ಪಂಜಾಬ್: ಲೋಕಸಭಾ ಚುನಾವಣೆಗೆ ಬಿಜೆಪಿಗೆ ಹೊಸ ಹುಮ್ಮಸ್ಸು, ಏನಾಗಲಿದೆ ಫಲಿತಾಂಶ?

By Suvarna NewsFirst Published Mar 31, 2024, 6:11 PM IST
Highlights

ಈ ಬಾರಿ ಪಂಜಾಬ್‌ನಲ್ಲಿ ಕೇಸರಿ ಪಡೆ ತನ್ನ ಸಂಘಟನೆಯನ್ನ ಮತ್ತಷ್ಟು ಬಲ ಪಡಿಸಿಕೊಂಡಿದೆ. ಜೊತೆಗೆ ವಿಧಾನಸಭೆಯಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸ್ಥಾಪಿಸಿದ್ದ ಪಂಜಾಬ್ ಲೋಕ ಕಾಂಗ್ರೆಸ್ ಸಹ ಬಿಜೆಪಿಯಲ್ಲಿ ವಿಲೀನವಾಗಿದ್ದು. ಈ ಬಾರಿ ಮತ್ತಷ್ಟು ಹುಮ್ಮಸ್ಸಿನಿಂದ ಕಣಕ್ಕಿಳಿಯಲು ಸಜ್ಜಾಗಿದೆ.

- ಶಿವರಾಜ್, ಬುಲೆಟಿನ್ ಪ್ರೊಡ್ಯೂಸರ್

ಮೋದಿ ಸರಕಾರದ ಕೇಂದ್ರ ಸರಕಾರ ಹೇಗಾದರೂ 400 ಸೀಟು ಗೆಲ್ಲಲೇ ಬೇಕೆಂದು ಪ್ರಯತ್ನಿಸುತ್ತಿದ್ದು, ದೇಶದೆಲ್ಲೆಡೆ ಯಾರು ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಾಧ್ಯವೋ, .ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಾಧ್ಯವೋ ಅದಕ್ಕೆ ಯತ್ನಿಸಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಸಖ್ಯ ಬೆಳೆಸದ ಕೆಲವು ಮೈತ್ರಿ ಪಕ್ಷಗಳು ಎನ್‌ಡಿಎ ಕೂಟಕ್ಕೆ ಮರುಸೇರ್ಪಡೆಗೊಂಡು, ಬಲವಾಗಿ ಅಖಾಡಕ್ಕೆ ಇಳಿದಿದೆ. ಆದ್ರೆ ಪಂಜಾಬ್‌ನಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧ ಪರಿಸ್ಥಿತಿ ಸೃಷ್ಟಿಯಾಗಿದ್ದು, ಪಂಜಾಬ್‌ನಲ್ಲಿ ಮೈತ್ರಿ ಬಲದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದ ಬಿಜೆಪಿ ಇದೇ ಮೊದಲ ಬಾರಿಗೆ ಏಕಾಂಗಿಯಾಗಿ ಸ್ಪರ್ಧೆಗೆ ನಿರ್ಧರಿಸಿದೆ. .

ವಾಜಪೇಯಿ ಕಾಲದಿಂದಲೂ ಬಿಜೆಪಿ ಮಿತ್ರ ಪಕ್ಷವಾಗಿದ್ದ ಅಕಾಲಿದಳ ಪಂಜಾಬ್‌ನಲ್ಲಿ ಈ ಬಾರಿ ಎನ್‌ಡಿಎ ಜೊತೆ ಸೇರಿ ಸ್ಪರ್ಧಿಸಲು ಮನಸು ಮಾಡಿಲ್ಲ. ಅಕಾಲಿದಳದ ಮನವೊಲಿಸೋಕೆ ಬಿಜೆಪಿಯೂ ಮನಸ್ಸ ಮಾಡಿಲ್ಲ.  2019ರಲ್ಲಿ ಕೃಷಿ ಕಾಯ್ದೆ ವಿರೋಧಿಸಿ ರೈತರು ಬೀದಿಗೆ ಇಳಿದಾಗಲೇ NDA ಮೈತ್ರಿಕೂಟಕ್ಕೆ ಗುಡ್‌ಬೈ ಹೇಳಿದ್ದ ಅಕಾಲಿದಳ. ಅಂದೇ ಕೇಂದ್ರ ಸಂಪುಟದಿಂದ ಹೊರಬಂದು ನಾವು ಬಿಜೆಪಿ ಜೊತೆಗಿಲ್ಲವೆಂಬ ಸಂದೇಶ ನೀಡಿ, ರೈತರ ಹೋರಾಟವನ್ನು ಬೆಂಬಲಿಸಿತ್ತು. 

ಪಂಜಾಬ್‌ನಲ್ಲಿ ಏಕಾಂಗಿಯಾಗಿರೋ ಬಿಜೆಪಿಗೆ ಕಾಂಗ್ರೆಸ್ ಮತ್ತು ಆಪ್ ಸಂಸದರು ಸೇರಿದ್ದೇಕೆ?

ಈ ನಿರ್ಧಾರ ತಪ್ಪೆಂಬುದು ವಿಧಾನಸಭೆ ಚುನಾವಣೆಯಲ್ಲೇ ಸಾಬೀತಾಗಿತ್ತು. ಏಕಾಏಕಿ 15 ಸ್ಥಾನದಿಂದ ಶಿರೋಮಣಿ ಅಕಾಲಿದಳ ಮೂರೇ ಮೂರು ಸ್ಥಾನಕ್ಕೆ ಕುಸಿದಿತ್ತು. ಅಕಾಲಿದಳದಿಂದ ದೂರವಾಗಿದ್ದ ಬಿಜೆಪಿಯೂ ಮೂರು ಸ್ಥಾನದಿಂದ ಎರಡಕ್ಕೆ ಕುಸಿದರೂ ವೋಟ್ ಶೇರ್ ಹೆಚ್ಚಿಸಿಕೊಳ್ಳೋದ್ರಲ್ಲಿ ಯಶ ಕಂಡಿತ್ತು.

ಇದೀಗ ಲೋಕಸಭಾ ಚುನಾವಣೆ (Lok sabha election 2024)ಯಲ್ಲಿ ಮತ್ತೆ ಹಳೆ ದೋಸ್ತಿಗಳು ಒಂದಾಗಿ ಸ್ಪರ್ಧಿಸುತ್ತಾರೆ ಎನ್ನುವಾಗಲೇ ಯಾಕೋ ಮಾತುಕತೆಗಳು ಯಶಸ್ವಿಯಾಗದೇ ಇಬ್ಬರು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಅತ್ತ ಆಪ್ ಹಾಗೂ ಕಾಂಗ್ರೆಸ್ ಸಹ ಪಂಜಾಬ್‌ನಲ್ಲಿ ಏಕಾಂಗಿ ಸ್ಪರ್ಧಿಲು ನಿರ್ಧರಿಸಿದ್ದು, ಯಾರ ತಾಕತ್ತು ಎಷ್ಟೆಂಬುದು ಈ ಚುನಾವಣೆಯಲ್ಲಿ ನಿರ್ಧಾರವಾಗಲಿದೆ. 
  
ಈ ಬಾರಿ ಕೇಸರಿ ಪಡೆ ತನ್ನ ಸಂಘಟನೆಯನ್ನ ಪಂಜಾಬ್‌ನಲ್ಲಿ ಮತ್ತಷ್ಟು ಬಲ ಪಡಿಸಿಕೊಂಡಿದೆ. ಜೊತೆಗೆ ವಿಧಾನಸಭೆಯಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸ್ಥಾಪಿಸಿದ್ದ ಪಂಜಾಬ್ ಲೋಕ ಕಾಂಗ್ರೆಸ್ ಸಹ ಬಿಜೆಪಿಯಲ್ಲಿ ವಿಲೀನವಾಗಿದ್ದು. ಈ ಬಾರಿ ಮತ್ತಷ್ಟು ಹುಮ್ಮಸ್ಸಿನಿಂದ ಕಣಕ್ಕಿಳಿಯಲು ಸಜ್ಜಾಗಿದೆ.

ಬಿಜೆಪಿ 400 ಸೀಟು ಗೆದ್ದು ಸಂವಿಧಾನ ಬದಲಾಯಿಸುವ ಗುರಿ ಇಟ್ಟುಕೊಂಡಿದೆ: ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ

ಪಂಜಾಬ್‌ನ ಏಕೈಕ ಆಪ್ ಸಂಸದ ಸುಶೀಲ್ ಕುಮಾರ್ ರಿಂಕು ಹಾಗೂ ಕಾಂಗ್ರೆಸ್ ಸಂಸದೆ, ಅಮರೀಂದರ್ ಸಿಂಗ್ ಪತ್ನಿ ಪ್ರನೀತ್ ಕೌರ್ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದು, ಕ್ರಮವಾಗಿ ಜಲಂದರ್ ಹಾಗೂ ಪಟಿಯಾಲದಿಂದ ಟಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಲಿ ಬಿಜೆಪಿ ಸಂಸದ ಸನ್ನಿ ಡಿಯೋಲ್‌ಗೆ ಬಿಜೆಪಿ ಕೊಕ್ ನೀಡಿದ್ದು. ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ನಿವೃತ್ತರಾಗಿರೋ ತರಂಜಿತ್ ಸಿಂಗ್ ಸಂಧುಗೆ ಅಮೃತಸರದ ಟಿಕೆಟ್ ನೀಡಿದೆ. ಕಳೆದ ಬಾರಿ ಅಕಾಲಿದಳ ಜೊತೆ ಸೇರಿ 2 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಕನಿಷ್ಟ 7 ಸ್ಥಾನ ಗೆಲ್ಲಬೇಕೆಂಬ ಜಿದ್ದಿಗೆ ಬಿದ್ದಿದೆ. ಈ ಬಾರಿ ಬಿಜೆಪಿ ಪಂಜಾಬ್‌ನ ಎಲ್ಲಾ 13 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಪಂಜಾಬ್ ಬಿಜೆಪಿ ಅಧ್ಯಕ್ಷ ಸುನೀಲ್ ಜಾಖರ್ ಸ್ಪಷ್ಟಪಡಿಸಿದ್ದಾರೆ. 

13 ಲೋಕಸಭಾ ಕ್ಷೇತ್ರಗಳ ಪೈಕಿ 2019ರಲ್ಲಿ ಕಾಂಗ್ರೆಸ್ 8 ಬಿಜೆಪಿ ಹಾಗೂ ಅಕಾಲಿದಳ ತಲಾ 2, ಆಮ್ ಆದ್ಮಿ 1 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು.

click me!