ಚಿನ್ನ ಸ್ಮಗ್ಲಿಂಗ್‌ ಕೇಸಲ್ಲಿ ಪರಂರನ್ನು ಸಿಕ್ಕಿಸಲು ಮಹಾನಾಯಕನ ಯತ್ನ: ಎಚ್‌ಡಿಕೆ

Kannadaprabha News   | Kannada Prabha
Published : May 24, 2025, 10:34 AM IST
HD Kumaraswamy

ಸಾರಾಂಶ

ದಲಿತ ನಾಯಕರನ್ನು ಮುಗಿಸಲು ಕುತಂತ್ರ ಮಾಡುತ್ತಿರುವ ಮಹಾನಾಯಕನೇ ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ.

ನವದೆಹಲಿ (ಮೇ.24): ದಲಿತ ನಾಯಕರನ್ನು ಮುಗಿಸಲು ಕುತಂತ್ರ ಮಾಡುತ್ತಿರುವ ಮಹಾನಾಯಕನೇ ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ದಲಿತ, ಹಿಂದುಳಿದ ವರ್ಗದ ನಾಯಕರನ್ನು ಗುರಿಯಾಗಿಸಿಕೊಂಡು ಇ.ಡಿ. ದಾಳಿ ನಡೆಸಿದೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರು ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಪರಮೇಶ್ವರ್ ಅವರು ಇಂಥ ಸಂಕಷ್ಟಕ್ಕೆ ಒಳಗಾಗಲು ಕಾಂಗ್ರೆಸ್ ಪಕ್ಷದ ಆ ಪ್ರಭಾವೀ ನಾಯಕನೇ ಕಾರಣ‌ ಎಂದರು.

ಸಚಿವ ರಾಜಣ್ಣ ವಿಧಾನಸಭೆಯಲ್ಲಿ ಹೇಳಿದರಲ್ಲ, ರಾಜ್ಯದಲ್ಲಿ ಸಿ.ಡಿ., ಪೆನ್ ಡ್ರೈವ್ ಫ್ಯಾಕ್ಟರಿ ಇಟ್ಟುಕೊಂಡಿರುವ ಪ್ರಭಾವೀ ನಾಯಕನ ಬಗ್ಗೆ ನೇರವಾಗಿ ಹೇಳಿದ್ದರು ಅವರು. ಅವರು ಹೇಳಿದ್ದ ನಾಯಕನೇ ಇವತ್ತು ಪರಮೇಶ್ವರ್ ಅವರನ್ನು ಮುಗಿಸಲು ಹೊರಟಿದ್ದಾನೆ. ಪರಮೇಶ್ವರ್ ಅವರು ದಲಿತ ನಾಯಕರ ಸಭೆ ಮಾಡಲು ಹೊರಟಿದ್ದು, ದೆಹಲಿ ನಾಯಕರನ್ನು ಭೇಟಿ ಮಾಡಿದ್ದೇ ಅವರ ವಿರುದ್ಧ ಕುತಂತ್ರ ನಡೆಯಲು ಕಾರಣ ಎಂದು ಕೇಂದ್ರ ಸಚಿವರು ದೂರಿದರು. ರಾಜ್ಯದಲ್ಲಿ ಏನೇನಾಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ದುಬೈನಿಂದ ಸಿಕ್ಕಿಬಿದ್ದಿರುವ ಆ ಮಹಿಳೆ ಚಿನ್ನ ತರುತ್ತಿದ್ದಾಳೆ ಎನ್ನುವ ಮಾಹಿತಿಯನ್ನು ಸೋರಿಕೆ ಮಾಡಿದ್ದೇ ಈ ಪ್ರಭಾವೀ ನಾಯಕ. ಆಕೆ ದುಬೈನಿಂದ ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದಾಳೆ ಎನ್ನುವ ವಿಚಾರ ಈ ಪ್ರಭಾವೀ ನಾಯಕನಿಗೆ ಹೇಗೆ ಗೊತ್ತು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯ ಅವರ ಬಳಿಯೇ ಗುಪ್ತಚರ ವಿಭಾಗ ಇದೆಯಲ್ಲ. ಅವರಿಗೆ ಈ ವಿಷಯ ಗೊತ್ತಿಲ್ಲವೇ? ಆ ಮಹಿಳೆ ವಿಮಾನ ನಿಲ್ದಾಣದ ಮೂಲಕ ಚಿನ್ನ ತರುತ್ತಿರುವ ಮಾಹಿತಿ ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷದ ಈ ಪ್ರಭಾವಿ ನಾಯಕ. ಈ ವಿಷಯ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿಲ್ಲವೇ? ಸಚಿವ ಪರಮೇಶ್ವರ್ ಅವರು ದಲಿತರ ಸಮಾವೇಶ ಮಾಡಲು ಹೊರಟರು. ತಾವು ಕೂಡ ಸಿಎಂ ಪದವಿಯ ಆಕಾಂಕ್ಷಿ ಎಂದು ಹೇಳಿದರು. ತಮ್ಮ ದಾರಿಗೆ ಅಡ್ಡ ಬರುತ್ತಾರೆ ಎಂದು ಕಾಂಗ್ರೆಸ್ ಪ್ರಭಾವೀ ನಾಯಕನೇ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಕುತಂತ್ರ ಹೂಡಿದರು. ಇಷ್ಟೆಲ್ಲಾ ಗಂಭೀರ ವಿಚಾರಗಳು ಸಿಎಂಗೆ ಗೊತ್ತಿಲವೆಂದರೆ ಹೇಗೆ?

ಸಿದ್ದರಾಮಯ್ಯ ಅವರನ್ನು ಇಳಿಸಿ ನಾನು ಸಿಎಂ ಆಗಬೇಕು ಎಂದು ಕುರ್ಚಿಯ ಮೇಲೆ ಟವೆಲ್ ಹಾಕಿಕೊಂಡು ಕೂತಿರುವವರೆ ಚಿನ್ನದ ರಹಸ್ಯ ಬಹಿರಂಗ ಮಾಡಿದ್ದಾರೆ ಎಂಬ ಸ್ಫೋಟಕ ಅಂಶಗಳನ್ನು ವಿಷಯವನ್ನು ಕುಮಾರಸ್ವಾಮಿ ಅವರು ಬಹಿರಂಗಪಡಿಸಿದರು. ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಇಷ್ಟೆಲ್ಲಾ ರಾಜಕೀಯ ಮೇಲಾಟ ನಡೆಯುತ್ತಿದ್ದರೂ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುವ ವ್ಯರ್ಥ ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಪ್ರಭಾವೀ ನಾಯಕನಿಂದಲೇ ಇದೆಲ್ಲಾ ನಡೆದಿದೆ. ಅದೆಷ್ಟೋ ಎಸ್‌ಐಟಿ, ಕಮಿಟಿ, ಸಮಿತಿ ಎಲ್ಲಾ ಮಾಡಿದ್ದಿರಲ್ಲ? ಅವೆಲ್ಲವೂ ಏನಾದವು? ಬಾಯಿ ಬಿಟ್ಟರೆ ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತಾರೆ. ಆದರೆ, ನುಡಿದಂತೆ ನಡೆಯಲು ಎಷ್ಟು ತೆರಿಗೆ ಹಾಕಿದ್ದಾರೆ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ
ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ