ರಾಜ್ಯಸಭೆಯಲ್ಲಿ ಅಮಿತಾಭ್ ಬಚ್ಚನ್ ಹೆಸರು ಹೇಳಿ ರಾಜ್ಯಸಭಾ ಸದಸ್ಯೆ, ನಟಿ ಜಯಾ ಬಚ್ಚನ್ ಪೇಚಿಗೆ ಸಿಲುಕಿದ ಘಟನೆ ನಡೆಯಿತು. ಏನಿದು ಘಟನೆ?
ಲೋಕಸಭೆ ಮತ್ತು ರಾಜ್ಯಸಭೆಗಳ ಅಧಿವೇಶನ ನಡೆಯುತ್ತಿದ್ದು, ಪ್ರತಿ ಸಲದಂತೆ ಈ ಬಾರಿಯೂ ಬೇರೆ ಬೇರೆ ವಿಷಯಗಳಿಗೆ ಪ್ರತಿಪಕ್ಷಗಳ ಗದ್ದಲ- ಗಲಾಟೆ ನಡೆದೇ ಇದೆ. ಅವುಗಳ ನಡುವೆಯೇ ರಾಜ್ಯಸಭೆಯಲ್ಲಿ ಹಾಸ್ಯದ ಘಟನೆಯೊಂದು ನಡೆದಿದೆ. ಅಷ್ಟಕ್ಕೂ ರಾಜ್ಯ ಸಭಾಧ್ಯಕ್ಷರಾಗಿರುವ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಹಾಸ್ಯ ಪ್ರವೃತ್ತಿಯವರಾಗಿದ್ದು, ಕಲಾಪಗಳ ನಡುವೆ ಆಗಾಗ್ಗೆ ಚಟಾಕಿಯನ್ನು ಹಾರಿಸುತ್ತಲೇ ಇರುತ್ತಾರೆ. ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಷಣ ಮಾಡುವಾಗಲೂ ಇವರ ಹಾಸ್ಯ ಚಟಾಕಿ ನೋಡಬಹುದು. ಕಲಾಪದಲ್ಲಿ ಗಂಭೀರ ಘಟನೆಗಳು ನಡೆದು ಗಲಾಟೆ ಶುರುವಾದಾಗಲೆಲ್ಲಾ ನಡುನಡುವೆ ಯಾವುದಾದರೂ ಒಂದು ವಿಷಯ ತೆಗೆದು ಹಾಸ್ಯಭರಿತ ಮಾತುಗಳಿಂದ ಸದನವನ್ನು ಶಾಂತಗೊಳಿಸುವುದೂ ಇದೆ.
ಇದೀಗ ಘಟನೆ ನಡೆದದ್ದು ರಾಜ್ಯಸಭಾ ಸದಸ್ಯೆಯೂ ಆಗಿರುವ ಜಯಾ ಬಚ್ಚನ್ ಅವರ ಸಲುವಾಗಿ. ತಮ್ಮ ಮಾತನಾಡುವ ಸರದಿ ಬಂದಾಗ, ಪ್ರತಿಯೊಬ್ಬರೂ ತಮ್ಮ ಹೆಸರು ಉಲ್ಲೇಖಿಸಿ ಮಾತನ್ನು ಆರಂಭಿಸಬೇಕು. ಅದರಂತೆಯೇ ಜಯಾ ಅವರು ಮಾತು ಆರಂಭಿಸುವ ಪೂರ್ವದಲ್ಲಿ ನನ್ನ ಹೆಸರು ಜಯಾ ಅಮಿತಾಭ್ ಬಚ್ಚನ್ ಎಂದರು. ಇಷ್ಟು ಹೇಳುತ್ತಿದ್ದಂತೆಯೇ ಇಡೀ ಸದನ ನಗೆಗಡಲಿನಲ್ಲಿ ತೇಲಿತು. ರಾಜ್ಯಸಭಾಧ್ಯಕ್ಷ ಜಗದೀಪ್ ಧನ್ಕರ್ ಅವರಂತೂ ಬಿದ್ದೂ ಬಿದ್ದೂ ನಕ್ಕರು. ಅವರಿಗೆ ನಗು ತಡೆದುಕೊಳ್ಳಲು ಆಗಲೇ ಇಲ್ಲ. ಅಷ್ಟಕ್ಕೂ ಈ ಹೆಸರಿನಲ್ಲಿ ಏನಿದೆ? ಜಯಾ ಅವರು ಹೀಗೆ ಹೇಳಿದಾಗ ಎಲ್ಲರೂ ನಕ್ಕಿದ್ದು ಏಕೆ ಎನ್ನುವುದಕ್ಕೆ ಕಾರಣವೂ ಇದೆ. ಹೀಗೆ ತಮ್ಮ ಹೆಸರನ್ನು ಜಯಾ ಅಮಿತಾಭ್ ಬಚ್ಚನ್ ಎಂದು ಹೇಳುವ ಮೂಲಕ ಜಯಾ ಅವರು ಪೇಚಿಗೆ ಸಿಲುಕಿರುವುದಕ್ಕೂ ಈ ಘಟನೆಯೇ ಕಾರಣ.
ಅಷ್ಟಕ್ಕೂ ಆಗಿದ್ದೇನೆಂದರೆ, ಕೆಲ ದಿನಗಳ ಹಿಂದೆ ರಾಜ್ಯಸಭಾ ಸದಸ್ಯರು ತಮ್ಮ ಮಾತನ್ನು ಆಡಲು ಅವರ ಹೆಸರನ್ನು ಕರೆಯುವ ಸಂದರ್ಭದಲ್ಲಿ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ ನಾರಾಯಣ ಸಿಂಗ್ ಈಗ ಜಯಾ ಅಮಿತಾಭ್ ಬಚ್ಚನ್ ಸರದಿ ಎಂದರು. ಇಷ್ಟು ಹೇಳುತ್ತಿದ್ದಂತೆಯೇ ಜಯಾ ಅವರಿಗೆ ವಿಪರೀತ ಕೋಪ ಬಂದುಬಿಟ್ಟಿತು. ನನ್ನನ್ನು ಜಯಾ ಬಚ್ಚನ್ ಎಂದು ಕರೆಯಿರಿ ಸಾಕು, ಗಂಡನ ಹೆಸರನ್ನು ಪೂರ್ತಿ ಹೇಳಿ ಕರೆಯುವುದು ಏಕೆ? ಮಹಿಳೆಯರಿಗೆ ಸ್ವಂತ ಐಡೆಂಟಿಟಿ ಇಲ್ಲವೇ ಎಂದು ಗರಂ ಆಗಿಯೇ ಪ್ರಶ್ನಿಸಿದ್ದರು. ಅದಕ್ಕೆ ಹರಿವಂಶ ಅವರು, ದಾಖಲೆಯಲ್ಲಿ ಹೇಗೆ ಹೆಸರು ಇರುತ್ತದೆಯೋ ಹಾಗೆಯೇ ಕರೆಯುವುದು ಎಂದಿದ್ದರು. ಆ ಕ್ಷಣದಲ್ಲಿ ಸದನದಲ್ಲಿ ಸ್ವಲ್ಪ ಬಿಸಿ ವಾತಾವರಣ ಉಂಟಾಗಿತ್ತು.
ಆದರೆ ಇದೀಗ ಜಯಾ ಅವರೇ ಖುದ್ದಾಗಿ ಹಾಗೆ ಹೇಳಿದ್ದರಿಂದ ಎಲ್ಲರೂ ಜೋರಾಗಿ ನಕ್ಕರು. ಕಾಂಗ್ರೆಸ್‌ನ ಜೈರಾಮ್ ರಮೇಶ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಘವ್ ಚಡ್ಡಾ ಸೇರಿದಂತೆ ಹಲವಾರು ಸಂಸದರು ಜೋರಾಗಿ ನಕ್ಕರು. ಆಗ ಜಗದೀಪ್ ಧನ್ಕರ್ ಅವರು ಜೈರಾಮ್ ರಮೇಶ್ ಹೆಸರು ಉಲ್ಲೇಖಿಸಿದರು. ಕೂಡಲೇ ಜಯಾ ಬಚ್ಚನ್ ಅವರು, ನೀವು ಇವತ್ತು ಊಟ ಮಾಡಿಲ್ಲ ಅನಿಸತ್ತೆ. ಹಾಗಾಗಿಯೇ ಜೈರಾಮ್ ರಮೇಶ್ ಹೆಸರು ಮತ್ತೆ ಮತ್ತೆ ಪ್ರಸ್ತಾಪಿಸುತ್ತಿದ್ದೀರಿ. ಅವರ ಹೆಸರು ಹೇಳದಿದ್ದರೆ ಆಹಾರ ಜೀರ್ಣವಾಗುವುದಿಲ್ಲ ಎಂದರು. ಇದಕ್ಕೆ ಜಗದೀಪ್ ಕೂಡ ಅಷ್ಟೇ ತಮಾಷೆಯ ಉತ್ತರ ನೀಡಿದರು. ನಾನು ವಿರಾಮದ ಸಮಯದಲ್ಲಿ ಊಟ ಮಾಡಿರಲಿಲ್ಲ. ಜೈರಾಮ್ ಜೊತೆ ಊಟ ಮಾಡಿದ್ದೆ ಎಂದು ಹೇಳಿ ನಕ್ಕರು. ಕೊನೆಯಲ್ಲಿ ನಾನು ನಿಮ್ಮ ಮತ್ತು ಅಮಿತಾಭ್ ಅವರ ದೊಡ್ಡ ಅಭಿಮಾನಿ. ಆದರೆ ಇದೇ ಮೊದಲ ಬಾರಿಗೆ ನಿಮ್ಮ ಪೂರ್ತಿ ಹೆಸರನ್ನು ಕೇಳುವ ಅವಕಾಶ ಸಿಕ್ಕಿತು ಎಂದರು. ಅದಕ್ಕೆ ಜಯಾ ಅವರು, ‘ಏನದು ಫಸ್ಟ್ ಟೈಮ್’ ಎಂದು ಕೇಳಿದಾಗ, ‘ನಿಮ್ಮಂತಹ ಜೋಡಿಯನ್ನು ನಾನು ಹಿಂದೆಂದೂ ಕಂಡಿಲ್ಲ’ ಎಂದು ಜಗದೀಪ್ ಧನ್ಕರ್ ಹೇಳಿದರು. ‘ಅದಕ್ಕೆ ನನ್ನ ಹೆಸರು ಹೀಗಾಯ್ತು’ ಎಂದು ಜಯಾ ಬಚ್ಚನ್ ನಗುತ್ತಾ ಕುಳಿತುಕೊಂಡರು. ಅಲ್ಲಿಗೆ ಪರಿಸ್ಥಿತಿ ನಗೆಗಡಲಿನಿಂದ ಶಾಂತಸ್ಥಿತಿಯತ್ತ ತಿರುಗಿತು.
ವಯಸ್ಸಾದರೇನು, ಮರೆಯಲಾದೀತೆ ಪ್ರಿಯಕರನ? ಜಯಾ ಎದುರೇ ಕುಣಿದಾಡಿದ ರೇಖಾ! ವಿಡಿಯೋ ವೈರಲ್