
ಮೈಸೂರು (ಮೇ. 12): ನವೀನ್ ಗೌಡ ಯಾರು ಅನ್ನೋದು ನನಗೆ ಗೊತ್ತಿಲ್ಲ. ನನಗೆ ಆ ಪೆನ್‌ಡ್ರೈವ್ ತಲುಪಿಸಿಯೇ ಇಲ್ಲ ಎಂದು ಶಾಸಕ ಎ.ಮಂಜು ಸ್ಪಷ್ಟಪಡಿಸಿದರು.
'ನನಗೆ ಸಿಕ್ಕ ಪೆನ್ ಡ್ರೈವ್ ಅನ್ನು ಅರಕಲಗೂಡು ಶಾಸಕ ಎ.ಮಂಜು ಅವರಿಗೆ ಕೊಟ್ಟಿದ್ದೇನೆ ಎಂಬ ನವೀನ್ ಗೌಡ ಎಂಬಾತ ಫೇಸ್‌ಬುಕ್ ಪೋಸ್ಟ್ ಹಾಕಿಕೊಂಡಿರುವುದು ಇದೀಗ ಭಾರೀ ಸುದ್ದಿಯಾಗಿದೆ. ಈ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಎ.ಮಂಜು, ನಾನು 21 ರಂದು ಯಾವುದೋ ಮದುವೆಗೆ ಹೋಗಿರುವುದು ಸತ್ಯ. ಮದುವೆಯಲ್ಲಿ ನೂರಾರು ಜನರನ್ನ ಮಾತಾಡಿಸಿದ್ದೇನೆ. ಅದರಲ್ಲಿ ಇವನು ಯಾರು ಎಂಬುದು ಗೊತ್ತಿಲ್ಲ. ನಾನು ಇವತ್ತಿನವರೆಗೆ ಅವನ ಹೆಸರು ಕೇಳಿಲ್ಲ, ಅವನನ್ನು ನೋಡಿಯೇ ಇಲ್ಲ. ಅವನ ಹಿಂದೆ ಯಾರೋ ಪ್ರಬಲರು ಇರುವುದು ಸತ್ಯ, ಆ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೀತಿದೆ: ಸಿಎಂ
ನವೀನ್ ಗೌಡ ವಿರುದ್ಧ ನಾನು ಮಾನನಷ್ಟ ಮೊಕದ್ದೊಮೆ ದಾಖಲಿಸುತ್ತೇನೆ. ನಮ್ಮ ಮತ್ತು ದೇವೇಗೌಡರ ಸಂಬಂಧ ಹಾಳು ಮಾಡಲು ಈ ರೀತಿ ಷಡ್ಯಂತ್ರ ಮಾಡಲಾಗ್ತಿದೆ. ಇಂತಹ ನೀಚ ರಾಜಕಾರಣವನ್ನು ನಾನು ಯಾವತ್ತೂ ಮಾಡಿಲ್ಲ, ಮಾಡುವುದು ಇಲ್ಲ. ಮೊದಲು ನವೀನ್ ಗೌಡ ಎಂಬುವವನ ಬಂಧನವಾಗಲಿ. ಅವನ ಮೂಲಕವೇ ಪೆನ್‌ಡ್ರೈವ್ ಎಲ್ಲ ಇತಿಹಾಸ ತಿಳಿಯುತ್ತದೆ. ಯಾಕೆ ಅವನ ಬಂಧನ ಆಗುತ್ತಿಲ್ಲ. ನಾನು ಈಗಲೂ ಆಗ್ರಹಿಸುತ್ತೇನೆ ಅವನನ್ನು ಮೊದಲು ಬಂಧಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯದ ಕೊನೆಗಾಲದಲ್ಲಿ ನನ್ನ ಕೈಹಿಡಿದವರು ದೇವೇಗೌಡರು. ಅವರ ಕುಟುಂಬಕ್ಕೆ ದ್ರೋಹ ಮಾಡುವ ಕೆಲಸ ನಾನು ಮಾಡೋದಿಲ್ಲ. ಪೆನ್‌ಡ್ರೈವ್ ಪ್ರಕರಣದಿಂದ ದೇವೇಗೌಡರು ಬಹಳ ನೊಂದಿದ್ದಾರೆ. ಅವರನ್ನು ಮೊನ್ನೆ ಭೇಟಿ ಮಾಡಿದಾಗ ಈ ವಿಚಾರದ ಬಗ್ಗೆ ನನಗೆ ಯಾಕೆ ಮೊದಲೇ ಹೇಳಲಿಲ್ಲ ಎಂದು ಕೇಳಿದರು. ಯಾರಿಗೂ ಇಂತಹ ಸ್ಥಿತಿ ನಿರ್ಮಾಣವಾಗಬಾರದು. ನಾನು ಜೈಲಿನಲ್ಲಿ ರೇವಣ್ಣ ಭೇಟಿ ಮಾಡಿ ಸಂತ್ವಾನ ಹೇಳಿದ್ದೇನೆ. ಅವರ ಪ್ರತಿ ಕಷ್ಟ ಕಾಲದಲ್ಲೂ ನಾನು ಇರುತ್ತೇನೆ. ನಾನು ಅವರ ಕುಟುಂಬದ ಜೊತೆಯಲ್ಲಿ ಇದ್ದೇನೆ ಎಂಬ ಕಾರಣಕ್ಕಾಗಿಯೇ ಈಗ ಪ್ರಕರಣದಲ್ಲಿ ನನ್ನ ಹೆಸರು ಸೇರಿಸಲು ಪ್ರಯತ್ನಿಸುತ್ತಿದ್ದಾರೆ. ಪೆನ್‌ಡ್ರೈವ್ ಹಂಚಿಕೆ ಹಿಂದೆ ನವೀನ್ ಗೌಡನ ಮೂಲಕ ಯಾರದ್ದೋ ಕೈವಾಡ ಇದೆ. ಇಷ್ಟೆಲ್ಲ ಆದರೂ ಪೊಲೀಸರು ಅವನನ್ನು ಯಾಕೆ ಬಂಧಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣ ಯಾವುದೇ ಕಾರಣಕ್ಕೂ ಸಿಬಿಐಗೆ ವಹಿಸೊಲ್ಲ: ಸಿಎಂ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪೆನ್‌ಡ್ರೈವ್ ವೈರಲ್ ಮಾಡಿದ ಪ್ರಕರಣದಲ್ಲಿ ಆರೋಪಿ ನವೀನ್‌ಗೌಡ ಫೇಸ್‌ಬುಕ್ ಖಾತೆಯಿಂದ ಸ್ಫೋಟಕ ಪೋಸ್ಟ್ ಮಾಡಿದ್ದಾನೆ. ನನಗೆ ಏ.20 ರಂದು ಸಿಕ್ಕಿದೆ. ಏ.21 ರಂದು ಅರಕಲಗೂಡು ಮಾರುತಿ ಕಲ್ಯಾಣಮಂಟಪದಲ್ಲಿ ಶಾಸಕ ಎ ಮಂಜುಗೆ ನೀಡಿದ್ದೇನೆ. ಕುಮಾರಸ್ವಾಮಿ ಹೇಳಿದ ಹಾಗೆ ವಿಡಿಯೋ ವೈರಲ್ ಹಿಂದೆ ಮಹಾನಾಯಕ ಅರಕಲಗೂಡು ಶಾಸಕರೇ ಇರಬಹುದು ಎಂದು ಪೋಸ್ಟ್ ಮಾಡಿರುವ ನವೀನ್ ಗೌಡ. ಆದರೆ ನವೀನ್ ಗೌಡ ಆರೋಪ ತಳ್ಳಿಹಾಕಿದ ಶಾಸಕ ಎ ಮಂಜು ಅವನನ್ನು ನೋಡಿಯೇ ಇಲ್ಲ, ಯಾವುದೇ ಪೆನ್‌ಡ್ರೈವ್ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.