ಖರ್ಗೆ ಕೋಟೆ ಕೆಡವಿದಂತೆ, ಶರದ್ ಕೋಟೆ ಛಿದ್ರಗೊಳಿಸಲು ಬಿಜೆಪಿ ರಣತಂತ್ರ; ಬಾರಾಮತಿಯಲ್ಲಿ ಪವಾರ್ ವರ್ಸಸ್ ಪವಾರ್ ಫೈಟ್!

By Sathish Kumar KH  |  First Published Mar 31, 2024, 6:30 PM IST

ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಕೋಟೆಯನ್ನು ಕೆಡವಿದ ಮಾದರಿಯಲ್ಲಿಯೇ ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಕೋಟೆ ಛಿದ್ರಗೊಳಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಹೀಗಾಗಿ, ಪವಾರ್ ಕುಟುಂಬಕ್ಕೆ ಸೆಡ್ಡು ಹೊಡೆಲು ಪವಾರ್ ಫ್ಯಾಮಿಲಿ ಸದಸ್ಯರನ್ನೇ ಕಣಕ್ಕಿಳಿಸಲಾಗಿದೆ. 


ವರದಿ- ಯಲ್ಲಪ್ಪ ಹಾನಗಲ್, ಬುಲೆಟಿನ್ ಪ್ರೊಡ್ಯೂಸರ್, ಏಷ್ಯಾನೆಟ್ ಸುವರ್ಣ ನ್ಯೂಸ್
ನವದೆಹಲಿ (ಮಾ.31):
ಅದು 2019ರ ಲೋಕಸಭಾ ಚುನಾವಣೆ ಸಮಯ. ಆ ವೇಳೆ ಬಾಲಾಕೋಟ್​ ಏರ್‌ ಸ್ಟ್ರೈಕ್ ಬಳಿಕ ಬಿಜೆಪಿ ಜನಪ್ರಿಯತೆ ಉತ್ತುಂಗದಲ್ಲಿತ್ತು. ವಿಪಕ್ಷಗಳ ಘಟಾನುಟಿಗಳಿಗೆಲ್ಲಾ ಸೋಲಿನ ಆತಂಕ ಮನೆ ಮಾಡಿತ್ತು.. ಈ ವೇಳೆ ಮಹಾರಾಷ್ಟ್ರದ ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಸರಣಿ ರ್‍ಯಾಲಿ ನಡೆಸಿದ್ರು. ಕಾರಣ ಎನ್‌ಸಿಪಿ ಅಭ್ಯರ್ಥಿ. ಶರದ್​ ಪವಾರ್​ ಪುತ್ರಿ ಸುಪ್ರಿಯಾ ಸುಳೆ ಅವರನ್ನೂ ಸೋಲಿಸಲೇಬೇಕು ಎಂದು ಕೇಸರಿ ಪಡೆ ರಣತಂತ್ರ ಹೂಡಿತ್ತು. ಆದ್ರೆ ಫಲಿತಾಂಶ ಹೊರ ಬಿದ್ದಾಗ ಬಿಜೆಪಿ ಲೆಕ್ಕಾಚಾರ ಉಲ್ಟಾಪಲ್ಟಾ ಆಗಿತ್ತು. ಬರೋಬ್ಬರಿ 1. 55 ಲಕ್ಷ ಮತಗಳಿಂದ ಶರದ್ ಪವಾರ್​ ಪುತ್ರಿ ಗೆದ್ದು ಬೀಗಿದ್ದರು.

ಸುಪ್ರಿಯಾ ವರ್ಸಸ್​ ಸುನೇತ್ರಾ: ಈಗ ಮಹಾರಾಷ್ಟ್ರದಲ್ಲಿ ರಾಜಕೀಯ ಲೆಕ್ಕಾಚಾರ ಬದಲಾಗಿವೆ. 2019ರವರೆಗೂ ಶರದ್​ ಪವಾರ್​ ಬಲಗೈನಂತಿದ್ದ ಅಜಿತ್ ಪವಾರ್ ಬರೋಬ್ಬರಿ 40 ಶಾಸಕರೊಂದಿಗೆ ಎನ್‌ಡಿಎ ಮೈತ್ರಿಕೂಟ ಸೇರಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಆದರು. ಈ ಬಾರಿ ಸುಪ್ರಿಯಾ ಸುಳೆ ವಿರುದ್ಧ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್​ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಮೊನ್ನೆಯಷ್ಟೇ ಎನ್‌ಸಿಪಿ ಬಣದಿಂದ 5 ಕ್ಷೇತ್ರಕ್ಕೆ ಹೆಸರು ಘೋಷಿಸಲಾಯ್ತು. ಅದೇ ಪಟ್ಟಿಯಲ್ಲಿ ಬಾರಾಮತಿ ಕ್ಷೇತ್ರದಿಂದ ಸುಪ್ರಿಯಾ ಸುಳೆಗೆ 4ನೇ ಬಾರಿ ಟಿಕೆಟ್ ಘೋಷಣೆಯಾಗಿದೆ. ಸುಪ್ರಿಯಾ ಸುಳೆ ಹೆಸರು ಘೋಷಣೆ ಆಗುತ್ತಿದ್ದಂತೆಯೇ, ಸುದ್ದಿಗೋಷ್ಠಿ ನಡೆಸಿದ ಎನ್‌ಸಿಪಿ ಅಜಿತ್ ಘಟಕದ ಅಧ್ಯಕ್ಷ ಸುನೀಲ್ ಕಾಟ್ಕರೇ, ಬಾರಾಮತಿ ಕ್ಷೇತ್ರಕ್ಕೆ ಸುನೇತ್ರಾ ಪವಾರ್​ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಈ ಬಾರಿ ಬಾರಾಮತಿ ಅಖಾಡದಲ್ಲಿ ನಾದಿನಿ,​ ಅತ್ತಿಗೆ ನಡುವೆ ಚುನಾವಣಾ ಹಣಾಹಣಿ ನಡೆಯಲಿದೆ.

Tap to resize

Latest Videos

ಪಂಜಾಬ್‌ನಲ್ಲಿ ಏಕಾಂಗಿಯಾಗಿರೋ ಬಿಜೆಪಿಗೆ ಕಾಂಗ್ರೆಸ್ ಮತ್ತು ಆಪ್ ಸಂಸದರು ಸೇರಿದ್ದೇಕೆ?

ಶರದ್ ಪವಾರ್ ಪುತ್ರಿ ಸೋಲಿಸುವುದು ಸಲೀಸಾ?: ಬಾರಾಮತಿ ಲೋಕಸಭಾ ಕಣದಲ್ಲಿ ಶರದ್​ ಪವಾರ್ ಪುತ್ರಿ ಸೋಲಿಸುವುದು ಅಷ್ಟು ಸಲೀಸಲ್ಲ. 1984ರಿಂದಲೇ ಬಾರಾಮತಿ ಮೇಲೆ ಶರದ್ ಪವಾರ್ ಅವರಿಗೆ ಹಿಡಿತವಿದೆ. ಕಾಂಗ್ರೆಸ್‌ನಿಂದ 1984, 1991, 1996 ಹಾಗೂ 1998ರ ಚುನಾವಣೆಗಳಲ್ಲಿ ಶರದ್ ಪವಾರ್​ ಗೆದ್ದಿದ್ದರು. 1999 ರಿಂದ 2004ರವರೆಗೂ ಮತ್ತೆರಡು ಬಾರಿ ಎನ್‌ಸಿಪಿ ಪಕ್ಷ ಸ್ಥಾಪಿಸಿದ ಪವಾರ್ ಆಗಲೂ ಗೆದ್ದಿದ್ದರು. ಈ ಕ್ಷೇತ್ರದಲ್ಲಿ ಬರೋಬ್ಬರಿ 8 ಬಾರಿ ಪವಾರ್ ಸಂಸದರಾಗಿದ್ದಾರೆ. ಆ ಬಳಿಕ 2009, 2014, 2019ರ ಚುನಾವಣೆಯಲ್ಲಿ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಗೆದ್ದಿದ್ದಾರೆ. ಹೀಗಾಗಿ, ಬಾರಾಮತಿ ಕೋಟೆ ಮೇಲೆ ಪವಾರ್​ ಕುಟುಂಬಕ್ಕೆ ತನ್ನದೇ ಹಿಡಿತ ಇರುವುದು ಸುಳ್ಳಲ್ಲ.

ಮ್ಯಾಜಿಕ್ ಮಾಡ್ತಾರಾ ಅಜಿತ್ ಪವಾರ್ ಪತ್ನಿ: ಅಜಿತ್ ಪವಾರ್ ಪತ್ನಿ ಸುನೇತ್ರಾ ಚುನಾವಣಾ ರಾಜಕೀಯಕ್ಕೆ ಹೊಸಬರು. ಆದ್ರೆ ರಾಜಕೀಯ ಕ್ಷೇತ್ರ ಹೊಸದಲ್ಲ. ಬಾರಾಮತಿ ಕ್ಷೇತ್ರ ಅಜಿತ್ ಪವಾರ್​ ಕುಟುಂಬಕ್ಕೂ ಹೊಸದಲ್ಲ. 1991ರಲ್ಲಿ ಅಜಿತ್ ಪವಾರ್​ ಇದೇ ಕ್ಷೇತ್ರದಿಂದಲೇ ಒಂದು ಬಾರಿ ಸಂಸದ ಕೂಡ ಆಗಿದ್ದರು. ಇದೇ ಬಾರಾಮತಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಅಜಿತ್ ಪವಾರ್. ರಾಜಕೀಯ ಪಂಡಿತರು ಶರದ್​ ಪವಾರ್​ ಅಷ್ಟೇ ಅಜಿತ್ ಪವಾರ್‌ಗೂ ಇಲ್ಲಿ ಹಿಡಿತ ಇದೆ. ಬಾರಾಮತಿ ಲೋಕಸಭಾ ಕ್ಷೇತ್ರದ 6 ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ಎನ್‌ಸಿಪಿ, ಇಬ್ಬರು ಬಿಜೆಪಿ ಹಾಗೂ ಇಬ್ಬರು ಕಾಂಗ್ರೆಸ್​ ಶಾಸಕರಿದ್ದಾರೆ. ಆದರೆ, ಎನ್‌ಸಿಪಿಯ ಇಬ್ಬರು ಶಾಸಕರು ಅಜಿತ್ ಪವಾರ್​ ಬಣದಲ್ಲಿದ್ದಾರೆ. ಎನ್‌ಡಿಎ ಮೈತ್ರಿ ಕಾರಣದಿಂದಾಗಿ ಬಿಜೆಪಿ ಶಾಸಕರು ಸುನೇತ್ರಾ ಪವಾರ್ ಅವರನ್ನ​ ಬೆಂಬಲಿಸ್ತಾರೆ. ಜತೆಗೆ ಮೋದಿ ಜನಪ್ರಿಯತೆ ಬಳಸಿಕೊಂಡು ಶರದ್ ಪವಾರ್ ಪುತ್ರಿ ಸೋಲಿಸಲು ಲೆಕ್ಕಾಚಾರ ನಡೆದಿವೆ.

2019ರ ಚುನಾವಣೆಯ ಬದ್ಧ ವೈರಿ, 2024ರಲ್ಲಿ ಮೈತ್ರಿ ಸ್ನೇಹಿತರು; ಸುಮಲತಾ ಭೇಟಿಯಾದ ಕುಮಾರಸ್ವಾಮಿ

ಖರ್ಗೆ ಸೋಲಿಸಿದಂತೆ ಶರದ್ ಪವಾರ್ ಪುತ್ರಿ ಸೋಲಿಸಲು ತಂತ್ರ: ಕರ್ನಾಟಕದ ಕಲುಬರಗಿಯಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿದ್ದ ಕಾಂಗ್ರೆಸ್‌ ಪ್ರಬಲ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಖರ್ಗೆ ಹಣಿಯಲು ಬಿಜೆಪಿ ಮಾಡಿದ ರಣತಂತ್ರ ಒಂದೆರಡಲ್ಲ. ಕಾಂಗ್ರೆಸ್​ ಶಾಸಕ ಉಮೇಶ್ ಜಾಧವ್‌ ಅವರನ್ನೇ ಬಿಜೆಪಿಗೆ ಸೇರಿಸಿಕೊಂಡು, ಅಭ್ಯರ್ಥಿಯಾಗಿಸಿ ಗೆಲ್ಲುವಲ್ಲಿ ಸಕ್ಸಸ್ ಆಗಿತ್ತು. ಇದೀಗ ಬಾರಾಮತಿ ಕೋಟೆಯಲ್ಲೇ ಶರದ್ ಪುತ್ರಿ ಸೋಲಿಸಲೂ ಇದೇ ರಣತಂತ್ರ ನಡೆದಿದೆ. ಅಜಿತ್ ಪವಾರ್​ ಪತ್ನಿಯನ್ನೇ ಇಲ್ಲಿ ಕಣಕ್ಕಿಳಿಸಲಾಗಿದೆ. ಶರದ್ ಪವಾರ್​ ಪುತ್ರಿ ಸೋಲಿಸಿ, ದೇಶಾದ್ಯಂತ ಇಂಡಿಯಾ ಮೈತ್ರಿಕೂಟಕ್ಕೆ ಭಾರಿ ಹೊಡೆತ ಕೊಡೋದು ಅಮಿತ್ ಶಾ ಲೆಕ್ಕಾಚಾರವಾಗಿದೆ.

click me!