ಶಿವಸೇನೆ ಬಳಿಕ ಎನ್‌ಸಿಪಿಯೂ ಹೋಳು: ಮಹಾರಾಷ್ಟ್ರದಲ್ಲಿ ಮತ್ತೆ ರಾಜಕೀಯ ಕ್ಷಿಪ್ರಕ್ರಾಂತಿ; ವಿಪಕ್ಷಗಳ ಮೈತ್ರಿಕೂಟಕ್ಕೆ ಹಿನ್ನಡೆ

By Kannadaprabha News  |  First Published Jul 3, 2023, 7:57 AM IST

ಅಜಿತ್‌ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಶರದ್‌ ಪವಾರ್‌ ಘೋಷಿಸಿದ್ದು, ಜುಲೈ 5ರಂದು ಸಭೆ ನಡೆಸುವುದಾಗಿ ಹೇಳಿದ್ದಾರೆ. ಆದರೆ, ‘ನಾವು ಪಕ್ಷ ಬಿಟ್ಟಿಲ್ಲ. ಸರ್ಕಾರವನ್ನು ಇಡೀ ಎನ್‌ಸಿಪಿ ಬೆಂಬಲಿಸುತ್ತಿದೆ’ ಎಂದು ಅಜಿತ್‌ ಹೇಳಿಕೊಂಡಿದ್ದಾರೆ.


ಮುಂಬೈ (ಜುಲೈ 3, 2023): ಕಳೆದ 4 ವರ್ಷಗಳಿಂದ ಮಹತ್ವದ ರಾಜಕೀಯ ಕ್ಷಿಪ್ರಕ್ರಾಂತಿಗಳಿಗೆ ಸಾಕ್ಷಿಯಾಗಿರುವ ಮಹಾರಾಷ್ಟ್ರದ ರಾಜಕೀಯ ಭಾನುವಾರ ಮತ್ತೊಮ್ಮೆ ದಿಢೀರ್‌ ತಿರುವು ಪಡೆದುಕೊಂಡಿದೆ. ಹಲವು ಸಮಯದಿಂದ ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌, ಭಾನುವಾರ ತಮ್ಮ 8 ಬೆಂಬಲಿಗ ಶಾಸಕರ ಜತೆಗೂಡಿ ಶಿಂಧೆ ಶಿವಸೇನೆ-ಬಿಜೆಪಿ ನೇತೃತ್ವದ ಸಂಪುಟ ಸೇರ್ಪಡೆಯಾಗಿದ್ದಾರೆ.

ಈ ವಿದ್ಯಮಾನ ಎನ್‌ಸಿಪಿ ನೇತಾರ ಶರದ್‌ ಪವಾರ್‌ಗೆ ಭಾರಿ ಆಘಾತ ತಂದಿದ್ದು, 24 ವರ್ಷಗಳಿಂದ ತಾವೇ ಕಟ್ಟಿ ಬೆಳೆಸಿದ ಪಕ್ಷದಿಂದ ಹೊರಬೀಳುವ ಭೀತಿ ಸೃಷ್ಟಿ ಆಗಿದೆ. ಆದರೆ ಇದು ರಾಜ್ಯದಲ್ಲಿ ಬಿಜೆಪಿ ಬಲ ಹೆಚ್ಚಿಸಲಿದ್ದರೆ, ವಿಪಕ್ಷಗಳನ್ನು ಒಟ್ಟು ಮಾಡಿ ಬಿಜೆಪಿ ಹಣಿಯುವ ವಿಪಕ್ಷಗಳ ಯತ್ನಕ್ಕೆ ಹಿನ್ನಡೆ ಉಂಟುಮಾಡಿದೆ.

Tap to resize

Latest Videos

ಇದನ್ನು ಓದಿ: 'ಮಹಾ' ಡಿಸಿಎಂ ಆಗಿ ಅಜಿತ್‌ ಪವಾರ್‌ ಪ್ರಮಾಣ ವಚನ ಸ್ವೀಕಾರ; ಶರದ್‌ ಪವಾರ್‌ಗೆ ಮತ್ತೆ ಸೆಡ್ಡು; 9 ಎನ್‌ಸಿಪಿ ನಾಯಕರ ಸಾಥ್‌

ಈ ನಡುವೆ ಅಜಿತ್‌ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಶರದ್‌ ಪವಾರ್‌ ಘೋಷಿಸಿದ್ದು, ಜುಲೈ 5ರಂದು ಸಭೆ ನಡೆಸುವುದಾಗಿ ಹೇಳಿದ್ದಾರೆ. ಆದರೆ, ‘ನಾವು ಪಕ್ಷ ಬಿಟ್ಟಿಲ್ಲ. ಸರ್ಕಾರವನ್ನು ಇಡೀ ಎನ್‌ಸಿಪಿ ಬೆಂಬಲಿಸುತ್ತಿದೆ’ ಎಂದು ಅಜಿತ್‌ ಹೇಳಿಕೊಂಡಿದ್ದಾರೆ.

ಅಜಿತ್‌ಗೆ 40 ಶಾಸಕರ ಬೆಂಬಲ?:
ಇದೇ ವೇಳೆ, ಎನ್‌ಸಿಪಿಯ 53 ಶಾಸಕರ ಪೈಕಿ, ಸಚಿವರಾದ 9 ಶಾಸಕರು ಸೇರಿ 13 ಶಾಸಕರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡು ಅಜಿತ್‌ಗೆ ಬೆಂಬಲ ಸಾರಿದ್ದಾರೆ. ಆದರೆ 53 ಶಾಸಕರ ಪೈಕಿ 40 ಜನರ ಬೆಂಬಲ ತಮಗಿದೆ ಎಂದು ಅಜಿತ್‌ ಬಣ ಹೇಳಿದ್ದು, ರಾಜ್ಯಪಾಲರಿಗೆ ಪತ್ರ ಕೂಡ ರವಾನಿಸಿದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: ಶರದ್‌ ಪವಾರ್‌ಗೆ ಬಿಜೆಪಿ ಕಾರ್ಯಕರ್ತನಿಂದ್ಲೇ ಜೀವ ಬೆದರಿಕೆ: ಅಜಿತ್ ಪವಾರ್ ಸ್ಫೋಟಕ ಹೇಳಿಕೆ

ಹೀಗೆ ಬಂಡೆದ್ದವರಲ್ಲಿ ಶರದ್‌ ಪವಾರ್‌ ಅತ್ಯಾಪ್ತರಾದ ಎನ್‌ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್‌ ಪಟೇಲ್‌, ಛಗನ್‌ ಭುಜಬಲ್‌, ದಿಲೀಪ್‌ ವಾಲ್ಸೆ ಪಾಟೀಲ್‌ ಕೂಡ ಪ್ರಮುಖರು. ಇದು ಭಾರೀ ಅಚ್ಚರಿ ಮೂಡಿಸಿದೆ. ಬಂಡಾಯವೆದ್ದವರ ಪೈಕಿ ಅಜಿತ್‌ ಪವಾರ್‌ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದ್ದರೆ, ಉಳಿದ 8 ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ 145 ಶಾಸಕರ ಅಗತ್ಯವಿದೆ. ಬಿಜೆಪಿ (110) ಹಾಗೂ ಶಿಂಧೆ ಶಿವಸೇನೆ ಬಣ (40)ದ ಸರ್ಕಾರ 150 ಶಾಸಕರನ್ನು ಹೊಂದಿದೆ. ಇದೀಗ ಅಜಿತ್‌ ಪವಾರ್‌ ಹೇಳುತ್ತಿರುವಂತೆ 40 ಶಾಸಕರು ಬೆಂಬಲ ನೀಡಿದರೆ, ಸರ್ಕಾರದ ಬಲ 190ಕ್ಕೆ ಏರಲಿದೆ. ಪ್ರತಿಪಕ್ಷಗಳ ಬಣದಲ್ಲಿ 98 ಶಾಸಕರು ಉಳಿದಂತಾಗಲಿದೆ. ಕಳೆದ ವರ್ಷ ಶಿವಸೇನೆಯಲ್ಲಿ ಇದೇ ರೀತಿ ಕ್ಷಿಪ್ರಕ್ರಾಂತಿ ನಡೆದು, ಏಕನಾಥ ಶಿಂಧೆ ನೇತೃತ್ವದಲ್ಲಿ 40 ಶಾಸಕರು ಬಂಡೆದಿದ್ದರು. ಹೀಗಾಗಿ ಉದ್ಧವ್‌ ಠಾಕ್ರೆ ನೇತೃತ್ವದ ಅಘಾಡಿ ಸರ್ಕಾರ ಪತನಗೊಂಡು ಶಿಂಧೆ-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು.

ಇದನ್ನೂ ಓದಿ: ಮಹಾ ರಾಜಕೀಯದಲ್ಲಿ ಮತ್ತೊಂದು ಟ್ವಿಸ್ಟ್‌: ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಶರದ್‌ ಪವಾರ್‌ ರಾಜೀನಾಮೆ

ಕ್ಷಿಪ್ರಕ್ರಾಂತಿ ಆಗಿದ್ದು ಹೇಗೆ?:
ಅಜಿತ್‌ ಪವಾರ್‌ ಭಾನುವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಕೆಲ ಶಾಸಕರ ಜೊತೆ ಸಭೆ ನಡೆಸಿದ್ದರು. ಅದರಲ್ಲಿ ಪವಾರ್‌ ಪುತ್ರಿ ಸುಪ್ರಿಯಾ ಸುಳೆ ಕೂಡಾ ಭಾಗಿಯಾಗಿದ್ದರು. ಆದರೆ ಸುಪ್ರಿಯಾ ಸಭೆ ಮುಗಿಯುವ ಮುನ್ನವೇ ತೆರಳಿದ್ದರು. ಇದಾದ ಕೆಲವೇ ಹೊತ್ತಿನಲ್ಲೇ ಬಿಜೆಪಿ, ಶಿವಸೇನೆ ನಾಯಕರ ಜೊತೆಗೆ ರಾಜಭವನದಲ್ಲಿ ಪ್ರತ್ಯಕ್ಷರಾದ ಅಜಿತ್‌ ಪವಾರ್‌, ನಾವು 9 ಜನರು ಎನ್‌ಡಿಎ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿ ಸರ್ಕಾರ ಸೇರುತ್ತಿರುವುದಾಗಿ ಘೋಷಿಸಿದರು. ಬಳಿಕ ರಾಜ್ಯಪಾಲ ರಮೇಶ್‌ ಬ್ಯಾಸ್‌ ಅವರು, 9 ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಮಂತ್ರಿಗಳಾದ 9 ಎನ್‌ಸಿಪಿ ಬಂಡುಕೋರರು:
ಅಜಿತ್‌ ಪವಾರ್‌, ಛಗನ್‌ ಭುಜಬಲ್‌, ದಿಲೀಪ್‌ ವಾಲ್ಸೆ ಪಟೇಲ್‌, ಹಸನ್‌ ಮುಶ್ರಿಫ್‌, ದನಂಜಯ್‌ ಮುಂಡೆ, ಅದಿತಿ ತತ್ಕರೆ, ಧರ್ಮರಾವ್‌ ಅತ್ರಾಮ್‌, ಅನಿಲ್‌ ಪಾಟೀಲ್‌ ಮತ್ತು ಸಂಜಯ್‌ ಬನ್ಸೋಡೆ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇದನ್ನು ಓದಿ: ಮಹಾ ರಾಜಕೀಯದಲ್ಲಿ ಮತ್ತೊಂದು ಟ್ವಿಸ್ಟ್‌: ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಶರದ್‌ ಪವಾರ್‌ ರಾಜೀನಾಮೆ

ಬಂಡಾಯ ಏಕೆ?:
ಶರದ್‌ ಪವಾರ್‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಆ ಹುದ್ದೆ ಏರುವ ಕನಸು ಅಜಿತ್‌ರದ್ದಾಗಿತ್ತು. ಆದರೆ ಇತ್ತೀಚೆಗೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ಘೋಷಿಸಿ ಬಳಿಕ ಹಿಂದಕ್ಕೆ ಪಡೆದಿದ್ದ ಶರದ್‌ ಪವಾರ್‌, ಪಕ್ಷದ ನೂತನ ಕಾರ್ಯಾಧ್ಯಕ್ಷರನ್ನಾಗಿ ಪ್ರಫುಲ್‌ ಪಟೇಲ್‌ ಮತ್ತು ತಮ್ಮ ಪುತ್ರಿ ಸುಪ್ರಿಯಾ ಸುಳೆ ಅವರನ್ನು ನೇಮಿಸಿದ್ದರು. ಇದರಿಂದ ಸಿಟ್ಟಿಗೆದ್ದ ಅಜಿತ್‌ ಪವಾರ್‌, ತಮ್ಮ ಬೆಂಬಲಿಗರೊಡಗೂಡಿ ಬಂಡಾಯ ಏಳಲು ನಿರ್ಧರಿಸಿದರು ಎನ್ನಲಾಗಿದೆ.

ಆಗಿದ್ದೇನು?

  •  ಶರದ್‌ ಪವಾರ್‌ ಕಾರ್ಯನಿರ್ವಹಣೆ ಬಗ್ಗೆ ಅಸಮಾಧಾನಗೊಂಡಿದ್ದ ಅಜಿತ್‌ ಪವಾರ್‌
  • ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲಿದ್ದಾರೆ ಎಂಬ ಬಗ್ಗೆ ಕಳೆದೆರಡು ತಿಂಗಳಿನಿಂದ ವದಂತಿ
  • ಭಾನುವಾರ ಬೆಳಗ್ಗೆ ಶಾಸಕರು, ಆಪ್ತ ಮುಖಂಡರ ಜತೆ ಅಜಿತ್‌ ಪವಾರ್‌ ಮಹತ್ವದ ಸಭೆ
  • ಸಭೆಗೆ ತೆರಳಿದ್ದ ಶರದ್‌ ಪವಾರ್‌ ಪುತ್ರಿ ಸುಪ್ರಿಯಾ ಮಧ್ಯದಲ್ಲೇ ಸಭೆಯಿಂದ ನಿರ್ಗಮನ
  • ಇದಾದ ಬಳಿಕ ರಾಜಭವನಕ್ಕೆ ತೆರಳಿದ ಅಜಿತ್‌ ಪವಾರ್‌. ಡಿಸಿಎಂ ಆಗಿ ಪ್ರಮಾಣವಚನ
  • ಶರದ್‌ ಪವಾರ್‌ ಆಕ್ರೋಶ. ಬಂಡಾಯಕ್ಕೆ ಪ್ರಧಾನಿ ಮೋದಿ ಕಾರಣ ಎಂದು ದೂಷಣೆ
  • ಒಟ್ಟಾರೆ ಈ ಬೆಳವಣಿಗೆಗಳಿಂದ ಕುಗ್ಗಿದ ಪವಾರ್‌ಗೆ ರಾಹುಲ್‌, ಖರ್ಗೆ ಅವರಿಂದ ಸಾಂತ್ವನ

ಇದನ್ನೂ ಓದಿ: 2ಕ್ಕಿಂತ ಹೆಚ್ಚು ಮಕ್ಕಳಿರುವ ಸಂಸದ, ಶಾಸಕರನ್ನು ಅನರ್ಹಗೊಳಿಸಿ: ಅಜಿತ್ ಪವಾರ್

ಪಕ್ಷಾಂತರಿಗಳು ಅನರ್ಹ ಆಗ್ತಾರಾ?
ಎನ್‌ಸಿಪಿಯಲ್ಲಿ 53 ಶಾಸಕರು ಇದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆಯಿಂದ ಪಾರಾಗಲು ಕನಿಷ್ಠ 36 ಶಾಸಕರ ಬೆಂಬಲ ಅಜಿತ್‌ ಪವಾರ್‌ಗೆ ಬೇಕು. ಅಷ್ಟು ಶಾಸಕರು ಅಜಿತ್‌ ಜತೆಗಿದ್ದರೆ ಅವರು ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲಿದ್ದಾರೆ. ಇಲ್ಲದೆ ಹೋದರೆ ಅನರ್ಹತೆ ತೂಗುಕತ್ತಿ ಎದುರಿಸಬೇಕಾಗುತ್ತದೆ.

ಒಂದೇ ವರ್ಷದಲ್ಲಿ 2ನೇ ಪಕ್ಷ ಇಬ್ಭಾಗ
ಅಜಿತ್‌ ಪವಾರ್‌ ನೇತೃತ್ವದಲ್ಲಿ ಎನ್‌ಸಿಪಿ ಶಾಸಕರು ಭಾನುವಾರ ಎನ್‌ಡಿಎ ಮೈತ್ರಿಕೂಟ ಸೇರುವುದರೊಂದಿಗೆ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಅಧಿಕೃತವಾಗಿ ಹೋಳಾಗಿದೆ. ಇದರೊಂದಿಗೆ ಒಂದು ವರ್ಷದ ಅವಧಿಯಲ್ಲಿ ಮಹಾರಾಷ್ಟ್ರದ 2ನೇ ಪಕ್ಷವೊಂದು ವಿಭಜನೆಯಾದಂತಾಗಿದೆ. 2022ರ ಜೂನ್‌ನಲ್ಲಿ ಶಿವಸೇನೆ ಇಬ್ಭಾಗವಾಗಿತ್ತು.

ಇದನ್ನೂ ಓದಿ: ‘ಮಹಾ’ ಬಿಜೆಪಿಗೆ ಅಜಿತ್ ಪವಾರ್‌ ಹಾಗೂ 40 ಶಾಸಕರ ಬೆಂಬಲ? ಎನ್‌ಸಿಪಿ ನಾಯಕನ ಪ್ರತಿಕ್ರಿಯೆ ಹೀಗಿದೆ..

ಲಕ್ಷ್ಮಣ ರೇಖೆ ದಾಟಿದ್ದಾರೆ
ಯಾರು ಪಕ್ಷದ ಲಕ್ಷ್ಮಣ ರೇಖೆ ದಾಟಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. 2 ದಿನದ ಹಿಂದೆಯಷ್ಟೇ ಪ್ರಧಾನಿ ಮೋದಿ ಅವರು ಎನ್‌ಸಿಪಿ ಭ್ರಷ್ಟಪಕ್ಷ ಎಂದಿದ್ದರು. ಈಗ ಎನ್‌ಸಿಪಿ ಶಾಸಕರು ಸಚಿವರಾಗಿ ಆರೋಪಗಳಿಂದ ಮುಕ್ತರಾಗಿದ್ದಾರೆ. ಇದಕ್ಕಾಗಿ ಮೋದಿಗೆ ಧನ್ಯವಾದ.
- ಶರದ್‌ ಪವಾರ್‌, ಎನ್‌ಸಿಪಿ ಅಧ್ಯಕ್ಷ

ಬಿಜೆಪಿ ದೋಸ್ತಿ ತಪ್ಪಲ್ಲ
ಮೋದಿ ನಾಯಕತ್ವ ಮೆಚ್ಚಿ, ದೇಶದ ಅಭಿವೃದ್ಧಿ ಹಿತದೃಷ್ಟಿಯಿಂದ ನಾವು ಸರ್ಕಾರ ಸೇರಲು ನಿರ್ಧರಿಸಿದ್ದೇವೆ. ಆದರೆ ಎನ್‌ಸಿಪಿ ಹೋಳಾಗಿಲ್ಲ. ಶಿವಸೇನೆ ಜೊತೆ ಎನ್‌ಸಿಪಿ ಕೈಜೋಡಿಸುವುದು ತಪ್ಪಲ್ಲ ಎಂದರೆ, ಬಿಜೆಪಿ ಜೊತೆಗೆ ಕೈ ಜೋಡಿಸುವುದರಲ್ಲೂ ತಪ್ಪಿಲ್ಲ.
- ಅಜಿತ್‌ ಪವಾರ್‌, ಮಹಾರಾಷ್ಟ್ರ ಡಿಸಿಎಂ

 

click me!