ಲೋಕಸಭಾ ಚುನಾವಣೆ ಯಾವುದೇ ಸಂದರ್ಭದಲ್ಲಿ ಬರಲಿ, ಈ ಬಾರಿ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿ (ನ.28): ಲೋಕಸಭಾ ಚುನಾವಣೆ ಯಾವುದೇ ಸಂದರ್ಭದಲ್ಲಿ ಬರಲಿ, ಈ ಬಾರಿ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ತಯಾರಿದೆ. ರಾಷ್ಟ್ರ ಹಾಗೂ ರಾಜ್ಯದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬರಲಿದೆ ಎಂದರು.
ಮತ್ತೊಂದು ಬಾರಿ ಪ್ರಧಾನಿಯಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡುವುದೇ ನಮ್ಮ ಗುರಿ ಎಂಬ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಉತ್ತರಿಸಿದ ಮೊಯ್ಲಿ, ಜೆಡಿಎಸ್‌ನವರು ಲೋಕಸಭೆಯಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲುತ್ತಾರೆ ಎಂಬುದು ಮುಖ್ಯ. ಪ್ರಧಾನಿ ಮಾಡಲು ಅವರ ಕೊಡುಗೆ ಏನು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಬಿಜೆಪಿಯ ಸಹಾಯ ಇಲ್ಲದೇ ಹೋದರೆ ರಾಜಕೀಯದಲ್ಲಿ ಅಸ್ತಿತ್ವವೇ ಇಲ್ಲ ಎಂಬ ಭಾವನೆ ಅವರಲ್ಲಿದೆ. ಹಾಗಾಗಿ ಇಂತಹ ಮಾತುಗಳು ಅವರಿಂದ ಬರುತ್ತಿವೆ ಎಂದು ಕಿಡಿಕಾರಿದರು.
ಈ ಹಿಂದೆ ಜೆಡಿಎಸ್ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಆಗ ಕಾಂಗ್ರೆಸ್ ಬಲದಿಂದ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು, ದೇವೇಗೌಡರು ಪ್ರಧಾನಿ ಕೂಡಾ ಆಗಿದ್ದರು, ಅವರು ಮಾಡುವುದು ಸ್ವಾರ್ಥಕ್ಕೆ ಹೊರತು, ರಾಜ್ಯ ಹಾಗೂ ದೇಶದ ಹಿತದೃಷ್ಟಿಯಿಂದ ಅಲ್ಲ ಎಂದು ಹರಿಹಾಯ್ದರು.
ಕಾಂಗ್ರೆಸ್‌ಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ: ಮಾಜಿ ಸಚಿವ ಶ್ರೀರಾಮುಲು
ಭ್ರಷ್ಟಾಚಾರದ ರಾಯಭಾರಿ ಸಿದ್ದರಾಮಯ್ಯ ಎಂಬ ಆರ್. ಆಶೋಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈಗಾಗಲೇ ರಾಜ್ಯದ ಜನತೆ ಭ್ರಷ್ಟಾಚಾರ ಮಾಡಿದವರು ಯಾರು ಎಂಬುದಕ್ಕೆ ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದ ಮುಖ್ಯಮಂತ್ರಿ ಯಾರೆಂದರೆ ಯಡಿಯೂರಪ್ಪ ಅವರು ಮಾತ್ರ. ಹೀಗಾಗಿ, ಬಿಜೆಪಿಯವರಿಂದ ಭ್ರಷ್ಟಾಚಾರದ ಪಾಠ ಕೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು. ಇದೇ ವೇಳೆ ತೆಲಂಗಾಣ ವಿಧಾನಸಭೆ ಹಾಗೂ ಕರ್ನಾಟಕದ ಲೋಕಸಭೆ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.