಕಾರವೇ ಹೊಣೆ: ಇಂತಹ ಯೋಜನೆ ತಂದು ಯುವಕರಿಗೆ ಪ್ರಚೋದನೆ ಮಾಡ್ತಿದ್ದಾರೆ. ಅದರಿಂದ ಇವತ್ತು ಯುವಕರು ಹಿಂಸಾರೂಪಕ್ಕೆ ಟರ್ನ್ ಆಗ್ತಿದಾರೆ. ರೈಲ್ವೆ ಗೆ ಬೆಂಕಿ ಹಚ್ಚೊಕೆ,  ಬಸ್‌ಗೆ ಬೆಂಕಿ ಹಾಕೋಕೆ ಯಾರು ಹೇಳೊದಿಲ್ಲ. ಅದನ್ನ ಯಾರೂ ಒಪ್ಪೊದಿಲ್ಲ.‌ ಇದೂ ಸರಿಯೂ ಅಲ್ಲ. ಆದ್ರೆ ಯುವಕರು ಈ ರೀತಿ ರೊಚ್ಚಿಗೆದ್ದು ಹಿಂಸಾಚಾರ ನಡೆಸುತ್ತಿರುವದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದರು. 

ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ: ಒಬ್ಬರು ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಚುನಾವಣಾ ಆಯೋಗ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿರುವ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮಲ್ಲಿಕಾರ್ಜುನ ಖರ್ಗೆ, ಮೋದಿ ‌ತೆಲೆಯಲ್ಲಿ ಏನಿದೆ ಅಂತಾ ನನಗೆ ಚೆನ್ನಾಗಿ ಗೊತ್ತು. ಅವರೇ ಎರಡೆರೆಡು ಕಡೆ ಸ್ಪರ್ಧೆ ಮಾಡಿದ್ದಾರೆ. ಆದ್ರೆ ಅವರು ರಾಹುಲ್ ಗಾಂಧಿ ಎರಡು ಕಡೆ ಸ್ಪರ್ಧೆ ಮಾಡಿರೋದು ತೆಲೆಯಲ್ಲಿ ಇಟ್ಟುಕೊಂಡು ಇದನ್ನ ಮಾಡೋದಕ್ಕೆ ಮುಂದಾಗಿದ್ದಾರೆ. ಸದನ ಒಪ್ಪಿದ್ರೆ ಮಾಡಲಿ ಎಂದರು. 

ರಾಹುಲ್ ವಿಚಾರಣೆ ಹಿಂದೆ ಷಡ್ಯಂತ್ರ: ಜನರ ಮುಂದೆ ಸೋನಿಯಾಗಾಂಧಿ ರಾಹುಲ್ ಗಾಂಧಿ ಇಮೇಜ್ ಕುಗ್ಗಿಸೋಕೆ ಇಡಿ ವಿಚಾರಣೆ ನಡೆಸಲಾಗ್ತಿದೆ. ನೆಹರು ಅವರು ತೆಗೆದಂತಹ ಪತ್ರಿಕೆ ಇದು. ಈ ಪ್ರಕರಣವನ್ನು 2015 ರಲ್ಲಿ ಬಿಜೆಪಿ ಸರಕಾರವೇ ಕ್ಲೋಸ್ ಮಾಡಿತ್ತು. ಈಗ ಮತ್ತೆ ಓಪ್ ಮಾಡಿರುವುದರ ಹಿಂದೆ‌ ಶಡ್ಯಂತ್ರ್ಯ ಇದೆ ಎಂದರು. ಕಾಂಗ್ರೆಸ್ ಅನ್ನ ಮುಗಿಸಬೇಕು ನಮ್ಮ ದ್ವನಿ ಅಡಗಿಸಬೇಕು ಅಂತಾ ಇದನ್ನ ಮಾಡ್ತಿದ್ದಾರೆ. ಹಾಗಾಗಿ ಇಡಿ ಮುಖಾಂತರ ಟಾರ್ಚರ್ ಕೊಡ್ತಾ ಇದ್ದಾರೆ. 

Agnipath Scheme: CAPF, ಅಸ್ಸಾಂ ರೈಫಲ್ಸ್‌ನಲ್ಲಿ ಅಗ್ನಿವೀರರಿಗೆ 10% ಮೀಸಲಾತಿ: ಗೃಹ ಸಚಿವಾಲಯ!

ಬಿಜೆಪಿಗೆ ಸತ್ಯಾಗ್ರಹ ಅಂದ್ರೆನು ಗೊತ್ತೆ ಇಲ್ಲ: ನಾವು ಭಯದಿಂದ ಪ್ರತಿಭಟನೆ ಮಾಡ್ತಿಲ್ಲ. ಕೇವಲ ರಾಹುಲ್ ಗಾಂಧಿ ಅವರನ್ನ ವಿಚಾರಣೆ ಮಾಡಿದ್ರೂ ಅಂತ ಪ್ರತಿಭಟನೆ ಮಾಡ್ತಿಲ್ಲ. ನೆಹರು ಆರಂಭಿಸಿದ ಸಂಸ್ಥೆಯ ಮೇಲಿನ ಪ್ರಹಾರ ಖಂಡಿಸಿ ಸತ್ಯಾಗ್ರಹ ಮಾಡಿದ್ದೇವೆ. ಇದು ನಮ್ಮ ಪಕ್ಷದ ಆಸ್ತಿ. ಇದನ್ನ ನಾವು ಉಳಿಸಿಕೊಳ್ಳಲಿಲ್ಲ ಅಂದ್ರೆ ನೆಹರು ಯಾವ ಉದ್ದೇಶಕ್ಕಾಗಿ ಪತ್ರಿಕೆ ಕಟ್ಟಿದ್ದರೋ ಅದು ಸೋಲುತ್ತದೆ. ನಮ್ಮ ತತ್ವ ಸಿದ್ದಾಂತಗಳನ್ನ ಉಳಿಸಿಕೊಳ್ಳಲು ನಾವು ಹೋರಾಟ ಮಾಡುತ್ತಿದ್ದೇವೆಯೇ ಹೊರತು ಭಯದಿಂದ ಅಲ್ಲ.

ಬಿಜೆಪಿಯವರಿಗೆ ಸತ್ಯಾಗ್ರಹ ಅಂದ್ರೆ ಚಳುವಳಿ ಅಂದ್ರೆ ಏನು ಅಂತನಾದ್ರೂ ಗೊತ್ತಾ? ಅವರು ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಯಾವತ್ತಾದ್ರೂ ಹೋರಾಟ ಮಾಡಿದಾರಾ? ಜೈಲಿಗೆ ಹೋಗಿದ್ದಾರಾ? ಅಂಥವರು ನಮಗೆ ದೇಶಭಕ್ತಿಯ ಪಾಠ ಹೇಳೋಕೆ ಬರ್ತಿದಾರಲ್ಲ. ಇದು ಸರಿಯಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಬಿಜೆಪಿಗೆ ತಿರುಗೇಟು ನೀಡಿದರು.

click me!