ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಸುಳ್ಳು ಜಾಹೀರಾತು ನೀಡಿದೆ. ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು. ನಮ್ಮ ಸರ್ಕಾರ ಕೊಟ್ಟ ಭರವಸೆಯಂತೆ ಪಂಚ ಗ್ಯಾರಂಟಿಗಳನ್ನು ಜಾರಿ ಗೊಳಿಸಿದೆ. ನಾನು ನುಡಿದಂತೆ ನಡೆದಿದ್ದೇವೆ ಎಂದು ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸಂಡೂರು(ನ.08): ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಉಲ್ಲೇಖಿಸಿ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿ ನೀಡಿರುವ 'ವಾದಾ ಕಿಯಾ, ಧೋಖಾ ದಿಯಾ' ಜಾಹೀರಾತು ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಕಿಡಿಕಾರಿದ್ದಾರೆ.
ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಸುಳ್ಳು ಜಾಹೀರಾತು ನೀಡಿದೆ. ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು. ನಮ್ಮ ಸರ್ಕಾರ ಕೊಟ್ಟ ಭರವಸೆಯಂತೆ ಪಂಚ ಗ್ಯಾರಂಟಿಗಳನ್ನು ಜಾರಿ ಗೊಳಿಸಿದೆ. ನಾನು ನುಡಿದಂತೆ ನಡೆದಿದ್ದೇವೆ ಎಂದು ತಿರುಗೇಟು ನೀಡಿದರು.
undefined
ತಾಲೂಕಿನ ಬೊಮ್ಮಘಟ್ಟ, ಚೋರುನೂರು, ಬಂಡ್ರಿ, ಯಶವಂತನಗರ, ಕೃಷ್ಣಾನಗರಹಾಗೂ ತಾರಾನಗರ ಗ್ರಾಮಗಳಲ್ಲಿ ಗುರುವಾರ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಬಹಿ ರಂಗ ಸಭೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣಾ ತುಕಾರಾಂ ಪರವಾಗಿ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿ ಮಾತನಾಡಿದರು.
ನಮ್ಮ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ನಂತರ ನಡೆದ ಪ್ರಥಮ ಕ್ಯಾಬಿನೆಟ್ ಮೀಟಿಂಗ್ ನಲ್ಲಿಯೇ ನಾವು ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸುವ ತೀರ್ಮಾನ ಕೈಗೊಂಡಿದ್ದೇವೆ. ಆ ಯೋಜನೆಗಳನ್ನು ಎಲ್ಲ ಜಾತಿ, ಧರ್ಮ ದವರಿಗೆ ಸಮಾನವಾಗಿ ನೀಡಿದ್ದೇವೆ. ಕಾಂಗ್ರೆಸ್ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಪಾತ್ರ ಇಲ್ಲವೇ ಇಲ್ಲ ಎಂದು ಆರೋಪಿಸಿದರು.
ಸಂಡೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಉಸ್ತುವಾರಿ ವಹಿಸಿಕೊಂಡಿರುವ ಜನಾರ್ದನ ರೆಡ್ಡಿ ಸುಮ್ಮನೆ ಜೈಲಿಗೆ ಹೋಗಿದ್ದರಾ? ಗಣಿ ಲೂಟಿ ಹೊಡೆದು ಜೈಲಿಗೆ ಹೋಗಿದ್ದರು. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇದೆಯಾ? ಬಳ್ಳಾರಿಯನ್ನು ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ದು ಯಾರು? ಅಚ್ಛೇ ದಿನ್ ಬಂದಿದೆಯಾ? ನಿಮ್ಮ ಅಕೌಂಟ್ ಗಳಿಗೆ 15 ಲಕ್ಷ ಬಂದಿದೆಯಾ? ರಾಜ್ಯದಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅಧಿಕಾರದಲ್ಲಿದ್ದಾಗ ಒಂದು ಮನೆಯನ್ನಾದರೂ ಕಟ್ಟಿಸಿಕೊಟ್ಟರಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಅಂತಹವರಿಗೆ ಮತ ಕೊಡ ಬೇಡಿ.ನಾವು ಕೆಲಸಮಾಡಿ ಕೂಲಿ ಕೇಳುತ್ತಿದ್ದೇವೆ. ಕ್ಷೇತ್ರದ ಅಭಿವೃದ್ಧಿಗಾಗಿ ಪಣತೊಟ್ಟಿರುವ ಅನ್ನಪೂರ್ಣಾ ತುಕಾರಾಂ ಅವರನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ನನ್ನ, ನಾಗೇಂದ್ರ ಮೇಲೆ ಸುಳ್ಳು ಕೇಸು
ನಾನು ಮೋದಿ ಹಾಗೂ ಅಮಿತ್ ಶಾ ಅವರನ್ನು ಟೀಕೆ ಮಾಡುತ್ತಿದ್ದ ಕಾರಣ ನನ್ನನ್ನು ಮುಗಿಸಲು ಹೊರಟಿದ್ದಾರೆ. ನನ್ನ ಹಾಗೂ ನಾಗೇಂದ್ರ ಮೇಲೆ ಸುಳ್ಳು ಕೇಸು ದಾಖಲಿಸಿದರು. ಸಿದ್ದರಾಮಯ್ಯನನ್ನು ಮುಗಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುಗಿಸಿದಂತೆ ಅಂತ ತಿಳಿದುಕೊಂಡಿದ್ದಾರೆ. ಜನರ ಆಶೀರ್ವಾದ ಇರುವವರೆಗೆ ನಾನು ಜಗ್ಗೋದಿಲ್ಲ, ಬಗ್ಗೋದಿಲ್ಲ ಎಂದರು.